Revised Common Lectionary (Semicontinuous)
ರಚನೆಗಾರರು: ಕೋರಹೀಯರು.
47 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ;
ದೇವರಿಗೆ ಆನಂದಘೋಷ ಮಾಡಿರಿ!
2 ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ.
ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ.
3 ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ
ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ.
4 ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು;
ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು.
5 ಯೆಹೋವನು ಆನಂದಘೋಷದೊಡನೆಯೂ
ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು.
6 ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ.
ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ.
7 ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ;
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
8 ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ;
ದೇವರು ಎಲ್ಲಾ ಜನಾಂಗಗಳನ್ನು ಆಳುವನು.
9 ಜನಾಂಗಗಳ ನಾಯಕರು
ಅಬ್ರಹಾಮನ ದೇವಜನರೊಡನೆ ಕೂಡಿಬರುವರು.
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ.
ದೇವರು ಅವರಿಗೆ ಸರ್ವಾಧಿಕಾರಿ!
ಮೋಶೆಯು ದೇವರನ್ನು ಭೇಟಿಯಾದದ್ದು
15 ಬಳಿಕ ಮೋಶೆ ಬೆಟ್ಟದ ಮೇಲಕ್ಕೆ ಹೋದನು. ಮೋಡವು ಬೆಟ್ಟವನ್ನು ಕವಿದುಕೊಂಡಿತ್ತು. 16 ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದೊಳಗಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು. 17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.
18 ಬಳಿಕ ಮೋಶೆಯು ಮೋಡದಲ್ಲಿ ಬೆಟ್ಟದ ಮೇಲೆ ಇನ್ನೂ ಎತ್ತರಕ್ಕೆ ಹೋದನು. ಮೋಶೆಯು ಬೆಟ್ಟದಲ್ಲಿ ಹಗಲಿರುಳು ನಲವತ್ತು ದಿವಸ ಇದ್ದನು.
9 ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. 10 ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. 11 ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು.
12 ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. 13 ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ[a] ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14 ಆತನ ತಲೆಕೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; 15 ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. 16 ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು.
17 ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. 18 ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ.
Kannada Holy Bible: Easy-to-Read Version. All rights reserved. © 1997 Bible League International