Revised Common Lectionary (Semicontinuous)
ರಚನೆಗಾರ: ದಾವೀದ.
58 ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ?
ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
2 ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ;
ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
3 ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು.
ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
4 ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ.[a]
ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
5 ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು.
ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.
6 ಯೆಹೋವನೇ, ಅವರು ಸಿಂಹಗಳಂತಿದ್ದಾರೆ.
ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
7 ಹರಿದು ಕಾಣದೆಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ.
ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
8 ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ.
ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
9 ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು
ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.
10 ದುಷ್ಟರಿಗಾಗುವ ಪ್ರತಿದಂಡನೆಯನ್ನು
ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು;
ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.
15 ನಿಮಗೆ ಹೊಸ ಪಾಲಕರನ್ನು ನೇಮಿಸುವೆನು. ಆ ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಬುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. 16 ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಬೆಳೆಯುವದು” ಇದು ಯೆಹೋವನ ನುಡಿ.
“ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆ ಇದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವ’ ಎಂದು ಹೇಳುವುದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ಅವರು ಅದನ್ನು ಜ್ಞಾಪಿಸುವುದೂ ಇಲ್ಲ. ಅದರ ಅಭಾವವನ್ನು ಮನಸ್ಸಿಗೆ ತಂದುಕೊಳ್ಳುವುದೂ ಇಲ್ಲ. ಅವರು ಇನ್ನೊಂದು ‘ಪವಿತ್ರ ಪೆಟ್ಟಿಗೆ’ಯನ್ನು ಸಿದ್ಧಪಡಿಸುವದಿಲ್ಲ. 17 ಆ ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಬಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನ್ನು ಅನುಸರಿಸುವುದಿಲ್ಲ. 18 ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನ್ನು ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಬರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಬರುವರು.”
19 ಯೆಹೋವನಾದ ನಾನು ಹೀಗೆಂದುಕೊಂಡೆ:
“ನಾನು ಸಂತೋಷದಿಂದ ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುವೆನು.
ಬೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನ್ನು
ನಿಮಗೆ ಕೊಡುವುದಕ್ಕೆ ನಾನು ಸಂತೋಷಪಡುವೆನು.
ನೀವು ನನ್ನನ್ನು ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ.
ನೀವು ಯಾವಾಗಲೂ ನನ್ನ ಹಿಂಬಾಲಕರಾಗಿರುವಿರೆಂದು ಭಾವಿಸಿದ್ದೆ.
20 ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ.
ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21 ಬೋಳುಪರ್ವತದ ಮೇಲೆ ಅಳುವ ಧ್ವನಿಯನ್ನು ನೀವು ಕೇಳಬಹುದು.
ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಅವರು ತುಂಬಾ ಕೆಟ್ಟುಹೋಗಿ
ತಮ್ಮ ದೇವರಾದ ಯೆಹೋವನನ್ನು ಮರೆತರು.
22 ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ,
ನನ್ನಲ್ಲಿಗೆ ಹಿಂತಿರುಗಿ ಬನ್ನಿ.
ನನಗೆ ವಿಶ್ವಾಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು,
ಹಿಂತಿರುಗಿ ಬನ್ನಿ” ಎಂದು ಹೇಳುತ್ತಾನೆ.
“ಅದಕ್ಕೆ ಜನರು, ‘ಆಗಲಿ ನಿನ್ನಲ್ಲಿಗೆ ಬರುತ್ತೇವೆ.
ನೀನೇ ನಮ್ಮ ದೇವರಾದ ಯೆಹೋವನು.
23 ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು.
ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು.
ಇಸ್ರೇಲಿನ ರಕ್ಷಣೆ ಖಚಿತವಾಗಿಯೂ
ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24 ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನ್ನು
ನೈವೇದ್ಯದಲ್ಲಿ ಸುಳ್ಳುದೇವರಾದ ಬಾಳನು ತಿಂದುಬಿಟ್ಟನು.
ನಮ್ಮ ಬಾಲ್ಯದಿಂದಲೂ ಹೀಗಾಗುತಾ ಬಂದಿದೆ.
ಭಯಂಕರವಾದ ಆ ಸುಳ್ಳು ದೇವರು
ನಮ್ಮ ಪೂರ್ವಿಕರ ದನಕುರಿಗಳನ್ನೂ
ಅವರ ಗಂಡುಹೆಣ್ಣುಮಕ್ಕಳನ್ನೂ ಬಲಿ ತೆಗೆದುಕೊಳ್ಳುತ್ತಿರುವನು.
25 ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ.
ನಮ್ಮ ನಾಚಿಕೆಯು ಕಂಬಳಿಯು ಹೊದಿಸಿದಂತೆ ನಮ್ಮನ್ನು ಮುಚ್ಚಿಬಿಡಲಿ.
ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ.
ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ.
ನಮ್ಮ ಬಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ’” ಎಂದು ಮೊರೆಯಿಟ್ಟರು.
ಔತಣಕೂಟದ ಸಾಮ್ಯ
(ಮತ್ತಾಯ 22:1-10)
15 ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.
16 ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು. 17 ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು. 18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 19 ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.
21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.
22 “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು. 23 ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ. 24 ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”
Kannada Holy Bible: Easy-to-Read Version. All rights reserved. © 1997 Bible League International