Revised Common Lectionary (Semicontinuous)
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಮೋಶೆಯು ಜನರಿಗೆ ಹಾಡನ್ನು ಕಲಿಸಿದನು
44 ಮೋಶೆಯು ಈ ಹಾಡಿನ ಎಲ್ಲಾ ಪದಗಳನ್ನು ಇಸ್ರೇಲರು ಕೇಳುವಂತೆ ಹೇಳಿದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಂಗಡ ಇದ್ದನು. 45 ಮೋಶೆಯು ಜನರಿಗೆ ಬೋಧಿಸಿದ ಬಳಿಕ 46 ಹೀಗೆ ಹೇಳಿದನು: “ನಾನು ಈ ದಿನ ಹೇಳಿದ ಎಲ್ಲಾ ಆಜ್ಞೆಗಳನ್ನು ಅನುಸರಿಸಲು ಜಾಗರೂಕರಾಗಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ ತಿಳಿಸಿ; ಕಟ್ಟಳೆಗಳನ್ನು ಸಂಪೂರ್ಣವಾಗಿ ಕೈಗೊಳ್ಳುವಂತೆ ಅವರಿಗೆ ಬೋಧಿಸಿರಿ, ಕಲಿಸಿರಿ. 47 ಈ ಬೋಧನೆಗಳು ಮುಖ್ಯವಾದವುಗಳಲ್ಲವೆಂದು ತಿಳಿಯಬೇಡಿ. ಅವು ನಿಮ್ಮ ಜೀವವಾಗಿವೆ. ನೀವು ತೆಗೆದುಕೊಳ್ಳಲು ಸಿದ್ಧವಾಗಿರುವ ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ದೇಶದಲ್ಲಿ ಈ ಉಪದೇಶಗಳ ಮೂಲಕ ಬಹುಕಾಲ ಬದುಕುವಿರಿ.”
42 ಯೇಸು ಎಲ್ಲಾ ಶಿಷ್ಯರನ್ನು ಒಟ್ಟಾಗಿ ಕರೆದು, “ಯೆಹೂದ್ಯರಲ್ಲದವರು ಅಧಿಪತಿಗಳನ್ನು ಹೊಂದಿದ್ದಾರೆ. ಆ ಅಧಿಪತಿಗಳು ಜನರ ಮೇಲೆ ತಮಗಿರುವ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆಂಬುದು ನಿಮಗೆ ತಿಳಿದಿದೆ. ಅವರ ಪ್ರಮುಖ ನಾಯಕರುಗಳು ಜನರ ಮೇಲೆ ತಮಗಿರುವ ಅಧಿಕಾರವನ್ನೆಲ್ಲಾ ಉಪಯೋಗಿಸಲು ಇಷ್ಟಪಡುತ್ತಾರೆ. 43 ಆದರೆ ನೀವು ಅವರಂತಾಗಬಾರದು. 44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು. 45 ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International