Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 29

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

ಯೆಶಾಯ 1:1-4

ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಯೆಹೂದ ಮತ್ತು ಜೆರುಸಲೇಮಿನಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ದೇವರು ಯೆಶಾಯನಿಗೆ ಈ ದರ್ಶನ ನೀಡಿದನು; ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಯೆಶಾಯನಿಗೆ ಈ ದರ್ಶನವಾಯಿತು.

ಸ್ವಜನರ ವಿರುದ್ಧವಾಗಿ ದೇವರ ದೂರು

ಭೂಮ್ಯಾಕಾಶಗಳೇ, ಯೆಹೋವನ ಮಾತನ್ನು ಆಲಿಸಿರಿ! ಯೆಹೋವನು ಹೇಳುತ್ತಿದ್ದಾನೆ:

“ನಾನು ಸಾಕಿ ಸಲಹಿದ ಮಕ್ಕಳೇ
    ನನಗೆ ದ್ರೋಹಮಾಡಿದ್ದಾರೆ.
ಎತ್ತು ತನ್ನ ದಣಿಯನ್ನು ತಿಳಿದದೆ;
    ಕತ್ತೆಯು ತನ್ನ ದಣಿಯ ಕೊಟ್ಟಿಗೆಯನ್ನು ತಿಳಿದದೆ.
ಆದರೆ ಇಸ್ರೇಲರು ನನ್ನನ್ನು ತಿಳಿದೇ ಇಲ್ಲ.
    ನನ್ನ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ.”

ಇಸ್ರೇಲ್ ದೇಶವು ಪಾಪದಿಂದ ತುಂಬಿಹೋಗಿದೆ; ಅವರ ಪಾಪವೇ ಅವರಿಗೆ ಭಾರವಾದ ಹೊರೆಯಾಗಿದೆ; ಅವರು ದುಷ್ಟಕುಟುಂಬಗಳ ಕೆಟ್ಟಮಕ್ಕಳಂತಿದ್ದಾರೆ. ಅವರು ಯೆಹೋವನನ್ನು ತ್ಯಜಿಸಿದ್ದಾರೆ; ಇಸ್ರೇಲಿನ ಪರಿಶುದ್ಧ ದೇವರನ್ನು ಅವಮಾನಪಡಿಸಿದ್ದಾರೆ; ಅವರು ಆತನನ್ನು ತೊರೆದು ಅಪರಿಚಿತನೋ ಎಂಬಂತೆ ಪರಿಗಣಿಸಿದ್ದಾರೆ.

ಯೆಶಾಯ 1:16-20

16 “ನಿಮ್ಮನ್ನು ಶುದ್ಧಿಮಾಡಿಕೊಳ್ಳಿರಿ; ಶುಚಿಪಡಿಸಿಕೊಳ್ಳಿರಿ. ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ; ಅವುಗಳನ್ನು ನೋಡಲು ನನಗೆ ಮನಸ್ಸಿಲ್ಲ. ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಿರಿ; 17 ಒಳ್ಳೆಯದನ್ನೇ ಮಾಡಲು ಅಭ್ಯಾಸಮಾಡಿಕೊಳ್ಳಿರಿ. ಬೇರೆಯವರೊಂದಿಗೆ ನ್ಯಾಯವಂತರಾಗಿರಿ; ಕೆಡುಕರಿಗೆ ದಂಡನೆ ವಿಧಿಸಿರಿ; ಅನಾಥರಿಗೆ ಸಹಾಯಮಾಡಿರಿ; ವಿಧವೆಯರಿಗೂ ಸಹಾಯಮಾಡಿರಿ.”

18 ಯೆಹೋವನು ಹೀಗೆನ್ನುತ್ತಾನೆ: “ಬನ್ನಿರಿ, ನಾವು ಚರ್ಚೆ ಮಾಡೋಣ. ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಅವುಗಳನ್ನು ತೊಳೆದಾಗ ನೀವು ಹಿಮದಂತೆ ಬಿಳುಪಾಗುವಿರಿ. ನಿಮ್ಮ ಪಾಪಗಳು ಕಿರಮಂಜಿಬಣ್ಣವಾಗಿದ್ದರೂ ನೀವು ಉಣ್ಣೆಯಂತೆ ಬೆಳ್ಳಗಾಗುವಿರಿ.

19 “ನೀವು ನನ್ನ ಮಾತನ್ನು ಕೇಳಿದರೆ ನಿಮ್ಮ ದೇಶದ ಉತ್ತಮ ಫಸಲುಗಳಿಂದ ಆನಂದಿಸುವಿರಿ. 20 ನನ್ನ ಮಾತುಗಳನ್ನು ಕೇಳದೆ ಹೋದರೆ ನೀವು ನನಗೆ ವಿರೋಧಿಗಳಾಗಿದ್ದೀರಿ. ನಿಮ್ಮ ವೈರಿಯು ನಿಮ್ಮನ್ನು ನಾಶಮಾಡುವನು.”

ಯೋಹೋವನೇ ಇವುಗಳನ್ನು ನುಡಿದಿದ್ದಾನೆ.

ರೋಮ್ನಗರದವರಿಗೆ 8:1-8

ಪವಿತ್ರಾತ್ಮನಿಗೆ ಅಧೀನವಾದ ಜೀವಿತ

ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.

ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International