Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 6:1-8

ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ

ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು. ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು. ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು. ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.

ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.

ಯಜ್ಞವೇದಿಕೆಯ ಮೇಲೆ ಬೆಂಕಿ ಇತ್ತು. ಸೆರಾಫಿಯರಲ್ಲೊಬ್ಬನು ಇಕ್ಕುಳಿಯಲ್ಲಿ ಬೆಂಕಿಯೊಳಗಿಂದ ಉರಿಯುವ ಕೆಂಡವನ್ನು ತೆಗೆದು ನನ್ನ ಬಳಿಗೆ ಹಾರಿಬಂದನು. ಆ ಸೆರಾಫಿಯನು ಉರಿಯುವ ಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿದನು. ಆಗ ಆ ದೂತನು, “ಇಗೋ, ಈ ಉರಿಯುವ ಕೆಂಡವು ನಿನ್ನ ತುಟಿಗಳಿಗೆ ತಗಲಿದ್ದರಿಂದ ನೀನು ಮಾಡಿದ ಕೆಟ್ಟಕಾರ್ಯಗಳೆಲ್ಲಾ ನಿನ್ನಿಂದ ತೊಲಗಿ ಹೋದವು. ಈಗ ನಿನ್ನ ಪಾಪವು ಅಳಿಸಿಹಾಕಲ್ಪಟ್ಟಿದೆ”[a] ಎಂದು ಹೇಳಿದನು.

ಆಗ ನಾನು ನನ್ನ ಒಡೆಯನಾದ ಯೆಹೋವನ ಸ್ವರವನ್ನು ಕೇಳಿದೆನು. ಆತನು, “ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುವರು?” ಎಂದು ಕೇಳಿದನು.

ಆಗ ನಾನು, “ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದೆನು.

ಕೀರ್ತನೆಗಳು 29

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

ರೋಮ್ನಗರದವರಿಗೆ 8:12-17

12 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ನಾವು ನಮ್ಮ ಪಾಪಾಧೀನಸ್ವಭಾವದ ಆಳ್ವಿಕೆಗೆ ಒಳಗಾಗಿರಬಾರದು. ನಮ್ಮ ಪಾಪಸ್ವಭಾವದ ಬಯಕೆಗನುಸಾರವಾಗಿ ನಾವು ಜೀವಿಸಕೂಡದು. 13 ನಿಮ್ಮ ಪಾಪಸ್ವಭಾವವು ಬಯಸುವ ಕೆಟ್ಟಕಾರ್ಯಗಳನ್ನು ಮಾಡುವುದಕ್ಕಾಗಿ ನೀವು ನಿಮ್ಮ ಜೀವಿತವನ್ನು ಉಪಯೋಗಿಸಿದರೆ, ನೀವು ಆತ್ಮಿಕವಾಗಿ ಸಾಯುವಿರಿ. ಆದರೆ ನೀವು ನಿಮ್ಮ ದೇಹದ ಮೂಲಕವಾಗಿ ಮಾಡುವ ಕೆಟ್ಟಕಾರ್ಯಗಳನ್ನು ಪವಿತ್ರಾತ್ಮನ ಸಹಾಯದಿಂದ ನಿಲ್ಲಿಸಿದರೆ ಹೊಸ ಜೀವಿತವನ್ನು ಹೊಂದಿಕೊಳ್ಳುವಿರಿ.

14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

ಯೋಹಾನ 3:1-17

ಯೇಸು ಮತ್ತು ನಿಕೊದೇಮ

ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.

ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.

ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.

ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.

ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.

10 ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12 ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.

14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.

16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International