Revised Common Lectionary (Semicontinuous)
49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
16 ನೇರೀಯನ ಮಗನಾದ ಬಾರೂಕನಿಗೆ ಕ್ರಯಪತ್ರವನ್ನು ಕೊಟ್ಟ ಮೇಲೆ ನಾನು ಯೆಹೋವನಿಗೆ ಪ್ರಾರ್ಥಿಸಿ ಹೀಗೆಂದೆನು:
17 “ದೇವರಾದ ಯೆಹೋವನೇ, ನೀನು ಭೂಮ್ಯಾಕಾಶಗಳನ್ನು ಸೃಷ್ಟಿಸಿದೆ. ಅವುಗಳನ್ನು ನೀನು ನಿನ್ನ ಅಪಾರವಾದ ಶಕ್ತಿಯಿಂದ ಸೃಷ್ಟಿಸಿದೆ. ನಿನಗೆ ಅಸಾಧ್ಯವಾದುದು ಯಾವುದೂ ಇಲ್ಲ. 18 ಯೆಹೋವನೇ, ನೀನು ಸಾವಿರಾರು ಜನರಿಗೆ ನಂಬಿಗಸ್ತನಾಗಿಯೂ ಕರುಣಾಮಯಿಯಾಗಿಯೂ ಇರುವೆ. ಆದರೆ ತಂದೆಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಶಿಕ್ಷೆಯನ್ನು ವಿಧಿಸುವಾತನೂ ನೀನೇ. ಮಹತ್ವವುಳ್ಳವನೇ, ಪರಾಕ್ರಮಿಯಾದ ದೇವರೇ, ಸರ್ವಶಕ್ತನಾದ ಯೆಹೋವನು ಎಂಬುದೇ ನಿನ್ನ ನಾಮಧೇಯ. 19 ನೀನು ಮಹತ್ತರವಾದ ಯೋಜನೆಗಳನ್ನು ಹಾಕಿ ಮಹತ್ಕಾರ್ಯಗಳನ್ನು ಮಾಡುವೆ. ಜನರು ಮಾಡುವ ಎಲ್ಲವನ್ನೂ ನೀನು ನೋಡುವೆ. ಒಳ್ಳೆಯದನ್ನು ಮಾಡುವವರಿಗೆ ನೀನು ಪ್ರತಿಫಲಗಳನ್ನು ಕೊಡುವೆ. ಕೆಟ್ಟದ್ದನ್ನು ಮಾಡುವವರನ್ನು ನೀನು ದಂಡಿಸುವೆ. ಅವರು ಯಾವುದಕ್ಕೆ ಅರ್ಹರೊ ಅದನ್ನು ಕೊಡುವೆ. 20 ಯೆಹೋವನೇ, ನೀನು ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದೆ. ಇಂದಿನವರೆಗೂ ನೀನು ಅದ್ಭುತಕಾರ್ಯಗಳನ್ನು ಮಾಡಿದೆ. ಇಸ್ರೇಲಿನಲ್ಲಿಯೂ ನೀನು ಅವುಗಳನ್ನು ಮಾಡಿದೆ. ಜನರು ಇರುವಲ್ಲೆಲ್ಲ ನೀನು ಅವುಗಳನ್ನು ಮಾಡಿದೆ. ಇವುಗಳಿಂದ ನೀನು ಸುಪ್ರಸಿದ್ಧನಾಗಿರುವೆ. 21 ಯೆಹೋವನೇ, ನೀನು ಅದ್ಭುತಕಾರ್ಯಗಳನ್ನು ಮಾಡಿ ನಿನ್ನ ಜನರನ್ನು ಈಜಿಪ್ಟಿನಿಂದ ಇಸ್ರೇಲಿಗೆ ಕರೆದುತಂದೆ. ಇದನ್ನು ಬಲವಾದ ಕೈಗಳಿಂದಲೇ ಮಾಡಿದೆ. ನಿನ್ನ ಸಾಮರ್ಥ್ಯ ಆಶ್ಚರ್ಯಕರವಾದದು.
22 “ಯೆಹೋವನೇ, ನೀನು ಈ ಭೂಮಿಯನ್ನು ಇಸ್ರೇಲರಿಗೆ ಕೊಟ್ಟೆ. ನೀನು ಬಹಳ ಕಾಲದ ಹಿಂದೆಯೇ ಈ ಭೂಮಿಯನ್ನು ಅವರ ಪೂರ್ವಿಕರಿಗೆ ಕೊಡುವದಾಗಿ ಮಾತು ಕೊಟ್ಟಿದ್ದೆ. ಇದು ಬಹಳ ಒಳ್ಳೆಯ ಭೂಮಿ. ಇದು ಅನೇಕ ಒಳ್ಳೆ ವಸ್ತುಗಳನ್ನು ಹೊಂದಿರುವ ಒಳ್ಳೆಯ ಭೂಮಿ.[a] 23 ಇಸ್ರೇಲಿನ ಜನರು ಈ ಪ್ರದೇಶಕ್ಕೆ ಬಂದು ಅದನ್ನು ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ; ನಿನ್ನ ಉಪದೇಶಗಳನ್ನು ಅನುಸರಿಸಲಿಲ್ಲ; ನಿನ್ನ ಆಜ್ಞೆಯಂತೆ ಮಾಡಲಿಲ್ಲ. ಆದ್ದರಿಂದ ನೀನು ಇಸ್ರೇಲರಿಗೆ ಇಂಥಾ ದುರ್ಗತಿ ಬರುವಂತೆ ಮಾಡಿದೆ.
24 “ಈಗ ವೈರಿಗಳು ನಗರವನ್ನು ಮುತ್ತಿದ್ದಾರೆ. ಜೆರುಸಲೇಮಿನ ಗೋಡೆಯನ್ನು ಹತ್ತಿ ಅದನ್ನು ಸ್ವಾಧೀನಪಡಿಸಿಕೊಳ್ಳುವದಕ್ಕಾಗಿ ಅವರು ಇಳಿಜಾರುಗೋಡೆಗಳನ್ನು ಕಟ್ಟುತ್ತಿದ್ದಾರೆ. ಬಾಬಿಲೋನಿನ ಸೈನಿಕರು ತಮ್ಮ ಖಡ್ಗ, ಕ್ಷಾಮ ಮತ್ತು ಭಯಂಕರವ್ಯಾಧಿ ಇವುಗಳ ಸಹಾಯದಿಂದ ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವರು. ಬಾಬಿಲೋನಿನ ಸೈನಿಕರು ಈಗ ನಗರದ ಮೇಲೆ ಧಾಳಿ ಮಾಡುತ್ತಿದ್ದಾರೆ. ಯೆಹೋವನೇ, ಹೀಗಾಗುವದೆಂದು ನೀನು ಹೇಳಿದ್ದೆ, ಈಗ ನೀನು ಹೇಳಿದಂತೆಯೇ ಆಗುತ್ತಿದೆ.
25 “ನನ್ನ ಒಡೆಯನಾದ ಯೆಹೋವನೇ, ಆ ದುರ್ಬಟನೆಗಳೆಲ್ಲಾ ಸಂಭವಿಸುತ್ತಿವೆ. ಆದರೆ ಈಗ ನೀನು ‘ಯೆರೆಮೀಯನೇ, ಬೆಳ್ಳಿಯನ್ನು ಕೊಟ್ಟು ಹೊಲವನ್ನು ಕೊಂಡುಕೋ ಮತ್ತು ಈ ಖರೀದಿಗೆ ಸಾಕ್ಷಿಯಾಗಿ ಕೆಲವು ಜನರನ್ನು ಆರಿಸಿಕೋ’ ಎಂದು ಹೇಳುತ್ತಿರುವಿಯಲ್ಲ. ಬಾಬಿಲೋನಿನ ಸೈನ್ಯವು ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿ ನಿಂತಿರುವಾಗ ನೀನು ಇದನ್ನು ಹೇಳುತ್ತಿರುವಿಯಲ್ಲ, ಏಕೆ? ಏಕೆ ನಾನು ಹಣವನ್ನು ಹೀಗೆ ವ್ಯರ್ಥವಾಗಿ ಕಳೆದುಕೊಳ್ಳಬೇಕು?”
26 ಆಗ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: 27 “ಯೆರೆಮೀಯನೇ, ನಾನೇ ಯೆಹೋವನು, ನಾನು ಈ ಭೂಮಂಡಲದ ಪ್ರತಿಯೊಬ್ಬನ ದೇವರು. ಯೆರೆಮೀಯನೆ, ನನಗೆ ಯಾವುದೂ ಅಸಾಧ್ಯವಲ್ಲವೆಂಬುದನ್ನು ನೀನು ಬಲ್ಲೆ.” 28 ಯೆಹೋವನು ಹೀಗೆಂದನು: “ಜೆರುಸಲೇಮ್ ನಗರವನ್ನು ನಾನು ಕೂಡಲೇ ಬಾಬಿಲೋನಿನ ಸೈನ್ಯಕ್ಕೂ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೂ ಒಪ್ಪಿಸುವೆನು. ಸೈನ್ಯವು ಈ ನಗರವನ್ನು ವಶಪಡಿಸಿಕೊಳ್ಳುವುದು. 29 ಬಾಬಿಲೋನಿನ ಸೈನ್ಯವು ಈಗಾಗಲೇ ಜೆರುಸಲೇಮ್ ನಗರದ ಮೇಲೆ ಧಾಳಿ ಮಾಡುತ್ತಿದೆ. ಸೈನಿಕರು ಬೇಗನೆ ನಗರವನ್ನು ಪ್ರವೇಶಿಸಿ ಅದಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುವರು. ಜೆರುಸಲೇಮಿನ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರಾದ ಬಾಳನಿಗೆ ನೈವೇದ್ಯವನ್ನು ಅರ್ಪಿಸಿ ನಾನು ಕೋಪಿಸಿಕೊಳ್ಳುವಂತೆ ಮಾಡಿದ ಕೆಲವು ಮನೆಗಳು ಈ ನಗರದಲ್ಲಿವೆ. ಅದಲ್ಲದೆ ಕೆಲವು ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸಿರುವರು. ಬಾಬಿಲೋನಿನ ಸೈನ್ಯವು ಆ ಮನೆಗಳನ್ನು ಸುಟ್ಟುಹಾಕುವುದು. 30 ನಾನು ಇಸ್ರೇಲಿನ ಜನರನ್ನು ಮತ್ತು ಯೆಹೂದದ ಜನರನ್ನು ಗಮನಿಸಿದ್ದೇನೆ. ಅವರು ಮಾಡುವದೆಲ್ಲ ಕೆಟ್ಟದ್ದೆ. ಅವರು ಚಿಕ್ಕಂದಿನಿಂದ ಕೆಟ್ಟದ್ದನ್ನೇ ಮಾಡಿದ್ದಾರೆ. ಇಸ್ರೇಲಿನ ಜನರು ತಮ್ಮ ಕೈಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸಿ ನನಗೆ ಬಹುಕೋಪ ಬರುವಂತೆ ಮಾಡಿದರು.” ಇದು ಯೆಹೋವನ ನುಡಿ. 31 “ಜೆರುಸಲೇಮ್ ನಗರವು ನಿರ್ಮಾಣಗೊಂಡಂದಿನಿಂದ ಇಂದಿನವರೆಗೂ ಈ ನಗರದ ಜನರು ನನಗೆ ಕೋಪ ಬರುವಂತೆ ಮಾಡಿದ್ದಾರೆ. ಈ ನಗರವು ನನಗೆ ಅತಿಕೋಪ ಬರುವಂತೆ ಮಾಡಿದೆ. ಆದ್ದರಿಂದ ಕಣ್ಣಿಗೆ ಕಾಣದಂತೆ ಅದನ್ನು ಅಳಿಸಿಬಿಡುವೆನು. 32 ಇಸ್ರೇಲಿನ ಮತ್ತು ಯೆಹೂದದ ಜನರು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಜೆರುಸಲೇಮ್ ನಗರವನ್ನು ನಾಶಮಾಡುತ್ತೇನೆ. ಜನರು, ರಾಜರು, ಮುಂದಾಳುಗಳು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು ಇವರೆಲ್ಲರೂ ನನಗೆ ಕೋಪ ಬರುವಂತೆ ಮಾಡಿದ್ದಾರೆ.
33 “ಆ ಜನರು ಸಹಾಯಕೋರಿ ನನ್ನಲ್ಲಿಗೆ ಬರಬೇಕಾಗಿತ್ತು. ಆದರೆ ಅವರು ನನಗೆ ವಿಮುಖರಾದರು. ನಾನು ಮತ್ತೆಮತ್ತೆ ಅವರಿಗೆ ಬುದ್ಧಿಕಲಿಸುವ ಪ್ರಯತ್ನ ಮಾಡಿದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ನಾನು ಅವರನ್ನು ತಿದ್ದುವ ಪ್ರಯತ್ನ ಮಾಡಿದೆ, ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. 34 ಆ ಜನರು ತಮಗಾಗಿ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಗೊಂಡ ಆಲಯದಲ್ಲಿ ಆ ವಿಗ್ರಹಗಳನ್ನಿಟ್ಟು ನನ್ನ ಆಲಯವನ್ನು ‘ಹೊಲಸು’ ಮಾಡಿದ್ದಾರೆ.
35 “ಬೆನ್‌ಹಿನ್ನೊಮ್ ಕಣಿವೆಯಲ್ಲಿ ಅವರು ಸುಳ್ಳುದೇವರಾದ ಬಾಳನಿಗಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿದ್ದಾರೆ. ತಮ್ಮ ಮಕ್ಕಳನ್ನು ಆಹುತಿಕೊಡುವದಕ್ಕಾಗಿ ಈ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಇಂಥಾ ಭಯಂಕರವಾದ ಕೆಲಸವನ್ನು ಮಾಡಲು ನಾನು ಅವರಿಗೆ ಆಜ್ಞಾಪಿಸಿಲ್ಲ. ಯೆಹೂದದ ಜನರು ಇಂಥಾ ಭಯಂಕರವಾದ ಕಾರ್ಯವನ್ನು ಮಾಡುವರೆಂದು ನಾನೆಂದೂ ಊಹಿಸಿರಲಿಲ್ಲ.
ಲವೊದಿಕೀಯದ ಸಭೆಗೆ ಯೇಸುವಿನ ಪತ್ರ
14 “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ:
“ಆಮೆನ್[a] ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:
15 “ನೀನು ಮಾಡುವುದೆಲ್ಲಾ ನನಗೆ ತಿಳಿದದೆ. ನೀನು ಬಿಸಿಯೂ ಇಲ್ಲ, ತಣ್ಣಗೂ ಇಲ್ಲ! ನೀನು ಬಿಸಿಯಾದರೂ ಇರಬೇಕಿತ್ತು ಅಥವಾ ತಣ್ಣಗಾದರೂ ಇರಬೇಕಿತ್ತು! 16 ಆದರೆ ನೀನು ಬಿಸಿಯೂ ಇಲ್ಲದೆ ತಣ್ಣಗೂ ಇಲ್ಲದೆ ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿ ಬಿಡುವೆನು. 17 ನೀನು ನಿನ್ನನ್ನು ಐಶ್ವರ್ಯವಂತನೆಂದು ಹೇಳಿಕೊಳ್ಳುತ್ತಿರುವೆ. ನೀನು ಐಶ್ವರ್ಯವಂತನಾಗಿರುವುದರಿಂದ ನಿನಗೇನೂ ಕೊರತೆ ಇಲ್ಲವೆಂದು ನೀನು ಯೋಚಿಸಿಕೊಂಡಿರುವೆ. ಆದರೆ ನಿಜವಾಗಿಯೂ ನೀನು ದುರವಸ್ಥೆಗೆ ಒಳಗಾದವನಾಗಿರುವೆ, ದೌರ್ಭಾಗ್ಯನಾಗಿರುವೆ, ದರಿದ್ರನಾಗಿರುವೆ, ಕುರುಡನಾಗಿರುವೆ ಮತ್ತು ಬೆತ್ತಲಾಗಿರುವೆ. ಆದರೂ ಇದು ನಿನಗೆ ತಿಳಿದೇ ಇಲ್ಲ. 18 ಬೆಂಕಿಯಲ್ಲಿ ಪುಟಹಾಕಿದ ಅಪ್ಪಟ ಚಿನ್ನವನ್ನು ನೀನು ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ. ಆಗ ನೀನು ನಿಜವಾಗಿಯೂ ಶ್ರೀಮಂತನಾಗಲು ಸಾಧ್ಯ. ನಾನು ನಿನಗೆ ಹೇಳುವುದೇನೆಂದರೆ: ಬಿಳಿವಸ್ತ್ರಗಳನ್ನು ಕೊಂಡುಕೊ. ಆಗ ನೀನು ನಾಚಿಕೆಕರವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಸಾಧ್ಯವಾಗುವುದು. ನೀನು ನಿನ್ನ ಕಣ್ಣುಗಳಿಗೆ ಹಚ್ಚಲು ಔಷಧಿಯನ್ನು ಕೊಂಡುಕೊಳ್ಳಬೇಕೆಂತಲೂ ನಾನು ನಿನಗೆ ಹೇಳುತ್ತೇನೆ. ಆಗ ನಿನಗೆ ನಿಜವಾಗಿಯೂ ದೃಷ್ಟಿ ಬರುವುದು.
19 “ನಾನು ಪ್ರೀತಿಸುವ ಜನರನ್ನೇ ನಾನು ತಿದ್ದುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀವು ಆಸಕ್ತಿಯಿಂದಿರಿ! ದೇವರ ಕಡೆಗೆ ತಿರುಗಿಕೊಳ್ಳಿರಿ. 20 ಇಗೋ, ನಾನು ಬಾಗಿಲ ಬಳಿ ನಿಂತುಕೊಂಡು ತಟ್ಟುತ್ತಿದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಒಳಗೆ ಬಂದು ಅವನೊಂದಿಗೆ ಊಟ ಮಾಡುತ್ತೇನೆ ಮತ್ತು ಅವನು ನನ್ನೊಂದಿಗೆ ಊಟ ಮಾಡುತ್ತಾನೆ.
21 “ನಾನು ಜಯಗಳಿಸಿ ನನ್ನ ತಂದೆಯೊಡನೆ ಆತನ ಸಿಂಹಾಸನದ ಮೇಲೆ ಕುಳಿತುಕೊಂಡೆನು. ಅಂತೆಯೇ ಜಯಗಳಿಸುವ ಪ್ರತಿಯೊಬ್ಬನೂ ನನ್ನ ಸಂಗಡ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು. 22 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.”
Kannada Holy Bible: Easy-to-Read Version. All rights reserved. © 1997 Bible League International