Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 33:12-22

12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
    ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
    ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
    ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
    ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
    ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
    ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
    ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
    ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
    ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
    ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
    ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.

ಯೋಬನು 37:1-13

37 “ಗುಡುಗು ಮಿಂಚುಗಳು ನನ್ನನ್ನು ಭಯಗೊಳಿಸಿವೆ.
    ನನ್ನ ಹೃದಯವು ಢವಢವನೆ ಬಡಿದುಕೊಳ್ಳುತ್ತಿದೆ.
ಪ್ರತಿಯೊಬ್ಬರೂ ಕೇಳಿರಿ! ದೇವರ ಧ್ವನಿಯು ಗುಡುಗಿನ ಧ್ವನಿಯಂತಿದೆ.
    ಆತನ ಬಾಯಿಂದ ಬರುವ ಗುಡುಗುಟ್ಟುವ ಧ್ವನಿಯನ್ನು ಕೇಳಿರಿ.
ಇಡೀ ಆಕಾಶಮಂಡಲದಲ್ಲೆಲ್ಲಾ ಪ್ರಕಾಶಿಸಲೆಂದು ದೇವರು ತನ್ನ ಸಿಡಿಲನ್ನು ಕಳುಹಿಸುವನು.
    ಅದು ಭೂಮಿಯ ಮೇಲೆಲ್ಲಾ ಪ್ರಕಾಶಿಸುವುದು.
ಸಿಡಿಲು ಪ್ರಕಾಶಿಸಿದ ನಂತರ ದೇವರ ಗರ್ಜನೆಯು ಕೇಳಿಬರುವುದು.
    ಆತನು ತನ್ನ ಆಶ್ಚರ್ಯಕರವಾದ ಧ್ವನಿಯಿಂದ ಗುಡುಗುಟ್ಟುವನು!
ಸಿಡಿಲು ಪ್ರಕಾಶಿಸುವಾಗ ಆತನ ಧ್ವನಿಯು ಗುಡುಗುಟ್ಟುವುದು!
ದೇವರ ಗುಡುಗುಟ್ಟುವ ಧ್ವನಿಯು ಆಶ್ಚರ್ಯಕರವಾಗಿದೆ!
    ನಾವು ಅರ್ಥಮಾಡಿಕೊಳ್ಳಲಾಗದ ಮಹಾಕಾರ್ಯಗಳನ್ನು ಆತನು ಮಾಡುತ್ತಾನೆ.
ಆತನು ಹಿಮಕ್ಕೆ,
    ‘ಭೂಮಿಯ ಮೇಲೆ ಬೀಳು’ ಎಂತಲೂ
ಮಳೆಗೆ,
    ‘ಭೂಮಿಯ ಮೇಲೆ ಸುರಿ’ ಎಂತಲೂ ಆಜ್ಞಾಪಿಸುವನು.
ದೇವರು ತನ್ನ ಕಾರ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು
    ಪ್ರತಿಯೊಬ್ಬರನ್ನು ಮನೆಯೊಳಗೆ ಕೂಡಿಹಾಕುತ್ತಾನೆ.[a]
ಪ್ರಾಣಿಗಳು ಓಡಿಹೋಗಿ ತಮ್ಮ ಗುಹೆಗಳಲ್ಲಿ ಸೇರಿಕೊಳ್ಳುತ್ತವೆ.
ದಕ್ಷಿಣ ದಿಕ್ಕಿನಿಂದ ಬಿರುಗಾಳಿಯೂ
    ಉತ್ತರ ದಿಕ್ಕಿನಿಂದ ಚಳಿಗಾಳಿಯೂ ಬರುತ್ತವೆ.
10 ದೇವರ ಉಸಿರು ನೀರನ್ನು ಮಂಜನ್ನಾಗಿ ಮಾಡಿ
    ಸಾಗರಗಳನ್ನು ಹೆಪ್ಪುಗಟ್ಟಿಸುವುದು.
11 ದೇವರು ಮೋಡಗಳಲ್ಲಿ ನೀರು ತುಂಬಿಸುವನು.
    ಆತನು ತನ್ನ ಮಿಂಚನ್ನು ಮೋಡಗಳಲ್ಲೆಲ್ಲಾ ಹರಡುವನು.
12 ಭೂಮಂಡಲದಲ್ಲೆಲ್ಲಾ ಚಲಿಸಲು ದೇವರು ಮೋಡಗಳಿಗೆ ಆಜ್ಞಾಪಿಸುವನು.
    ಮೋಡಗಳು ಆತನ ಆಜ್ಞೆಗನುಸಾರವಾಗಿ ಮಾಡುತ್ತವೆ.
13 ದೇವರು ಜನರನ್ನು ದಂಡಿಸುವುದಕ್ಕಾಗಲಿ
    ನೀರನ್ನು ಒದಗಿಸುವ ಮೂಲಕ ತನ್ನ ನಿರಂತರ ಪ್ರೀತಿಯನ್ನು ತೋರಿಸುವುದಕ್ಕಾಗಲಿ ಮೋಡಗಳನ್ನು ಬರಮಾಡುವನು.

1 ಕೊರಿಂಥದವರಿಗೆ 15:50-57

50 ಸಹೋದರ ಸಹೋದರಿಯರೇ, ನಾನು ಹೇಳುವುದೇನೆಂದರೆ, ಮಾಂಸ ಮತ್ತು ರಕ್ತ (ಭೌತಿಕ ದೇಹ) ಪರಲೋಕ ರಾಜ್ಯದಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. ನಾಶವಾಗುವಂಥದ್ದು ಎಂದಿಗೂ ನಾಶವಾಗದ ಒಂದರಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. 51 ಆದರೆ ಕೇಳಿರಿ, ನಾನು ನಿಮಗೆ ಈ ರಹಸ್ಯವೊಂದನ್ನು ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಆದರೆ ನಾವೆಲ್ಲರೂ ಮಾರ್ಪಾಟಾಗುವೆವು. 52 ಇದಕ್ಕೆ ಕೇವಲ ಒಂದು ಕ್ಷಣಕಾಲ ಸಾಕು. ರೆಪ್ಪೆಬಡಿಯುವಷ್ಟು ವೇಗವಾಗಿ ನಾವು ಮಾರ್ಪಾಟಾಗುವೆವು. ಕಡೇ ತುತ್ತೂರಿಯನ್ನು ಊದಿದಾಗ ಇದು ಸಂಭವಿಸುವುದು. ತುತ್ತೂರಿಯನ್ನು ಊದಲಾಗುವುದು; ಆಗ ಸತ್ತುಹೋಗಿದ್ದ ವಿಶ್ವಾಸಿಗಳು ಸದಾಕಾಲ ಜೀವಿಸುವುದಕ್ಕಾಗಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಾಟಾಗುವೆವು. 53 ಅಳಿದುಹೋಗುವ ಈ ದೇಹವು ಅಳಿದುಹೋಗದ್ದನ್ನು ಧರಿಸಿಕೊಳ್ಳುವುದು. ಮರಣಾಧೀನವಾದ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು. 54 ಅಳಿದುಹೋಗುವ ಈ ದೇಹ ಅಮರತ್ವವನ್ನು ಧರಿಸಿಕೊಂಡಾಗ ಪವಿತ್ರಗ್ರಂಥದ ಈ ಮಾತುಗಳು ನೆರವೇರುತ್ತವೆ:

“ಮರಣವು ಜಯದಲ್ಲಿ ನುಂಗಿಯೇಹೋಯಿತು.”(A)

55 “ಮರಣವೇ, ನಿನ್ನ ಜಯವೆಲ್ಲಿ?
ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?”(B)

56 ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ. 57 ಆದರೆ ನಾವು ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನು ನಮಗೆ ಜಯವನ್ನು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International