Revised Common Lectionary (Semicontinuous)
ಕುಂಬಾರ ಮತ್ತು ಜೇಡಿಮಣ್ಣು
18 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು: 2 “ಯೆರೆಮೀಯನೇ, ನೀನು ಕುಂಬಾರನ ಮನೆಗೆ ಹೋಗು. ನಾನು ಕುಂಬಾರನ ಮನೆಯಲ್ಲಿಯೇ ನಿನಗೆ ಸಂದೇಶವನ್ನು ಕೊಡುತ್ತೇನೆ.”
3 ನಾನು ಕುಂಬಾರನ ಮನೆಗೆ ಹೋದೆನು. ಅವನು ಜೇಡಿಮಣ್ಣನ್ನು ಉಪಯೋಗಿಸಿ ಚಕ್ರದಿಂದ ಕೆಲಸ ಮಾಡುವದನ್ನು ನಾನು ಕಂಡೆನು. 4 ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನ್ನು ಮಾಡುತ್ತಿದ್ದನು. ಆ ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದ್ದರಿಂದ ಆ ಕುಂಬಾರನು ಪುನಃ ಆ ಜೇಡಿಮಣ್ಣನ್ನು ಬಳಸಿ ಮತ್ತೊಂದು ಮಡಕೆಯನ್ನು ಮಾಡಿದನು. ಮಡಕೆಗೆ ತಾನು ಬಯಸಿದ ಆಕಾರವನ್ನು ಕೊಡಲು ತನ್ನ ಕೈಗಳನ್ನು ಉಪಯೋಗಿಸಿದನು.
5 ಆಗ ನನಗೆ ಯೆಹೋವನಿಂದ ಈ ಸಂದೇಶ ಬಂದಿತು: 6 “ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಬುದನ್ನು ನೀವು ಬಲ್ಲಿರಿ. ನೀವು ಕುಂಬಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಬಾರನಂತಿದ್ದೇನೆ. 7 ಒಮ್ಮೆ ನಾನು ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕುರಿತು ಮಾತನಾಡುವಾಗ ಆ ಜನಾಂಗವನ್ನು ನಾನು ಖಂಡಿಸುವೆನೆಂದು ಮತ್ತು ಆ ಜನಾಂಗವನ್ನು ನಾನು ನಾಶಪಡಿಸುವೆನೆಂದು ಹೇಳಬಹುದು. 8 ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನ್ನು ಮತ್ತು ಜೀವನವನ್ನು ಪರಿವರ್ತಿಸಿಕೊಳ್ಳಬಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಆಗ ನಾನು ನನ್ನ ವಿಚಾರವನ್ನು ಬದಲಾಯಿಸಿ, ಆ ಜನಾಂಗವನ್ನು ನಾಶಪಡಿಸಬೇಕೆಂದು ಮಾಡಿದ ನನ್ನ ಮುಂಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರಬಹುದು. 9 ಇನ್ನೊಮ್ಮೆ ಒಂದು ಜನಾಂಗದ ಬಗ್ಗೆ ಹೇಳುವಾಗ ಆ ಜನಾಂಗವನ್ನು ನಾನು ಅಭಿವೃದ್ಧಿಗೆ ತರುತ್ತೇನೆ, ಅದನ್ನು ನೆಟ್ಟು ಕಟ್ಟುತ್ತೇನೆ ಎಂದು ಹೇಳಬಹುದು. 10 ಆದರೆ ಆ ಜನಾಂಗವು ನನ್ನ ಆಜ್ಞಾಪಾಲನೆಯನ್ನು ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನ್ನು ನೋಡಿ ಆ ಜನಾಂಗಕ್ಕೆ ನಾನು ಮಾಡಬೇಕೆಂದಿದ್ದ ಒಳಿತಿನ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬಹುದು.
11 “ಯೆರೆಮೀಯನೇ, ಯೆಹೂದದ ಜನರಿಗೆ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಜನರಿಗೆ ಯೆಹೋವನು ಹೀಗೆನ್ನುವನು: ‘ಈಗಲೇ ನಾನು ನಿಮಗೋಸ್ಕರ ತೊಂದರೆಗಳನ್ನು ಎಬ್ಬಿಸುತ್ತೇನೆ. ನಿಮ್ಮ ವಿರುದ್ಧ ಯೋಜನೆಗಳನ್ನು ಹಾಕುತ್ತಿದ್ದೇನೆ. ಆದ್ದರಿಂದ ನೀವು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಪ್ರತಿಯೊಬ್ಬನು ಪರಿವರ್ತನೆ ಹೊಂದಿ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು’ ಎಂದು ಹೇಳು.
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
1 ಯೇಸು ಕ್ರಿಸ್ತನ ನಿಮಿತ್ತ ಸೆರೆಯಲ್ಲಿರುವ ಪೌಲನೂ ಸಹೋದರನಾದ ತಿಮೊಥೆಯನೂ ನಮಗೆ ಪ್ರಿಯನಾದ ಮತ್ತು ನಮ್ಮ ಜೊತೆಕೆಲಸದವನಾದ ಫಿಲೆಮೋನನಿಗೆ, 2 ಸಹೋದರಿಯಾದ ಅಪ್ಫಿಯಳಿಗೆ, ನಮ್ಮ ಜೊತೆಸೈನಿಕನಾದ ಅರ್ಖಿಪ್ಪನಿಗೆ ಮತ್ತು ಫಿಲೆಮೋನನ ಮನೆಯಲ್ಲಿ ಸೇರಿಬರುವ ಸಭೆಯವರೆಲ್ಲರಿಗೆ ಬರೆಯುವ ಪತ್ರ.
3 ನಮ್ಮ ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮ್ಮೊಂದಿಗಿರಲಿ.
ಫಿಲೆಮೋನನ ಪ್ರೀತಿ ಮತ್ತು ನಂಬಿಕೆ
4 ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಯಾವಾಗಲೂ ನಿನಗಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 5 ದೇವರ ಪರಿಶುದ್ಧ ಜನರ ಮೇಲೆ ನಿನಗಿರುವ ಪ್ರೀತಿಯನ್ನು ಮತ್ತು ಪ್ರಭುವಾದ ಯೇಸುವಿನಲ್ಲಿ ನಿನಗಿರುವ ನಂಬಿಕೆಯನ್ನು ಕೇಳಿದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 6 ನೀನು ನಿನ್ನ ನಂಬಿಕೆಯನ್ನು ಹಂಚಿಕೊಳ್ಳುವುದರಲ್ಲಿ ಕಾರ್ಯ ನಿರತನಾಗಿರುವುದರ ಮೂಲಕ ಕ್ರಿಸ್ತನಲ್ಲಿ ನಮಗಿರುವ ಎಲ್ಲಾ ಸುವರಗಳನ್ನು ಅರ್ಥಮಾಡಿಕೊಳ್ಳುವಂತಾಗಲೆಂದು ಪ್ರಾರ್ಥಿಸುತ್ತೇನೆ. 7 ನನ್ನ ಸಹೋದರನೇ, ದೇವಜನರಿಗೆ ನೀನು ಪ್ರೀತಿಯನ್ನು ತೋರಿಸಿ ಅವರ ಹೃದಯಗಳನ್ನು ಸಂತೈಸಿರುವೆ. ಇದು ನನಗೆ ಹೆಚ್ಚಿನ ಸಂತಸವನ್ನೂ ನೆಮ್ಮದಿಯನ್ನೂ ತಂದುಕೊಟ್ಟಿದೆ.
ಒನೇಸಿಮನನ್ನು ಸಹೋದರನಂತೆ ಸೇರಿಸಿಕೊ
8 ನೀನು ಮಾಡಬೇಕಾದ ಕಾರ್ಯವೊಂದಿದೆ. ಅದನ್ನು ಮಾಡಬೇಕೆಂದು ಆಜ್ಞಾಪಿಸಲು ನನಗೆ ಕ್ರಿಸ್ತನಲ್ಲಿ ಅಧಿಕಾರವಿದೆ. 9 ಆದರೆ ನಾನು ನಿನಗೆ ಆಜ್ಞಾಪಿಸದೆ ಪ್ರೀತಿಯಿಂದ ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ. ಪೌಲನಾದ ನಾನು ಈಗ ವೃದ್ಧನಾಗಿದ್ದೇನೆ ಮತ್ತು ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯಲ್ಲಿದ್ದೇನೆ. 10 ನನ್ನ ಮಗನಾದ ಒನೇಸಿಮನಿಗಾಗಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ನಾನು ಸೆರೆಮನೆಯಲ್ಲಿರುವಾಗ ಅವನು ನನ್ನ ಮಗನಾದನು. 11 ಹಿಂದೆ ಅವನು ನಿನಗೆ ನಿಷ್ಪ್ರಯೋಜಕನಾಗಿದ್ದನು. ಆದರೆ ಈಗ ಅವನು ನಿನಗೂ ನನಗೂ ಪ್ರಯೋಜನ ಉಳ್ಳವನಾಗಿದ್ದಾನೆ.
12 ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸುತ್ತಿದ್ದೇನೆ. ಅವನೊಂದಿಗೆ ನನ್ನ ಹೃದಯವನ್ನೇ ಕಳುಹಿಸುತ್ತಿದ್ದೇನೆ. 13 ನಾನೀಗ ಸುವಾರ್ತೆಗೋಸ್ಕರ ಸೆರೆಯಲ್ಲಿರುವಾಗ ನನ್ನ ಸಹಾಯಕ್ಕೆ ಅವನನ್ನು ಇರಿಸಿಕೊಳ್ಳಬೇಕೆಂದಿದ್ದೆನು. ಇಲ್ಲಿ ಅವನು ನನಗೆ ಸಹಾಯ ಮಾಡುತ್ತಾ ನಿನ್ನ ಸೇವೆಯನ್ನೂ ಮಾಡಬಹುದಾಗಿತ್ತು. 14 ಆದರೆ ಈ ವಿಷಯದಲ್ಲಿ ನಿನ್ನ ಒಪ್ಪಿಗೆ ಪಡೆಯದೆ ನಿರ್ಧಾರ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಏಕೆಂದರೆ ನೀನು ಮಾಡುವ ಒಳ್ಳೆಕಾರ್ಯವು ಮನಃ ಪೂರ್ವಕವಾಗಿರಬೇಕೇ ಹೊರತು ಬಲತ್ಕಾರದಿಂದಾಗಕೂಡದು.
15 ಒನೇಸಿಮನು ಸ್ವಲ್ಪಕಾಲ ನಿನ್ನನ್ನು ಅಗಲಿದ್ದನು. ಬಹುಶಃ ಅವನು ಎಂದೆಂದಿಗೂ ನಿನ್ನವನಾಗಬೇಕೆಂದು ಹಾಗಾಯಿತೇನೊ! 16 ಇನ್ನು ಮೇಲೆ ಅವನು ನಿನಗೆ ಕೇವಲ ಗುಲಾಮನಾಗಿರದೆ ಗುಲಾಮನಿಗಿಂತಲೂ ಹೆಚ್ಚಿನ ಪ್ರಿಯ ಸಹೋದರನಾಗಿದ್ದಾನೆ. ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದರೆ ನೀನು ಅವನನ್ನು ಮತ್ತಷ್ಟು ಹೆಚ್ಚಾಗಿ ಪ್ರೀತಿಸುವೆ. ನೀನು ಅವನನ್ನು ಮನುಷ್ಯನೆಂದು ಮತ್ತು ಪ್ರಭುವಿನಲ್ಲಿ ಒಬ್ಬ ಸಹೋದರನೆಂದು ಪ್ರೀತಿಸುವೆ.
17 ನನ್ನನ್ನು ನಿನ್ನ ಸಹಭಾಗಿಯೆಂದು ನೀನು ಒಪ್ಪಿಕೊಳ್ಳುವುದಾದರೆ, ಒನೇಸಿಮನನ್ನು ಮತ್ತೆ ಸೇರಿಸಿಕೊ. ನೀನು ನನ್ನನ್ನು ಬರಮಾಡಿಕೊಂಡಂತೆ ಅವನನ್ನೂ ಬರಮಾಡಿಕೊ. 18 ಅವನು ನಿನಗೇನಾದರೂ ತಪ್ಪು ಮಾಡಿದ್ದರೆ ಅದನ್ನು ನನ್ನ ಮೇಲೆ ಹೊರಿಸು; ನಿನಗೇನಾದರೂ ಕೊಡಬೇಕಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು. 19 ಪೌಲನಾದ ನಾನು ನನ್ನ ಸ್ವಂತ ಕೈಗಳಿಂದ ಇದನ್ನು ಬರೆಯುತ್ತಿದ್ದೇನೆ. ಒನೇಸಿಮನು ನಿನಗೆ ಏನಾದರೂ ಕೊಡಬೇಕಾಗಿದ್ದರೆ ನಾನು ಅದನ್ನು ಕೊಡುತ್ತೇನೆ. ನಿನ್ನ ಆತ್ಮಿಕ ಜೀವಿತದ ವಿಷಯದಲ್ಲಿ ನೀನು ನಿನಗೆ ನನಗೆಷ್ಟು ಋಣಿಯಾಗಿರುವೆ ಎಂದು ನಾನೇನೂ ಹೇಳುವುದಿಲ್ಲ. 20 ನನ್ನ ಸಹೋದರನೇ, ಪ್ರಭುವಿನಲ್ಲಿ ನಾನು ನಿನ್ನಿಂದ ಒಂದು ಸಹಾಯವನ್ನು ಹೊಂದಿಕೊಳ್ಳಬಹುದೇ? ಅದೇನೆಂದರೆ ನೀನು ನನ್ನ ಹೃದಯವನ್ನು ಕ್ರಿಸ್ತನಲ್ಲಿ ಸಂತೈಸು. 21 ನಾನು ಕೇಳಿಕೊಂಡದ್ದನ್ನು ನೀನು ಮಾಡುವೆ ಎಂದು ನನಗೆ ಗೊತ್ತಿರುವುದರಿಂದಲೇ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ಕೇಳಿದ್ದಕ್ಕಿಂತಲೂ ಹೆಚ್ಚಿಗೆ ನೀನು ಮಾಡುವೆ ಎಂದು ನನಗೆ ತಿಳಿದಿದೆ.
ಯೋಜನೆಯ ಅಗತ್ಯತೆ
(ಮತ್ತಾಯ 10:37-38)
25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.
28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.
31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.
33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!
Kannada Holy Bible: Easy-to-Read Version. All rights reserved. © 1997 Bible League International