Revised Common Lectionary (Semicontinuous)
11 ಆ ಸಮಯದಲ್ಲಿ ಯೆಹೂದ ಮತ್ತು ಜೆರುಸಲೇಮಿನ ಜನರಿಗೆ
ಒಂದು ಸಂದೇಶವನ್ನು ಕೊಡಲಾಗುವುದು.
“ಬೋಳುಬೆಟ್ಟಗಳಿಂದ ಒಂದು ಬಿಸಿಗಾಳಿಯು ಬೀಸುವುದು.
ಅದು ಮರಳುಗಾಡಿನಿಂದ ಬೀಸುವುದು.
ಇದು ರೈತನು ತೂರಿ ಹೊಟ್ಟಿನಿಂದ ಕಾಳನ್ನು ಬೇರ್ಪಡಿಸಲು
ಬೇಕಾಗುವ ಸೌಮ್ಯವಾದ ಗಾಳಿಯಂತಲ್ಲ.
12 ಇದು ಅದಕ್ಕಿಂತಲೂ ಬಹು ಬಿರುಸಾಗಿ ಬೀಸುತ್ತದೆ.
ಅದು ನನ್ನಿಂದ ಬರುತ್ತದೆ.
ಈಗ ಯೆಹೂದದ ಜನರಿಗೆ ನ್ಯಾಯವಾದ ದಂಡನೆಗಳನ್ನು ವಿಧಿಸುವೆನು.”
22 ದೇವರು, “ನನ್ನ ಜನರು ಮೂರ್ಖರಾಗಿದ್ದಾರೆ.
ಅವರು ನನ್ನನ್ನು ಅರಿಯದವರಾಗಿದ್ದಾರೆ.
ಅವರು ಮೂಢ ಮಕ್ಕಳಾಗಿದ್ದಾರೆ.
ಅವರು ಅವಿವೇಕಿಗಳಾಗಿದ್ದಾರೆ.
ಅವರು ದುಷ್ಕೃತ್ಯದಲ್ಲಿ ನಿಪುಣರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡಲರಿಯದವರಾಗಿದ್ದಾರೆ” ಎಂದನು.
ವಿಪತ್ತಿನ ಆಗಮನ
23 ನಾನು ಭೂಮಿಯ ಕಡೆಗೆ ನೋಡಿದೆ,
ಭೂಮಿಯು ಬರಿದಾಗಿತ್ತು.
ಭೂಮಿಯ ಮೇಲೇನೂ ಇರಲಿಲ್ಲ.
ನಾನು ಆಕಾಶದ ಕಡೆಗೆ ನೋಡಿದೆ,
ಅದರ ಬೆಳಕು ಹೋಗಿಬಿಟ್ಟಿತ್ತು.
24 ನಾನು ಪರ್ವತಗಳ ಕಡೆಗೆ ನೋಡಿದೆ,
ಅವುಗಳು ನಡುಗುತ್ತಿದ್ದವು.
ಎಲ್ಲಾ ಬೆಟ್ಟಗಳು ಅದರುತ್ತಿದ್ದವು.
25 ನಾನು ನೋಡಿದರೂ ಅಲ್ಲಿ ಜನರಿರಲಿಲ್ಲ.
ಆಕಾಶದ ಎಲ್ಲಾ ಪಕ್ಷಿಗಳು ಹಾರಿಹೋಗಿದ್ದವು.
26 ನಾನು ನೋಡಿದಾಗ ಫಲವತ್ತಾದ ಭೂಮಿಯು ಮರಳುಗಾಡಾಗಿತ್ತು.
ಆ ಪ್ರದೇಶದ ಎಲ್ಲಾ ನಗರಗಳು ಹಾಳಾಗಿ ಹೋಗಿದ್ದವು.
ಯೆಹೋವನು ತನ್ನ ಭಯಂಕರವಾದ ಕೋಪದಿಂದ ಇದನ್ನು ಮಾಡಿದನು.
27 ಯೆಹೋವನು ಹೀಗೆ ಹೇಳುತ್ತಾನೆ:
“ಇಡೀ ದೇಶವು ಹಾಳಾಗುವುದು.
ಆದರೆ ನಾನು ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ.
28 ಈ ಪ್ರದೇಶದ ಜನರು ಸತ್ತವರಿಗಾಗಿ ಅಳುವರು.
ಆಕಾಶವು ಕಪ್ಪಾಗುವುದು.
ನಾನು ಹೇಳಿದ್ದೇನೆ, ಅದು ಬದಲಾಗುವುದಿಲ್ಲ.
ನಾನು ಒಂದು ನಿರ್ಣಯ ತೆಗೆದುಕೊಂಡಿದ್ದೇನೆ, ನಾನು ನನ್ನ ಮನಸ್ಸನ್ನು ಬದಲಾಯಿಸುವದಿಲ್ಲ.”
ರಚನೆಗಾರ: ದಾವೀದ.
14 ಮೂಢರು ತಮ್ಮ ಹೃದಯದಲ್ಲಿ, “ದೇವರಿಲ್ಲ” ಎಂದುಕೊಳ್ಳುವರು.
ಮೂಢರು ಭಯಂಕರವಾದ ಅಸಹ್ಯಕೃತ್ಯಗಳನ್ನು ಮಾಡುವರು.
ಅವರಲ್ಲಿ ಒಳ್ಳೆಯದನ್ನು ಮಾಡುವವರು ಇಲ್ಲವೇ ಇಲ್ಲ.
2 ದೇವರಿಗಾಗಿ ಹುಡುಕುವ ಬುದ್ಧಿವಂತರು ಮನುಷ್ಯರಲ್ಲಿ ಇದ್ದಾರೋ
ಎಂದು ಯೆಹೋವನು ಪರಲೋಕದಿಂದ ಮನುಷ್ಯರನ್ನು ನೋಡುವನು.
3 ಆದರೆ ಪ್ರತಿಯೊಬ್ಬನೂ ದೇವರಿಗೆ ವಿಮುಖನಾಗಿದ್ದಾನೆ.
ಎಲ್ಲರೂ ಕೆಟ್ಟುಹೋಗಿದ್ದಾರೆ.
ಒಳ್ಳೆಯದನ್ನು ಮಾಡುವವನು ಇಲ್ಲ;
ಒಬ್ಬನಾದರೂ ಇಲ್ಲ.
4 ದುಷ್ಟರು ಅರ್ಥಮಾಡಿಕೊಳ್ಳುವುದಿಲ್ಲವೇ?
ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ.
ಅವರು ಯೆಹೋವನನ್ನು ಆರಾಧಿಸುವುದೂ ಇಲ್ಲ.
5-6 ಬಡವರ ಬುದ್ಧಿಮಾತನ್ನು ಆ ದುಷ್ಟರು ಕೇಳುವುದಿಲ್ಲ.
ಯಾಕೆಂದರೆ ಬಡವರು ಆಶ್ರಯಿಸಿಕೊಂಡಿರುವುದು ಯೆಹೋವನನ್ನೇ.
ಆದರೆ ದೇವರು ನೀತಿವಂತರೊಂದಿಗಿದ್ದಾನೆ.
ಆದ್ದರಿಂದ ದುಷ್ಟರು ಭಯಭ್ರಾಂತರಾಗುವರು.
7 ಚೀಯೋನ್ ಪರ್ವತದ ಮೇಲಿರುವಾತನು ಇಸ್ರೇಲನ್ನು ರಕ್ಷಿಸುವನೇ?
ಯೆಹೋವನ ಪ್ರಜೆಗಳು ಸೆರೆ ಒಯ್ಯಲ್ಪಟ್ಟು ಸೆರೆವಾಸದಲ್ಲಿದ್ದಾರೆ.
ಯೆಹೋವನಾದರೋ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವನು;
ಆಗ ಯಾಕೋಬ್ಯರು ಉಲ್ಲಾಸಗೊಳ್ಳುವರು; ಇಸ್ರೇಲರು ಹರ್ಷಿಸುವರು.
ದೇವರ ಕರುಣೆಗಾಗಿ ಕೃತಜ್ಞತೆಗಳು
12 ನಮ್ಮ ಪ್ರಭುವಾದ ಕ್ರಿಸ್ತ ಯೇಸು ನನ್ನ ಮೇಲಿನ ನಂಬಿಕೆಯಿಂದ, ಆತನ ಸೇವೆ ಮಾಡುವ ಈ ಕಾರ್ಯವನ್ನು ನನಗೆ ದಯಪಾಲಿಸಿದ್ದರಿಂದ ನಾನು ಆತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆತನು ನನ್ನನ್ನು ಬಲಪಡಿಸುತ್ತಾನೆ. 13 ಮೊದಲು, ನಾನು ಕ್ರಿಸ್ತನ ವಿರುದ್ಧ ಮಾತನಾಡಿದ್ದೆನು. ಆತನನ್ನು ಹಿಂಸಿಸಿದ್ದೆನು. ಆತನಿಗೆ ನೋವಾಗುವಂಥ ಕಾರ್ಯಗಳನ್ನು ಮಾಡಿದ್ದೆನು. ಆದರೆ ನಾನೇನು ಮಾಡುತ್ತಿದ್ದೇನೆಂಬುದು ನನಗೆ ತಿಳಿದಿರಲಿಲ್ಲವಾದ್ದರಿಂದ ದೇವರು ನನಗೆ ಕರುಣೆ ತೋರಿದನು. ನಂಬದಿರುವಾಗ ನಾನು ಅವುಗಳನ್ನು ಮಾಡಿದೆನು. 14 ಆದರೆ ನಮ್ಮ ಪ್ರಭುವಿನ ಕೃಪೆಯು ಸಂಪೂರ್ಣವಾಗಿ ನನಗೆ ಲಭಿಸಿತು. ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಗಳು ಆ ಕೃಪೆಯೊಂದಿಗೆ ಬಂದವು.
15 ನಾನು ಹೇಳುತ್ತಿರುವ ಈ ಸಂಗತಿ ಸತ್ಯವಾದದ್ದು. ಆದ್ದರಿಂದ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಅದೇನೆಂದರೆ: ಪಾಪಿಗಳನ್ನು ರಕ್ಷಿಸುವುದಕ್ಕೆ ಕ್ರಿಸ್ತ ಯೇಸು ಈ ಲೋಕದಲ್ಲಿ ಪ್ರತ್ಯಕ್ಷನಾದನು. ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು. 17 ಸದಾಕಾಲ ಆಳುವ ಅರಸನಿಗೆ ಗೌರವವೂ ಮಹಿಮೆಯೂ ಇರಲಿ. ಆತನಿಗೆ ಲಯವೆಂಬುದೇ ಇಲ್ಲ. ಆತನು ಅದೃಶ್ಯನಾಗಿರುವನು. ಒಬ್ಬನೇ ದೇವರಾದ ಆತನಿಗೆ ಗೌರವವೂ ಮಹಿಮೆಯೂ ಉಂಟಾಗಲಿ. ಆಮೆನ್.
ಸ್ವರ್ಗದಲ್ಲಿ ಆನಂದ
(ಮತ್ತಾಯ 18:12-14)
15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. 2 ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.
3 ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: 4 “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. 5 ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. 6 ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. 7 ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.
8 “ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ. 9 ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು. 10 ಅದೇರೀತಿ ಒಬ್ಬ ಪಾಪಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”
Kannada Holy Bible: Easy-to-Read Version. All rights reserved. © 1997 Bible League International