Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 106:40-48

40 ಆತನು ತನ್ನ ಜನರ ಮೇಲೆ ಕೋಪಗೊಂಡನು;
    ಅವರ ವಿಷಯದಲ್ಲಿ ಬೇಸರಗೊಂಡನು!
41 ಆತನು ತನ್ನ ಜನರನ್ನು ಅನ್ಯಜನಾಂಗಗಳಿಗೆ ಒಪ್ಪಿಸಿದನು;
    ಅವರ ಮೇಲೆ ದೊರೆತನ ಮಾಡುವಂತೆ ವೈರಿಗಳಿಗೆ ಅವರನ್ನು ಬಿಟ್ಟುಕೊಟ್ಟನು.
42 ಶತ್ರುಗಳು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು
    ಅವರ ಜೀವಿತವನ್ನು ಸಂಕಷ್ಟಕ್ಕೆ ಗುರಿಮಾಡಿದರು.
43 ಆತನು ತನ್ನ ಜನರನ್ನು ಅನೇಕ ಸಲ ರಕ್ಷಿಸಿದರೂ
    ಅವರು ಆತನಿಗೆ ವಿರೋಧವಾಗಿ ತಿರುಗಿ ತಮ್ಮ ಇಷ್ಟಾನುಸಾರವಾಗಿ ಮಾಡಿದರು.
    ಅವರು ಅನೇಕಾನೇಕ ಕೆಟ್ಟಕಾರ್ಯಗಳನ್ನು ಮಾಡಿದರು.
44 ಆದರೆ ಅವರು ಆಪತ್ತಿನಲ್ಲಿದ್ದಾಗಲೆಲ್ಲಾ ದೇವರಿಗೆ ಮೊರೆಯಿಟ್ಟರು;
    ಆತನು ಅವರ ಪ್ರಾರ್ಥನೆಗಳಿಗೆ ಸದುತ್ತರವನ್ನು ದಯಪಾಲಿಸಿದನು.
45 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಂಡನು.
    ತನ್ನ ಮಹಾಪ್ರೀತಿಯಿಂದ ಅವರನ್ನು ಸಂತೈಸಿದನು.
46 ಅನ್ಯ ಜನಾಂಗಗಳು ಆತನ ಜನರನ್ನು ಸೆರೆಯಾಳುಗಳನ್ನಾಗಿ ಎಳೆದೊಯ್ದರು.
    ಅನ್ಯಜನಾಂಗಗಳು ತನ್ನ ಜನರಿಗೆ ದಯೆತೋರುವಂತೆ ಆತನು ಮಾಡಿದನು.
47 ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
    ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
    ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48 ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
    ಎಂದು ಜನರೆಲ್ಲರೂ ಹೇಳಲಿ.

ಯೆರೆಮೀಯ 10:17-25

ವಿನಾಶವು ಬರುತ್ತಿದೆ

17 ನಿಮ್ಮದಾದ ಎಲ್ಲವನ್ನು ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ.
ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ.
    ವೈರಿಯು ನಗರವನ್ನು ಮುತ್ತಿದ್ದಾನೆ.
18 ಯೆಹೋವನು ಹೇಳುತ್ತಾನೆ:
“ಈ ಸಾರಿ ಯೆಹೂದದ ಜನರನ್ನು ನಾನು ದೇಶದಿಂದ ಹೊರಗೆ ತಳ್ಳುತ್ತೇನೆ.
    ಅವರಿಗೆ ನಾನು ನೋವು ಮತ್ತು ಕಷ್ಟಗಳನ್ನು ತರುತ್ತೇನೆ.
    ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”

19 ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಬಾ ಪೆಟ್ಟಾಗಿದೆ.
    ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ.
ಆದರೂ “ಇದು ನನ್ನ ವ್ಯಾಧಿ, ಇದನ್ನು ನಾನು ಅನುಭವಿಸಬೇಕು”
    ಎಂದು ಸಮಾಧಾನ ತಂದುಕೊಂಡೆ.
20 ನನ್ನ ಗುಡಾರವು ಹಾಳಾಗಿದೆ.
    ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ.
ನನ್ನ ಮಕ್ಕಳು ನನ್ನನ್ನು ಬಿಟ್ಟು
    ಹೊರಟುಹೋಗಿದ್ದಾರೆ.
ನನ್ನ ಗುಡಾರವನ್ನು ಹಾಕುವದಕ್ಕೆ ಯಾರೂ ಉಳಿದಿಲ್ಲ.
    ನನಗಾಗಿ ಒಂದು ಆಸರೆಯನ್ನು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
21 ಕುರುಬರು ಬುದ್ಧಿಗೇಡಿಗಳಾಗಿದ್ದಾರೆ.
    ಅವರು ಯೆಹೋವನನ್ನು ಹುಡುಕುವ ಪ್ರಯತ್ನ ಮಾಡುವುದಿಲ್ಲ.
ಅವರು ಜ್ಞಾನಿಗಳಲ್ಲ,
    ಅವರ ಹಿಂಡುಗಳು ಚದರಿಹೋಗುವವು; ಕಳೆದುಹೋಗುವವು.
22 ಕೇಳಿರಿ, ಉತ್ತರ ದಿಕ್ಕಿನಿಂದ
    ಬರುತ್ತಿರುವ ಮಹಾಧ್ವನಿಯನ್ನು!
ಇದು ಯೆಹೂದದ ನಗರಗಳನ್ನು ನಾಶಮಾಡುತ್ತದೆ.
    ಯೆಹೂದವು ಒಂದು ಬರಿದಾದ ಮರಳುಗಾಡಾಗುವದು, ನರಿಗಳ ನಿವಾಸವಾಗುವುದು.

23 ಯೆಹೋವನೇ, ಮಾನವನ ಜೀವ ಅವನ ಸ್ವಾಧೀನದಲ್ಲಿಲ್ಲವೆಂಬುದು ನನಗೆ ಗೊತ್ತು.
    ಜನರಿಗೆ ಸರಿಯಾದ ಜೀವನ ಕ್ರಮಗೊತ್ತಿಲ್ಲ.
24 ಯೆಹೋವನೇ, ನಮ್ಮನ್ನು ತಿದ್ದು,
    ಆದರೆ ಕಠೋರನಾಗಬೇಡ,
    ಕೋಪದಲ್ಲಿ ನಮ್ಮನ್ನು ದಂಡಿಸಬೇಡ.
25 ನಿನಗೆ ಕೋಪ ಬಂದಿದ್ದರೆ
    ಬೇರೆ ಜನಾಂಗಗಳನ್ನು ಶಿಕ್ಷಿಸು.
ಅವರು ನಿನ್ನನ್ನು ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ.
    ಅವರು ನಿನ್ನನ್ನು ಆರಾಧಿಸುವುದಿಲ್ಲ.
ಆ ಜನಾಂಗಗಳು ಯಾಕೋಬ್ಯರ ವಂಶವನ್ನು ನಾಶಮಾಡಿದರು.
    ಅವರು ಇಸ್ರೇಲನ್ನು ಸಂಪೂರ್ಣವಾಗಿ ನಾಶಮಾಡಿದರು.
    ಅವರು ಇಸ್ರೇಲರ ವಾಸಸ್ಥಳವನ್ನು ನಾಶಮಾಡಿದರು.

ಲೂಕ 20:45-21:4

ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆ

(ಮತ್ತಾಯ 23:1-36; ಮಾರ್ಕ 12:38-40; ಲೂಕ 11:37-54)

45 ಜನರೆಲ್ಲರೂ ಯೇಸುವಿನ ಮಾತನ್ನು ಆಲಿಸಿದರು. ಯೇಸು ತನ್ನ ಶಿಷ್ಯರಿಗೆ, 46 “ಧರ್ಮೋಪದೇಶಕರ ಕುರಿತು ಎಚ್ಚರಿಕೆಯಾಗಿರಿ. ಅವರು ಪ್ರಾಮುಖ್ಯ ವ್ಯಕ್ತಿಗಳಂತೆ ಬಟ್ಟೆ ಧರಿಸಿಕೊಂಡು ತಿರುಗಾಡುತ್ತಾರೆ. ಮಾರುಕಟ್ಟೆಗಳಲ್ಲಿ ಜನರಿಂದ ಗೌರವ ಹೊಂದಲು ಆಶಿಸುತ್ತಾರೆ. ಸಭಾಮಂದಿರಗಳಲ್ಲಿ ಮತ್ತು ಔತಣಕೂಟಗಳಲ್ಲಿ ಉನ್ನತವಾದ ಆಸನಗಳನ್ನು ಆಶಿಸುತ್ತಾರೆ. 47 ಆದರೆ ಅವರು ವಿಧವೆಯರಿಗೆ ಮೋಸಮಾಡಿ ಅವರ ಮನೆಗಳನ್ನು ಕಸಿದುಕೊಳ್ಳುತ್ತಾರೆ. ಬಳಿಕ ಉದ್ದವಾದ ಪ್ರಾರ್ಥನೆಗಳನ್ನು ಮಾಡಿ ಒಳ್ಳೆಯವರಂತೆ ನಟಿಸುತ್ತಾರೆ. ದೇವರು ಇವರನ್ನು ಕಠಿಣವಾದ ದಂಡನೆಗೆ ಗುರಿಪಡಿಸುತ್ತಾನೆ” ಎಂದು ಹೇಳಿದನು.

ನಿಜವಾದ ಕಾಣಿಕೆ

(ಮಾರ್ಕ 12:41-44)

21 ಕೆಲವು ಐಶ್ವರ್ಯವಂತರು ದೇವಾಲಯದ ಹಣದ ಪೆಟ್ಟಿಗೆಯಲ್ಲಿ ದೇವರಿಗಾಗಿ ತಮ್ಮ ಕಾಣಿಕೆಗಳನ್ನು ಹಾಕುವುದನ್ನು ಯೇಸು ಗಮನಿಸಿದನು. ಅಷ್ಟರಲ್ಲಿ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕನಾಣ್ಯಗಳನ್ನು ಪೆಟ್ಟಿಗೆಯಲ್ಲಿ[a] ಹಾಕಿದಳು. ಅದನ್ನು ಕಂಡ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ. ಈ ಬಡ ವಿಧವೆ ಕೇವಲ ಎರಡು ಚಿಕ್ಕ ತಾಮ್ರದ ನಾಣ್ಯಗಳನ್ನು ಕೊಟ್ಟಳು. ಆದರೆ ಆಕೆ ನಿಜವಾಗಿಯೂ, ಆ ಐಶ್ವರ್ಯವಂತರೆಲ್ಲರಿಗಿಂತ ಹೆಚ್ಚು ಕೊಟ್ಟಳು. ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International