Revised Common Lectionary (Semicontinuous)
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಯೆಹೋವನೇ ಸೃಷ್ಟಿಕರ್ತ ಮತ್ತು ಆಡಳಿತಗಾರ
5 ನಿಜದೇವರಾದ ಯೆಹೋವನು ಹೀಗೆನ್ನುತ್ತಾನೆ: ಆಕಾಶವನ್ನು ನಿರ್ಮಿಸಿ ಅದನ್ನು ಭೂಮಿಯ ಮೇಲೆ ಹರಡಿದಾತನು ಯೆಹೋವನೇ. ಭೂಮಿಯ ಮೇಲಿರುವದನ್ನೆಲ್ಲಾ ಸೃಷ್ಟಿಸಿದಾತನು ಯೆಹೋವನೇ. ಭೂಮಿಯ ಮೇಲಿರುವ ಮನುಷ್ಯರಿಗೆಲ್ಲಾ ಜೀವಶ್ವಾಸವನ್ನು ಕೊಟ್ಟವನು ಆತನೇ. ಭೂಮಿಯ ಮೇಲೆ ನಡೆಯುವ ಪ್ರತಿಯೊಬ್ಬನಿಗೂ ಪ್ರಾಣವನ್ನು ಕೊಟ್ಟವನು ಆತನೇ.
6 “ಯೆಹೋವನೆಂಬ ನಾನು ನ್ಯಾಯವನ್ನು ಸ್ಥಾಪಿಸಲು ನಿನ್ನನ್ನು ಕರೆದೆನು.
ನಾನು ನಿನ್ನ ಕೈಗಳನ್ನು ಹಿಡಿದು ಸಂರಕ್ಷಿಸುವೆನು.
ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆ ನನ್ನಲ್ಲಿದೆಯೆಂಬುದಕ್ಕೆ ನೀನು ಗುರುತಾಗಿರುವೆ.
ಎಲ್ಲಾ ಜನರಿಗೆ ನೀನು ಹೊಳೆಯುವ ಪ್ರಕಾಶವಾಗಿರುವೆ.
7 ನೀನು ಕುರುಡರ ಕಣ್ಣುಗಳಿಗೆ ದೃಷ್ಟಿಯನ್ನು ಕೊಡುವೆ;
ಸೆರೆಮನೆಯಲ್ಲಿರುವ ಎಷ್ಟೋ ಜನರನ್ನು ನೀನು ಬಿಡಿಸುವೆ.
ಕತ್ತಲೆಯಲ್ಲಿ ವಾಸಿಸುವ ಎಷ್ಟೋ ಜನರನ್ನು ನೀನು ಸೆರೆಮನೆಯಿಂದ ಬಿಡಿಸುವೆ.
8 “ನಾನೇ ಕರ್ತನು.
ಯೆಹೋವನೆಂಬುದೇ ನನ್ನ ಹೆಸರು.
ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು.
ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳುದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.
9 ಇಗೋ, ಆದಿಯಲ್ಲಿಯೇ ಮುಂದಿನ ಸಂಗತಿಗಳನ್ನು ತಿಳಿಸಿದೆನು.
ಅವೆಲ್ಲವೂ ಸಂಭವಿಸಿದವು.
ಈಗ ಕೆಲವು ವಿಷಯಗಳು ನಿನಗೆ ಪ್ರಕಟಿಸುತ್ತೇನೆ;
ಸಂಭವಿಸುವ ಮೊದಲೇ ಅವುಗಳನ್ನು ನಿನಗೆ ತಿಳಿಸುವೆನು.”
ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ
34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು. 35 ತನ್ನನ್ನು ಆರಾಧಿಸುವ ನೀತಿವಂತರು ಯಾರೇ ಆಗಿದ್ದರೂ ಅವರನ್ನು ದೇವರು ಸ್ವೀಕರಿಸಿಕೊಳ್ಳುವನು. ಅವನು ಯಾವ ದೇಶದವನು ಎಂಬುದು ಮುಖ್ಯವಲ್ಲ. 36 ದೇವರು ಯೆಹೂದ್ಯ ಜನರೊಂದಿಗೆ ಮಾತಾಡಿದ್ದಾನೆ. ಯೇಸು ಕ್ರಿಸ್ತನ ಮೂಲಕವಾಗಿ ಶಾಂತಿ ಬಂದಿದೆ ಎಂಬ ಸುವಾರ್ತೆಯನ್ನು ದೇವರು ಅವರಿಗೆ ಕಳುಹಿಸಿದನು. ಯೇಸುವು ಎಲ್ಲಾ ಜನರಿಗೆ ಪ್ರಭುವಾಗಿದ್ದಾನೆ!
37 “ಜುದೇಯದಲ್ಲೆಲ್ಲಾ ಏನಾಯಿತೆಂಬುದು ನಿಮಗೆ ಗೊತ್ತಿದೆ. ಗಲಿಲಾಯದಲ್ಲಿ ಯೋಹಾನನು[a] ದೀಕ್ಷಾಸ್ನಾನದ ಬಗ್ಗೆ ಜನರಿಗೆ ಬೋಧಿಸಿದ ಮೇಲೆ ಅದು ಆರಂಭವಾಯಿತು. 38 ನಜರೇತಿನ ಯೇಸುವಿನ ಬಗ್ಗೆ ನಿಮಗೆ ಗೊತ್ತಿದೆ. ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಆತನನ್ನು ಅಭಿಷೇಕಿಸಿದನು. ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು. ದೇವರು ಯೇಸುವಿನೊಂದಿಗೆ ಇದ್ದನೆಂಬುದನ್ನು ಇದು ತೋರಿಸಿಕೊಟ್ಟಿತು.
39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು. 40 ಆದರೆ, ದೇವರು ಆತನನ್ನು ಮೂರನೆಯ ದಿನದಲ್ಲಿ ಜೀವಂತವಾಗಿ ಎಬ್ಬಿಸಿದನು! ಯೇಸುವನ್ನು ಸ್ಪಷ್ಟವಾಗಿ ನೋಡುವ ಅವಕಾಶವನ್ನು ದೇವರು ಜನರಿಗೆ ಒದಗಿಸಿಕೊಟ್ಟನು. 41 ಆದರೆ ಯೇಸುವು ಎಲ್ಲಾ ಜನರಿಗೆ ಕಾಣಿಸಿಕೊಳ್ಳಲಿಲ್ಲ. ದೇವರಿಂದ ಮೊದಲೇ ಸಾಕ್ಷಿಗಳಾಗಿ ಆಯ್ಕೆಗೊಂಡಿದ್ದವರು ಮಾತ್ರ ಆತನನ್ನು ಕಂಡರು! ನಾವೇ ಆ ಸಾಕ್ಷಿಗಳು! ಯೇಸು ಜೀವಂತವಾಗಿ ಎದ್ದುಬಂದ ಮೇಲೆ ನಾವು ಆತನೊಂದಿಗೆ ಊಟ ಮಾಡಿದೆವು ಮತ್ತು ಪಾನ ಮಾಡಿದೆವು.
42 “ಜನರಿಗೆ ಬೋಧಿಸಬೇಕೆಂದು ಯೇಸು ನಮಗೆ ಹೇಳಿದನು. ಜೀವಂತವಾಗಿರುವ ಜನರಿಗೂ ಮತ್ತು ಸತ್ತುಹೋಗಿರುವ ಜನರಿಗೂ ದೇವರಿಂದ ನ್ಯಾಯಾಧಿಪತಿಯಾಗಿ ಆಯ್ಕೆಯಾಗಿರುವ ವ್ಯಕ್ತಿ ತಾನೇ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಆತನು ನಮಗೆ ಹೇಳಿದನು. 43 ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನ ಪಾಪಗಳನ್ನು ದೇವರು ಯೇಸುವಿನ ಮೂಲಕ ಕ್ಷಮಿಸುವನು. ಇದು ಸತ್ಯವೆಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.
Kannada Holy Bible: Easy-to-Read Version. All rights reserved. © 1997 Bible League International