Revised Common Lectionary (Semicontinuous)
49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
36 “‘ಬಾಬಿಲೋನಿನ ರಾಜನು ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಅವನು ಖಡ್ಗ, ಕ್ಷಾಮ, ಭಯಂಕರವಾದ ವ್ಯಾಧಿಗಳನ್ನು ಬಳಸಿಕೊಳ್ಳುವನು’ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: 37 ‘ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ತಮ್ಮ ಪ್ರದೇಶವನ್ನು ಬಿಟ್ಟುಹೋಗಲು ನಾನು ಒತ್ತಾಯಿಸಿದ್ದೇನೆ. ನಾನು ಅವರ ಮೇಲೆ ತುಂಬ ಕೋಪಗೊಂಡಿದ್ದೆ. ಆದರೆ ನಾನು ಅವರನ್ನು ಈ ಸ್ಥಳಕ್ಕೆ ಹಿಂದಿರುಗಿಸುವೆನು. ನಾನು ಒತ್ತಾಯಿಸಿ ಅವರನ್ನು ಅಟ್ಟಿದ ಸ್ಥಳಗಳಿಂದ ಅವರನ್ನು ಒಟ್ಟುಗೂಡಿಸುವೆನು. ಅವರನ್ನು ಪುನಃ ಈ ಸ್ಥಳಕ್ಕೆ ಕರೆತರುವೆನು. ಅವರು ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಇರುವಂತೆ ಮಾಡುವೆನು. 38 ಇಸ್ರೇಲರು ಮತ್ತು ಯೆಹೂದ್ಯರು ನನ್ನ ಭಕ್ತರಾಗಿರುವರು, ನಾನು ಅವರ ದೇವರಾಗಿರುವೆನು. 39 ಒಂದೇ ಜನಾಂಗವಾಗುವ ಬಯಕೆಯನ್ನು ನಾನು ಅವರಲ್ಲಿ ಉಂಟುಮಾಡುವೆನು. ಅವರು ತಮ್ಮ ಜೀವಮಾನವೆಲ್ಲಾ ನನ್ನನ್ನು ಆರಾಧಿಸಬೇಕೆಂಬ ಬಯಕೆಯನ್ನು ಹೊಂದಿರುವರು. ಹೌದು, ಅವರ ಬಯಕೆಯೂ ಅವರ ಮಕ್ಕಳ ಬಯಕೆಯೂ ಇದೇ ಆಗಿರುವುದು.
40 “‘ನಾನು ಇಸ್ರೇಲರ ಮತ್ತು ಯೆಹೂದ್ಯರ ಸಂಗಡ ಶಾಶ್ವತವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಗನುಸಾರವಾಗಿ ನಾನು ಅವರಿಗೆ ವಿಮುಖನಾಗುವುದೇ ಇಲ್ಲ. ನಾನು ಯಾವಾಗಲೂ ಅವರಿಗೆ ಒಳ್ಳೆಯವನಾಗಿರುತ್ತೇನೆ. ನನ್ನನ್ನು ಗೌರವಿಸಬೇಕೆಂಬ ಇಚ್ಛೆಯನ್ನು ಅವರಲ್ಲಿ ಬರಮಾಡುತ್ತೇನೆ. ಆಗ ಅವರೆಂದಿಗೂ ನನಗೆ ವಿಮುಖರಾಗುವದಿಲ್ಲ. 41 ಅವರು ನನ್ನನ್ನು ಸಂತೋಷಪಡಿಸುವರು. ಅವರಿಗೆ ಒಳ್ಳೆಯದನ್ನು ಮಾಡುವದರಲ್ಲಿ ನಾನು ಸಂತೋಷಪಡುವೆನು. ನಾನು ಖಂಡಿತವಾಗಿ ಅವರನ್ನು ಈ ದೇಶದಲ್ಲಿ ನೆಟ್ಟು ಬೆಳೆಯುವಂತೆ ಮಾಡುತ್ತೇನೆ. ಇದನ್ನು ನಾನು ಮನಃಪೂರ್ವಕವಾಗಿ ಮಾಡುತ್ತೇನೆ.’”
42 ಯೆಹೋವನು ಹೀಗೆನ್ನುತ್ತಾನೆ: “ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ನಾನು ಈ ಮಹಾವಿಪತ್ತನ್ನು ತಂದಿದ್ದೇನೆ. ಅದರಂತೆಯೇ ನಾನು ಅವರಿಗೆ ಒಳಿತನ್ನು ತರುವೆನು. ನಾನು ಅವರಿಗೆ ಒಳ್ಳೆಯದನ್ನು ಮಾಡುವದಾಗಿ ಮಾತುಕೊಡುತ್ತೇನೆ. 43 ನೀವು ‘ಈ ಪ್ರದೇಶವು ಒಂದು ಬರಿದಾದ ಮರುಭೂಮಿ. ಇಲ್ಲಿ ಜನರಾಗಲಿ ಪ್ರಾಣಿಗಳಾಗಲಿ ಇಲ್ಲ. ಬಾಬಿಲೋನಿನ ಸೈನ್ಯವು ಈ ದೇಶವನ್ನು ಸೋಲಿಸಿದೆ’ ಎಂದು ಹೇಳುತ್ತಿರುವಿರಿ. ಆದರೆ ಮುಂದಿನಕಾಲದಲ್ಲಿ ಜನರು ಪುನಃ ಈ ಪ್ರದೇಶದಲ್ಲಿ ಹೊಲಗಳನ್ನು ಕೊಂಡುಕೊಳ್ಳುವರು. 44 ಜನರು ಹಣ ಕೊಟ್ಟು ಭೂಮಿಯನ್ನು ಕೊಂಡುಕೊಳ್ಳುವರು. ಅವರು ಕರಾರುಪತ್ರಗಳಿಗೆ ಸಹಿಹಾಕುವರು. ಜನರು ಕ್ರಯಪತ್ರಗಳಿಗೆ ಸಹಿ ಹಾಕುವದನ್ನು ಬೇರೆಯವರು ನೋಡುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಲ್ಲಿ ಜನರು ಪುನಃ ಹೊಲಗಳನ್ನು ಕೊಂಡುಕೊಳ್ಳುವರು. ಜೆರುಸಲೇಮಿನ ಸುತ್ತಲಿನ ಪ್ರದೇಶದಲ್ಲಿ ಅವರು ಹೊಲಗಳನ್ನು ಕೊಂಡುಕೊಳ್ಳುವರು. ಅವರು ಯೆಹೂದ ಪ್ರದೇಶದ ಊರುಗಳಲ್ಲಿಯೂ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶದಲ್ಲಿಯೂ ದಕ್ಷಿಣದ ಮರಳುಗಾಡಿನಲ್ಲಿಯೂ ಹೊಲಗಳನ್ನು ಕೊಂಡುಕೊಳ್ಳುವರು. ನಾನು ನಿಮ್ಮ ಜನರನ್ನು ನಿಮ್ಮ ಪ್ರದೇಶಕ್ಕೆ ಪುನಃ ಕರೆದುಕೊಂಡು ಬರುವದರಿಂದ ಹೀಗಾಗುವುದು.” ಇದು ಯೆಹೋವನ ನುಡಿ.
ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು
5 ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. 2 ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. 3 ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. 4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.
5 ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. 6 ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.
Kannada Holy Bible: Easy-to-Read Version. All rights reserved. © 1997 Bible League International