Revised Common Lectionary (Semicontinuous)
ರಚನೆಗಾರರು: ಕೋರಹೀಯರು.
47 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ;
ದೇವರಿಗೆ ಆನಂದಘೋಷ ಮಾಡಿರಿ!
2 ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ.
ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ.
3 ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ
ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ.
4 ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು;
ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು.
5 ಯೆಹೋವನು ಆನಂದಘೋಷದೊಡನೆಯೂ
ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು.
6 ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ.
ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ.
7 ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ;
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
8 ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ;
ದೇವರು ಎಲ್ಲಾ ಜನಾಂಗಗಳನ್ನು ಆಳುವನು.
9 ಜನಾಂಗಗಳ ನಾಯಕರು
ಅಬ್ರಹಾಮನ ದೇವಜನರೊಡನೆ ಕೂಡಿಬರುವರು.
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ.
ದೇವರು ಅವರಿಗೆ ಸರ್ವಾಧಿಕಾರಿ!
ಮೋಶೆಯ ಮರಣ
34 ಮೋಶೆಯು ನೆಬೋ ಬೆಟ್ಟವನ್ನು ಹತ್ತಿದನು. ಅವನು ಮೋವಾಬಿನ ಜೋರ್ಡನ್ ಕಣಿವೆಯಿಂದ ಪಿಸ್ಗಾ ಬೆಟ್ಟದ ಮೇಲಕ್ಕೆ ಬಂದನು. ಇದು ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ಜೆರಿಕೊ ಊರಿನ ಎದುರಿನಲ್ಲಿದೆ. ಯೆಹೋವನು ಮೋಶೆಗೆ ಗಿಲ್ಯಾದಿನಿಂದ ದಾನ್‌ವರೆಗಿದ್ದ ಎಲ್ಲಾ ಪ್ರದೇಶವನ್ನು ತೋರಿಸಿದನು. 2 ಮೋಶೆಗೆ ಯೆಹೋವನು ನಫ್ತಾಲಿ, ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳನ್ನು ತೋರಿಸಿದನು. ಯೆಹೂದ ಪ್ರಾಂತ್ಯವನ್ನು ಮೆಡಿಟರೇನಿಯನ್ ಸಮುದ್ರದವರೆಗೂ ತೋರಿಸಿದನು. 3 ಯೆಹೋವನು ಮೋಶೆಗೆ ನೆಗೆವ್ ಮತ್ತು ಚೋಗರೂರಿನಿಂದ ಖರ್ಜೂರದ ಮರಗಳ ಪಟ್ಟಣವಾದ ಜೆರಿಕೊ ಪಟ್ಟಣದವರೆಗಿರುವ ಕಣಿವೆಯನ್ನು ತೋರಿಸಿದನು. 4 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಈ ದೇಶವನ್ನು ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ವಾಗ್ದಾನ ಮಾಡಿದ್ದೇನೆ. ನಿಮ್ಮ ಸಂತತಿಯವರಿಗೆ ನಾನು ಈ ದೇಶವನ್ನು ಕೊಡುವೆನು ಎಂದು ಹೇಳಿದ್ದೆನು. ಆ ದೇಶವನ್ನು ನೀನು ನೋಡುವಂತೆ ಮಾಡಿದೆನು. ಆದರೆ ನೀನು ಅದರೊಳಗೆ ಪ್ರವೇಶಿಸುವುದಿಲ್ಲ.”
5 ಮೋವಾಬ್ ದೇಶದಲ್ಲಿ ಯೆಹೋವನ ಸೇವಕನಾದ ಮೋಶೆಯು ಸತ್ತುಹೋದನು. ಯೆಹೋವನು ಅವನಿಗೆ ಹಾಗೆ ಆಗುತ್ತದೆಂದು ಮುಂಚೆಯೇ ತಿಳಿಸಿದ್ದನು. 6 ಯೆಹೋವನು ಮೋಶೆಯನ್ನು ಮೋವಾಬ್‌ನಲ್ಲಿ ಹೂಳಿಟ್ಟನು. ಇದು ಬೇತ್ಪೆಗೋರ್ ತಗ್ಗಿಗೆ ಎದುರಾಗಿದೆ. ಆದರೆ ಮೋಶೆಯನ್ನು ಸಮಾಧಿಮಾಡಿದ ಸ್ಥಳವು ಇದುವರೆಗೆ ಯಾರಿಗೂ ಗೊತ್ತಾಗಲಿಲ್ಲ. 7 ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನು ಸಾಯುವ ತನಕ ಬಲಶಾಲಿಯಾಗಿಯೇ ಇದ್ದನು. ಅವನ ಕಣ್ಣು ಮೊಬ್ಬಾಗಿರಲಿಲ್ಲ.
4 ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ.
ಪವಿತ್ರಾತ್ಮನ ಕಾರ್ಯ
“ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು. 5 ಈಗಲಾದರೋ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತಿದ್ದೇನೆ. ಆದರೆ ನಿಮ್ಮಲ್ಲಿ ಒಬ್ಬರಾದರೂ, ‘ನೀನು ಎಲ್ಲಿಗೆ ಹೋಗುತ್ತಿರುವೆ?’ ಎಂದು ನನ್ನನ್ನು ಕೇಳಲಿಲ್ಲ. 6 ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದರಿಂದ ನಿಮ್ಮ ಹೃದಯಗಳು ದುಃಖದಿಂದ ತುಂಬಿಹೋಗಿವೆ. 7 ಆದರೆ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನಾನು ಹೋಗುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಏಕೆಂದರೆ ನಾನು ಹೋಗಿ ಸಹಾಯಕನನ್ನು ನಿಮ್ಮ ಬಳಿಗೆ ಕಳುಹಿಸುವೆನು. ನಾನು ಹೋಗದಿದ್ದರೆ, ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ.
8 “ಸಹಾಯಕನು ಬಂದು ಪಾಪ, ನೀತಿ, ನ್ಯಾಯತೀರ್ಪು ಈ ವಿಷಯಗಳ ಬಗ್ಗೆ ಲೋಕಕ್ಕೆ ತಿಳಿಸಿಕೊಡುವನು. 9 ನನ್ನನ್ನು ನಂಬದಿರುವುದರಿಂದ ಜನರಲ್ಲಿ ಪಾಪವಿದೆಯೆಂದು ಆ ಸಹಾಯಕನು ನಿರೂಪಿಸುವನು. 10 ನಾನು ತಂದೆಯ ಬಳಿಗೆ ಹೋಗುವುದರಿಂದ ನೀತಿಯ ವಿಷಯವಾಗಿಯೂ ಆತನು ಜನರಿಗೆ ನಿರೂಪಿಸುವನು. ಇನ್ನು ಮೇಲೆ ನೀವು ನನ್ನನ್ನು ನೋಡುವುದಿಲ್ಲ. 11 ನ್ಯಾಯತೀರ್ಪಿನ ಕುರಿತಾದ ಸತ್ಯವನ್ನು ಆ ಸಹಾಯಕನು ಈ ಲೋಕಕ್ಕೆ ಸಾಧರಪಡಿಸುವನು, ಏಕೆಂದರೆ ಈ ಲೋಕದ ಅಧಿಪತಿಗೆ ಈಗಾಗಲೇ ನ್ಯಾಯತೀರ್ಪಾಗಿದೆ.
Kannada Holy Bible: Easy-to-Read Version. All rights reserved. © 1997 Bible League International