Revised Common Lectionary (Semicontinuous)
ಸ್ತುತಿಗೀತೆ.
67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
ಪ್ರಸನ್ನಮುಖದಿಂದ ನಮ್ಮನ್ನು ನೋಡು.
2 ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
3 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
4 ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
5 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
6 ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
7 ಆತನು ನಮ್ಮನ್ನು ಆಶೀರ್ವದಿಸಲಿ.
ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.
ಜ್ಞಾನದ ಮೌಲ್ಯ
2 ನನ್ನ ಮಗನೇ, ನಾನು ಹೇಳುವ ಈ ಮಾತುಗಳನ್ನು ಸ್ವೀಕಾರಮಾಡಿಕೊ. ನನ್ನ ಆಜ್ಞೆಗಳನ್ನು ನೆನಪು ಮಾಡಿಕೊ. 2 ಜ್ಞಾನಕ್ಕೆ ಕಿವಿಗೊಡು; ಅದನ್ನು ಅರ್ಥಮಾಡಿಕೊಳ್ಳಲು ನಿನ್ನಿಂದಾದಷ್ಟು ಪ್ರಯತ್ನಿಸು. 3 ಬುದ್ಧಿಗಾಗಿ ಮೊರೆಯಿಡು! ವಿವೇಕಕ್ಕಾಗಿ ಕೂಗಿಕೊ! 4 ಬೆಳ್ಳಿಯನ್ನು ಹುಡುಕುವಂತೆ ವಿವೇಕವನ್ನು ಹುಡುಕು. ಅಡಗಿರುವ ಭಂಡಾರದಂತೆ ಅದನ್ನು ಹುಡುಕು. 5 ಆಗ ನೀನು ಯೆಹೋವನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವೆ; ದೈವಜ್ಞಾನವನ್ನು ಹೊಂದಿಕೊಳ್ಳುವೆ.
ಪೌಲ ಬಾರ್ನಬರು ಬೇರ್ಪಡುವರು
36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಅನೇಕ ಪಟ್ಟಣಗಳಲ್ಲಿ ಪ್ರಭುವಿನ ಸಂದೇಶವನ್ನು ತಿಳಿಸಿದೆವು. ಆ ಪಟ್ಟಣಗಳಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ” ಎಂದು ಹೇಳಿದನು.
37 ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಬಾರ್ನಬನ ಇಷ್ಟವಾಗಿತ್ತು. 38 ಆದರೆ ಅವರ ಮೊದಲನೆ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಪಾಂಫೀಲಿಯದ ಬಳಿ ಬಿಟ್ಟುಹೋದನು. ಅವನು ಅವರೊಂದಿಗೆ ಸೇವೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ಅವನನ್ನು ಕರೆದುಕೊಂಡು ಹೋಗುವುದು ಒಳ್ಳೆಯ ಆಲೋಚನೆಯಲ್ಲವೆಂದು ಪೌಲನು ಯೋಚಿಸಿದನು. 39 ಇದರ ಬಗ್ಗೆ ಪೌಲ ಮತ್ತು ಬಾರ್ನಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಅವರಿಬ್ಬರೂ ಬೇರ್ಪಟ್ಟು ಬೇರೆ ಮಾರ್ಗಗಳಲ್ಲಿ ಹೋದರು. ಬಾರ್ನಬನು ಮಾರ್ಕನೊಂದಿಗೆ ಸೈಪ್ರಸ್ಗೆ ನೌಕಾಯಾನ ಮಾಡಿದನು.
40 ಪೌಲನು ತನ್ನೊಂದಿಗೆ ಸೀಲನನ್ನು ಕರೆದುಕೊಂಡು ಹೋದನು. ಅಂತಿಯೋಕ್ಯದ ಸಹೋದರರು ಪೌಲನನ್ನು ಪ್ರಭುವಿನ ಆಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು. 41 ಪೌಲ ಸೀಲರು ಸಿರಿಯಾ ಮತ್ತು ಸಿಲಿಸಿಯ ನಾಡುಗಳಲ್ಲಿ ಹಾದು ಹೋಗುತ್ತಾ ಅಲ್ಲಿದ್ದ ಸಭೆಗಳಿಗೆ ಬಲವಾಗಿ ಬೆಳೆಯಲು ನೆರವು ನೀಡಿದರು.
Kannada Holy Bible: Easy-to-Read Version. All rights reserved. © 1997 Bible League International