Revised Common Lectionary (Semicontinuous)
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.
6 “ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ.
ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
7 ನೀನು ಅತ್ಯಧಿಕ ಮಹತ್ವವುಳ್ಳವನಾಗಿ,
ನಿನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ.
ಬೆಂಕಿಯು ಹುಲ್ಲನ್ನು ಸುಡುವಂತೆ
ನಿನ್ನ ಕೋಪವು ಅವರನ್ನು ನಾಶಮಾಡಿತು.
8 ನೀನು ಊದಿದ ಮಹಾಗಾಳಿಯಿಂದ
ನೀರು ಒತ್ತಟ್ಟಿಗೆ ಸೇರಿತು.
ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು.
ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.
9 “‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು;
ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು.
ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು.
ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’
ಎಂದುಕೊಂಡರು ವೈರಿಗಳು.
10 ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ
ಸಮುದ್ರವು ಅವರನ್ನು ಮುಚ್ಚಿಕೊಂಡಿತು;
ಅವರು ಸೀಸದಂತೆ
ಅಗಾಧವಾದ ಸಮುದ್ರದಲ್ಲಿ ಮುಳುಗಿದರು.
11 “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು?
ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು.
ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ.
ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.
ಪವಿತ್ರಾತ್ಮನ ಬಗ್ಗೆ ಉಪದೇಶ
37 ಹಬ್ಬದ ಕೊನೆಯ ದಿನ ಬಂದಿತು. ಅದು ಅತ್ಯಂತ ಮುಖ್ಯವಾದ ದಿನವಾಗಿತ್ತು. ಅಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನಲ್ಲಿ ನಂಬಿಕೆ ಇಡುವವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತವೆ. ಪವಿತ್ರ ಗ್ರಂಥವು ತಿಳಿಸುವುದು ಇದನ್ನೇ” ಎಂದು ಗಟ್ಟಿಯಾಗಿ ಹೇಳಿದನು. 39 ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮನನ್ನು ಕುರಿತು ಹೇಳಿದನು. ಆತನು ಇನ್ನೂ ತನ್ನ ಮಹಿಮೆಯನ್ನು ಹೊಂದಿಲ್ಲದಿದ್ದ ಕಾರಣ ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International