Revised Common Lectionary (Semicontinuous)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
20 ಆಗ ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಕಾರ್ಯದರ್ಶಿಯಾದ ಶಾಫಾನ್ ಮತ್ತು ಸೇವಕನಾದ ಅಸಾಯ ಇವರಿಗೆ ಹೇಳಿದ್ದೇನೆಂದರೆ, 21 “ಹೋಗಿ ನನ್ನ ವಿಷಯವಾಗಿಯೂ ಇಸ್ರೇಲ್ ಮತ್ತು ಯೆಹೂದದಲ್ಲಿರುವ ಜನರಿಗೋಸ್ಕರವಾಗಿಯೂ ಯೆಹೋವನಲ್ಲಿ ವಿಚಾರಿಸಿರಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಯಾಕೆಂದರೆ ನಮ್ಮ ಪೂರ್ವಿಕರು ಆತನ ಧರ್ಮಶಾಸ್ತ್ರದ ಪ್ರಕಾರ ನಡೆದುಕೊಂಡಿಲ್ಲ. ಈ ಪುಸ್ತಕದಲ್ಲಿ ಮಾಡಬೇಕೆಂದು ಹೇಳಿದ್ದನ್ನು ಅವರು ಮಾಡದೆ ಹೋಗಿದ್ದಾರೆ” ಎಂದು ಹೇಳಿದನು.
22 ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು. 23 ಹುಲ್ದಳು ಅವರಿಗೆ, “ಅರಸನಾದ ಯೋಷೀಯನಿಗೆ ಹೋಗಿ ತಿಳಿಸಿರಿ. 24 ಯೆಹೋವನು ಹೇಳುವುದೇನೆಂದರೆ, ‘ನಾನು ಈ ಸ್ಥಳಕ್ಕೂ ಇಲ್ಲಿ ವಾಸಿಸುವವರಿಗೂ ಸಂಕಟವನ್ನು ಬರಮಾಡುವೆನು. ಯೆಹೂದ ದೇಶದ ಅರಸನ ಮುಂದೆ ಓದಿದಂಥ ಪುಸ್ತಕದಲ್ಲಿ ಬರೆಯಿಸಿದ ಎಲ್ಲಾ ಶಾಪಗಳನ್ನು ನಾನು ಬರಮಾಡುವೆನು. 25 ಯಾಕೆಂದರೆ ಜನರು ನನ್ನನ್ನು ತೊರೆದು ಸುಳ್ಳುದೇವರುಗಳಿಗೆ ಧೂಪಹಾಕಿದರು. ಅವರು ತಮ್ಮ ಕೆಟ್ಟಕಾರ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ಉರಿಯುವ ಬೆಂಕಿಯಂತಿರುವ ನನ್ನ ಕೋಪಾಗ್ನಿಯನ್ನು ಆರಿಸಲು ಸಾಧ್ಯವಿಲ್ಲ.’
26 “ಆದರೆ ಯೆಹೋವನನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಾದ ಯೋಷೀಯನಿಗೆ ಹೀಗೆ ಹೇಳಿರಿ: ‘ನೀನು ಸ್ವಲ್ಪಕಾಲದ ಹಿಂದೆ ಕೇಳಿದ ವಿಷಯಗಳ ಬಗ್ಗೆ ಇಸ್ರೇಲಿನ ಯೆಹೋವನು ಹೇಳುವುದೇನೆಂದರೆ, 27 ಯೋಷೀಯನೇ, ನೀನು ನನ್ನ ಮಾತುಗಳನ್ನು ಕೇಳಿದಾಗ ನನ್ನ ಮುಂದೆ ತಗ್ಗಿಸಿಕೊಂಡು ಪಶ್ಚಾತ್ತಾಪಪಟ್ಟು ನಿನ್ನ ಬಟ್ಟೆಗಳನ್ನು ಹರಿದುಕೊಂಡೆ. ನನ್ನ ಮುಂದೆ ನೀನು ಗೋಳಾಡಿದೆ. ನಿನ್ನ ಹೃದಯವು ಮೃದುವಾದದ್ದರಿಂದ, ನಿನ್ನನ್ನು ಲಕ್ಷಿಸಿದೆನು. 28 ನಿನ್ನನ್ನು ನಿನ್ನ ಪೂರ್ವಿಕರ ಬಳಿಗೆ ತೆಗೆದುಕೊಳ್ಳುತ್ತೇನೆ. ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆ. ನೀನು ನಿನ್ನ ಸಮಾಧಿಗೆ ಸಮಾಧಾನದಿಂದ ಸೇರುವೆ. ನಾನು ಈ ಸ್ಥಳದ ಮೇಲೂ ಈ ಸ್ಥಳದಲ್ಲಿ ವಾಸಿಸುವವರ ಮೇಲೂ ತರುವ ಸಂಕಟಗಳಲ್ಲಿ ನೀನು ಒಂದಾನ್ನಾದರೂ ಅನುಭವಿಸುವದಿಲ್ಲ.’” ಹಿಲ್ಕೀಯನೂ ಅರಸನ ಸೇವಕರೂ ಈ ಸಂದೇಶವನ್ನು ಅರಸನಾದ ಯೋಷೀಯನಿಗೆ ತಂದರು.
29 ಅರಸನಾದ ಯೋಷೀಯನು ಯೆಹೂದದ ಮತ್ತು ಜೆರುಸಲೇಮಿನ ಪ್ರಧಾನರನ್ನು ತನ್ನ ಬಳಿಗೆ ಕರೆಯಿಸಿದನು. 30 ಅರಸನೂ ಯೆಹೂದದಲ್ಲಿ ವಾಸಿಸುವ ಜನರೂ ಜೆರುಸಲೇಮಿನಲ್ಲಿ ವಾಸಿಸುವ ಜನರೂ ಯಾಜಕರೂ ಲೇವಿಯರೂ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೆ ತಮ್ಮ ಅರಸನೊಂದಿಗೆ ಇದ್ದರು. ಯೋಷೀಯನು ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದನು. ಆ ಪುಸ್ತಕವು ದೇವಾಲಯದಲ್ಲಿ ಸಿಕ್ಕಿತ್ತು. 31 ಆಮೇಲೆ ಅರಸನು ತನ್ನ ಸ್ಥಳದಲ್ಲಿ ಎದ್ದುನಿಂತು, ಯೆಹೋವನ ಎಲ್ಲಾ ಕಟ್ಟಳೆಗಳಿಗೆ ವಿಧೇಯನಾಗಿ ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ಅನುಸರಿಸುವುದಾಗಿ ಪ್ರಮಾಣಮಾಡಿದನು. 32 ಆಮೇಲೆ ಎಲ್ಲಾ ಜೆರುಸಲೇಮಿನವರಿಂದಲೂ ಮತ್ತು ಬೆನ್ಯಾಮೀನ್ಯರಿಂದಲೂ ಪ್ರಮಾಣ ಮಾಡಿಸಿದನು. ತಮ್ಮ ಪೂರ್ವಿಕರು ವಿಧೇಯರಾಗಿದ್ದ ದೇವರಿಗೆ ತಾವೂ ವಿಧೇಯರಾಗಿರುವುದಾಗಿ ಅವರು ಪ್ರಮಾಣ ಮಾಡಿದರು. 33 ಇಸ್ರೇಲ್ ಜನರ ಬಳಿ ನಾನಾ ಜನಾಂಗದವರ ವಿಗ್ರಹಗಳಿದ್ದವು. ಆದರೆ ಯೋಷೀಯನು ಆ ವಿಗ್ರಹಗಳನ್ನೆಲ್ಲಾ ನಾಶಮಾಡಿದನು. ಇಸ್ರೇಲರು ದೇವರಾದ ಯೆಹೋವನ ಸೇವೆಮಾಡುವಂತೆ ಯೋಷೀಯನು ಮಾಡಿದನು. ಯೋಷೀಯನು ಬದುಕಿದ್ದಷ್ಟು ಕಾಲ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಸೇವೆಮಾಡಿದರು.
ಸಿಮೆಯೋನನು ಯೇಸುವನ್ನು ನೋಡಿದನು
25 ಸಿಮೆಯೋನನೆಂಬ ಒಬ್ಬ ಮನುಷ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಒಳ್ಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇಸ್ರೇಲರಿಗೆ ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು. 26 ಪ್ರಭುವು ಕಳುಹಿಸುವ ಕ್ರಿಸ್ತನನ್ನು ನೋಡುವ ತನಕ ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದ್ದನು. 27 ಸಿಮೆಯೋನನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಯೆಹೂದ್ಯರ ಧರ್ಮಶಾಸ್ತ್ರದ ವಿಧಿಗಳನ್ನು ಪೂರೈಸಲು ಮರಿಯಳು ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೇಸುವನ್ನು ದೇವಾಲಯಕ್ಕೆ ತಂದರು. 28 ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:
29 “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣೆಯಾಗಲಿ.
30 ನೀನು ದಯಪಾಲಿಸಿದ ರಕ್ಷಕನನ್ನು[a] ಕಣ್ಣಾರೆಕಂಡೆನು.
31 ನೀನು ಆತನನ್ನು ಜನರೆಲ್ಲರಿಗೆ ಪ್ರತ್ಯಕ್ಷ ಮಾಡಿರುವೆ.
32 ಆತನು ಯೆಹೂದ್ಯರಲ್ಲದ ಜನರಿಗೆ ನಿನ್ನ ಮಾರ್ಗವನ್ನು ತೋರಿಸುವ ಬೆಳಕಾಗಿದ್ದಾನೆ.
ಆತನಿಂದ ನಿನ್ನ ಜನರಾದ ಇಸ್ರೇಲರಿಗೆ ಕೀರ್ತಿಯಾಗುವುದು.”
33 ಸಿಮೆಯೋನನು ಮಗುವಿನ ಕುರಿತಾಗಿ ಹೇಳಿದ ಮಾತುಗಳನ್ನು ಕೇಳಿ ತಂದೆತಾಯಿಗಳಿಗೆ ಆಶ್ಚರ್ಯವಾಯಿತು. 34 ಬಳಿಕ ಸಿಮೆಯೋನನು ಅವರನ್ನು ಆಶೀರ್ವದಿಸಿ ಮರಿಯಳಿಗೆ, “ಈ ಮಗುವಿನ ನಿಮಿತ್ತ ಯೆಹೂದ್ಯರಲ್ಲಿ ಅನೇಕರು ಬೀಳುವರು. ಅನೇಕರು ಏಳುವರು. ಕೆಲವರು ಅಂಗೀಕರಿಸರು ಎಂಬುದಕ್ಕೆ ಈತನು ದೇವರಿಂದ ಬಂದ ಗುರುತಾಗಿರುವನು. 35 ಜನರು ಗುಟ್ಟಾಗಿ ಯೋಚಿಸುವ ಸಂಗತಿಗಳು ಬಯಲಾಗುವವು. ಮುಂದೆ ಸಂಭವಿಸುವ ಸಂಗತಿಗಳಿಂದ ನಿನ್ನ ಹೃದಯಕ್ಕೆ ಅಲಗು ನಾಟಿದಂತಾಗುವುದು” ಎಂದು ಹೇಳಿದನು.
ಅನ್ನಳು ಯೇಸುವನ್ನು ನೋಡಿದಳು
36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ[b] ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು. 37 ತನ್ನ ಉಳಿದ ಜೀವಮಾನವೆಲ್ಲಾ ವಿಧವೆಯಾಗಿದ್ದ ಆಕೆಗೆ ಈಗ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅನ್ನಳು ಯಾವಾಗಲೂ ದೇವಾಲಯದಲ್ಲಿಯೇ ಇದ್ದಳು. ಆಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಆಕೆ ಉಪವಾಸ ಮಾಡುತ್ತಾ ಮತ್ತು ಹಗಲಿರುಳು ಪ್ರಾರ್ಥಿಸುತ್ತಾ ದೇವರನ್ನು ಆರಾಧಿಸುತ್ತಿದ್ದಳು.
38 ಅವಳು ಅದೇ ಸಮಯದಲ್ಲಿ ಅಲ್ಲಿಗೆ ಬಂದು, ದೇವರಿಗೆ ಸ್ತೋತ್ರ ಸಲ್ಲಿಸಿ ದೇವರು ಜೆರುಸಲೇಮಿಗೆ ದಯಪಾಲಿಸುವ ಬಿಡುಗಡೆಯನ್ನು ಎದುರುನೋಡುತ್ತಿದ್ದ ಜನರಿಗೆ ಯೇಸುವಿನ ವಿಷಯವಾಗಿ ತಿಳಿಸಿದಳು.
Kannada Holy Bible: Easy-to-Read Version. All rights reserved. © 1997 Bible League International