Revised Common Lectionary (Semicontinuous)
115 ಯೆಹೋವನೇ, ಘನಮಾನಗಳು ನಮ್ಮವಲ್ಲ!
ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
2 ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
3 ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
4 ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
ಅವುಗಳನ್ನು ಮಾಡಿದವರು ಮನುಷ್ಯರೇ.
5 ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
ಕಣ್ಣುಗಳಿವೆ, ಆದರೆ ನೋಡಲಾರವು.
6 ಕಿವಿಗಳಿವೆ, ಆದರೆ ಕೇಳಲಾರವು.
ಮೂಗುಗಳಿವೆ, ಆದರೆ ಮೂಸಲಾರವು.
7 ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
ಕಾಲುಗಳಿವೆ, ಆದರೆ ನಡೆಯಲಾರವು.
ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
8 ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.
9 ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.
14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15 ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!
ಯೆಹೋವನಿಗೆ ಸ್ತೋತ್ರ!
ಲೇವಿಯರ ಶುದ್ಧೀಕರಣ
5 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 6 “ಇಸ್ರೇಲರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸು. 7 ಅವರನ್ನು ಶುದ್ಧೀಕರಿಸುವ ಕ್ರಮ ಹೇಗೆಂದರೆ, ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮಿಕಿಸಬೇಕು. ಬಳಿಕ ಅವರು ಸರ್ವಾಂಗಕ್ಷೌರ ಮಾಡಿಸಿಕೊಂಡು ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಹೀಗೆ ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು.
8 “ತರುವಾಯ ಲೇವಿಯರು ಸರ್ವಾಂಗಹೋಮಕ್ಕಾಗಿ ಒಂದು ಎಳೆಹೋರಿಯನ್ನು ಮತ್ತು ಅದರೊಡನೆ ಸಮರ್ಪಿಸಬೇಕಾದ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಯಹಿಟ್ಟನ್ನು ತೆಗೆದುಕೊಂಡು ಬರಬೇಕು; ನೀನು ಅವರಿಂದ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಎಳೆಹೋರಿಯನ್ನು ತೆಗೆದುಕೊಳ್ಳಬೇಕು. 9 ಲೇವಿಯರನ್ನು ದೇವದರ್ಶನಗುಡಾರದ ಮುಂಭಾಗಕ್ಕೆ ಕರೆದುಕೊಂಡು ಬಂದು ಇಸ್ರೇಲರನ್ನು ಒಟ್ಟಾಗಿ ಸೇರಿಸು. 10 ನೀನು ಲೇವಿಯರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದಾಗ ಇಸ್ರೇಲರು ತಮ್ಮ ಕೈಗಳನ್ನು ಅವರ ತಲೆಯ ಮೇಲಿಡುವರು. 11 ಆಗ ಆರೋನನು ಲೇವಿಯರನ್ನು ಯೆಹೋವನಿಗೆ ಇಸ್ರೇಲರ ಕಾಣಿಕೆಯಾಗಿ ಕೊಡುವನು. ಈ ರೀತಿಯಾಗಿ ಲೇವಿಯರು ಯೆಹೋವನ ಪರಿಚರ್ಯ ಕೆಲಸಕ್ಕಾಗಿ ಸಿದ್ಧರಾಗುವರು.
12 “ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟ ನಂತರ, ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ ಸರ್ವಾಂಗಹೋಮವಾಗಿ ಇನ್ನೊಂದು ಹೋರಿಯನ್ನೂ ಸಮರ್ಪಿಸಬೇಕು. ಇವು ಲೇವಿಯರಿಗೆ ನೈವೇದ್ಯದ ಸಮರ್ಪಣೆಗಳಾಗಿವೆ. 13 ಈ ರೀತಿಯಲ್ಲಿ ನೀನು ಲೇವಿಯರನ್ನು ಆರೋನ ಮತ್ತು ಅವನ ಪುತ್ರರ ಅಧೀನದಲ್ಲಿ ಸೇವೆ ಮಾಡುವಂತೆ ಮಾಡುವೆ ಮತ್ತು ಲೇವಿಯರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಸಲ್ಲಿಸುವೆ. 14 ನೀನು ಲೇವಿಯರನ್ನು ಇತರ ಇಸ್ರೇಲರಿಂದ ಪ್ರತ್ಯೇಕಿಸಬೇಕು. ಲೇವಿಯರು ನನ್ನ ಆಸ್ತಿಯಾಗಿದ್ದಾರೆ.
15 “ನೀನು ಲೇವಿಯರನ್ನು ಶುದ್ಧೀಕರಿಸಿ ಅವರನ್ನು ವಿಶೇಷ ಕೊಡುಗೆಯಾಗಿ ನನಗೆ ಕೊಟ್ಟ ಮೇಲೆ, ಅವರು ಬಂದು ದೇವದರ್ಶನಗುಡಾರದ ಕೆಲಸವನ್ನು ಮಾಡಬಹುದು. 16 ಯಾಕೆಂದರೆ ಲೇವಿಯರು ಇಸ್ರೇಲರ ಮಧ್ಯದಿಂದ ನನಗಾಗಿ ಸಂಪೂರ್ಣವಾಗಿ ಪ್ರತಿಷ್ಠಿತರಾಗಿದ್ದಾರೆ. ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ. 17 ಇಸ್ರೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಗಳೂ ನನ್ನ ಸ್ವತ್ತಾಗಿರುವರು. ಈಜಿಪ್ಟ್ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲ ನಾನು ಸಂಹರಿಸಿದಾಗ ಇಸ್ರೇಲರ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನಲ್ಲಾ. 18 ಆದರೆ ಈಗ ನಾನು ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಳ್ಳುವೆನು. 19 ಇಸ್ರೇಲರ ಮಧ್ಯದಿಂದ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ ಮತ್ತು ದೇವದರ್ಶನಗುಡಾರದಲ್ಲಿ ಇಸ್ರೇಲರ ಪರವಾಗಿ ಕೆಲಸ ಮಾಡಲೂ ಮತ್ತು ಇಸ್ರೇಲರಿಗೆ ದೋಷಪರಿಹಾರ ಮಾಡುವುದಕ್ಕೂ ನಾನು ಅವರನ್ನು ಆರೋನ ಮತ್ತು ಅವನ ಪುತ್ರರಿಗೆ ಒಪ್ಪಿಸಿಕೊಟ್ಟಿದ್ದೇನೆ. ಇಸ್ರೇಲರನ್ನು ಶುದ್ಧಿಗೊಳಿಸುವ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಅವರು ಸಹಾಯ ಮಾಡುವರು. ಹೀಗಿರುವುದರಿಂದ ಇಸ್ರೇಲರು ಪವಿತ್ರವಸ್ತುಗಳ ಅತೀ ಸಮೀಪಕ್ಕೆ ಬಂದರೂ ಅವರಿಗೆ ಅಪಾಯವು ಸಂಭವಿಸುವುದಿಲ್ಲ.”
20 ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆ ಮೋಶೆ ಆರೋನರೂ ಇಸ್ರೇಲರ ಸಮೂಹದವರೆಲ್ಲರೂ ಮಾಡಿದರು. 21 ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಬಳಿಕ ಆರೋನನು ಅವರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಕೊಟ್ಟನು. ಆರೋನನು ಅವರನ್ನು ಶುದ್ಧೀಕರಿಸುವುದಕ್ಕಾಗಿ ದೋಷಪರಿಹಾರ ಮಾಡಿದನು. 22 ಆಗ ಲೇವಿಯರು ದೇವದರ್ಶನಗುಡಾರದಲ್ಲಿ ಆರೋನನ ಮತ್ತು ಅವನ ಪುತ್ರರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅರ್ಹರಾದರು. ಯೆಹೋವನು ಮೋಶೆಗೆ ಲೇವಿಯರ ಬಗ್ಗೆ ಆಜ್ಞಾಪಿಸಿದ್ದಂತೆಯೇ ಅವರಿಗೆ ಮಾಡಲಾಯಿತು.
1 ದೇವರ ಸೇವಕನಾದ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ದೇವರು ಆರಿಸಿಕೊಂಡ ಜನರ ನಂಬಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಮತ್ತು ಅವರಿಗೆ ಸತ್ಯವನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಲಾಯಿತು. ದೇವರ ಸೇವೆಯನ್ನು ಹೇಗೆ ಮಾಡಬೇಕೆಂಬುದನ್ನು ಆ ಸತ್ಯವು ತೋರ್ಪಡಿಸುತ್ತಿದೆ. 2 ನಿತ್ಯಜೀವದ ಮೇಲೆ ನಮಗಿರುವ ನಿರೀಕ್ಷೆಯಿಂದಲೇ ಆ ನಂಬಿಕೆ ಮತ್ತು ಜ್ಞಾನಗಳು ಉಂಟಾಗಿವೆ. ನಿತ್ಯಜೀವವನ್ನು ಕೊಡುವುದಾಗಿ ದೇವರು ನಮಗೆ ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ್ದನು. ದೇವರು ಸುಳ್ಳು ಹೇಳುವುದಿಲ್ಲ. 3 ತಕ್ಕಕಾಲ ಬಂದಾಗ ದೇವರು ಆ ನಿತ್ಯಜೀವವನ್ನು ಲೋಕಕ್ಕೆ ಪ್ರಕಟಿಸಿದನು. ನನಗೊಪ್ಪಿಸಿರುವ ಈ ಸಂದೇಶವನ್ನು ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರವಾಗಿ ಸಾರುತ್ತಿದ್ದೇನೆ.
4 ನಾನು ಈ ಪತ್ರವನ್ನು ತೀತನಿಗೆ ಬರೆಯುತ್ತಿದ್ದೇನೆ. ನಮ್ಮೆಲ್ಲರ ನಂಬಿಕೆಯ ಸಂಬಂಧದಲ್ಲಿ ನೀನು ನನಗೆ ನಿಜವಾದ ಮಗನಂತಿರುವೆ.
ನಮ್ಮ ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಲಭಿಸಲಿ.
ಕ್ರೇತದಲ್ಲಿ ತೀತನ ಕಾರ್ಯ
5 ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. 6 ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. 7 ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. 8 ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 9 ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.
Kannada Holy Bible: Easy-to-Read Version. All rights reserved. © 1997 Bible League International