Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಯೆಹೆಜ್ಕೇಲ 20:39-44

39 ಇಸ್ರೇಲ್ ಜನರೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ಹೊಲಸು ವಿಗ್ರಹಗಳನ್ನು ಆರಾಧಿಸಬೇಕೆನ್ನುವವನು ಹೋಗಿ ಆರಾಧಿಸಲಿ. ಮುಂದಿನ ಕಾಲದಲ್ಲಂತೂ ನೀವು ನನ್ನ ಬುದ್ಧಿಮಾತನ್ನು ಕೇಳೇ ಕೇಳುವಿರಿ. ನನ್ನ ಪರಿಶುದ್ಧ ಹೆಸರನ್ನು ನೀವು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”

40 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಎತ್ತರವಾದ ನನ್ನ ಪವಿತ್ರಪರ್ವತಕ್ಕೆ ಜನರು ಬರಲೇಬೇಕು. ಅಲ್ಲಿ ಅವರು ನನ್ನ ಸೇವೆ ಮಾಡಲೇಬೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನ್ನು ಸ್ವೀಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನ್ನು ಪ್ರಥಮ ಫಲಗಳನ್ನು ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನ್ನು ನನಗೆ ತರಬೇಕೆಂದು ಅಪೇಕ್ಷಿಸುತ್ತೇನೆ. 41 ಆಗ ನಿಮ್ಮ ಕಾಣಿಕೆಯ ಸುವಾಸನೆಯಿಂದ ಸಂತೋಷಭರಿತನಾಗುವೆನು. ಇದು ನಿಮ್ಮನ್ನು ಹಿಂದಕ್ಕೆ ನಿಮ್ಮ ದೇಶಕ್ಕೆ ಕರೆತಂದಾಗ ಆಗುವದು. ನಾನು ನಿಮ್ಮನ್ನು ಅನೇಕ ದೇಶಗಳಲ್ಲಿ ಚದರಿಸಿದೆನು. ಆದರೆ ನಾನು ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಮೂಲಕ ನನ್ನ ಪವಿತ್ರತೆಯನ್ನು ಪ್ರದರ್ಶಿಸುವೆನು. ಆ ಎಲ್ಲಾ ದೇಶಗಳವರು ಇದನ್ನು ನೋಡುವರು. 42 ನಾನು ನಿಮ್ಮನ್ನು ತಿರುಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಇಸ್ರೇಲ್ ದೇಶಕ್ಕೆ ಬರಮಾಡಿದಾಗ ನಾನೇ ಯೆಹೋವನೆಂದು ಅರಿತುಕೊಳ್ಳುವಿರಿ. 43 ನಿಮ್ಮನ್ನು ನಿಮ್ಮ ದುಷ್ಟತ್ವದಿಂದ ಹೊಲಸು ಮಾಡಿಕೊಂಡದ್ದನ್ನು ಅಲ್ಲಿ ಜ್ಞಾಪಕಮಾಡಿಕೊಳ್ಳುವಿರಿ. ಆಗ ನೀವು ನಾಚಿಕೆಪಡುವಿರಿ. 44 ಇಸ್ರೇಲ್ ಜನಾಂಗಗಳೇ, ನೀವು ಅನೇಕ ಕೆಟ್ಟ ವಿಷಯಗಳನ್ನು ಮಾಡಿರುತ್ತೀರಿ. ಆ ದುಷ್ಕೃತ್ಯಗಳಿಗಾಗಿ ನೀವು ನಾಶವಾಗಿ ಹೋಗಬೇಕಾಗಿತ್ತು. ಆದರೆ ನನ್ನ ಒಳ್ಳೆಯ ಹೆಸರಿನ ಸಲುವಾಗಿ ನೀವು ಹೊಂದಬೇಕಾದ ಶಿಕ್ಷೆಯನ್ನು ನಾನು ನಿಮಗೆ ವಿಧಿಸುವುದಿಲ್ಲ. ಆಗ ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ಪ್ರಕಟನೆ 6:1-7:4

ಕುರಿಮರಿಯು ಸುರುಳಿಯನ್ನು ಬಿಚ್ಚಿತು

ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು. ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.

ಆ ಕುರಿಮರಿಯು ಎರಡನೆಯ ಮುದ್ರೆಯನ್ನು ತೆಗೆಯಿತು. ಆಗ ಎರಡನೆಯ ಜೀವಿಯು, “ಬಾ!” ಎಂದು ಹೇಳಿದ್ದನ್ನು ಕೇಳಿದೆನು. ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಈ ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.

ಆ ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ನಾನು ಕೇಳಿದೆನು. ನಾನು ನೋಡಿದಾಗ, ನನ್ನ ಮುಂದೆ ಒಂದು ಕಪ್ಪು ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲಿದ್ದ ಸವಾರನು ತನ್ನ ಕೈಯಲ್ಲಿ ಎರಡು ತಕ್ಕಡಿಗಳನ್ನು ಹಿಡಿದಿದ್ದನು. ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಆ ನಾಲ್ಕು ಜೀವಿಗಳಿದ್ದ ಸ್ಥಳದಿಂದ ಈ ಧ್ವನಿಯು ಹೊರ ಹೊಮ್ಮಿತು. ಆ ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.

ಆ ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು. ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು.[a] ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.

ಕುರಿಮರಿಯು ಐದನೆಯ ಮುದ್ರೆಯನ್ನು ತೆರೆಯಿತು. ಆಗ ಯಜ್ಞವೇದಿಕೆಯ ಕೆಳಗೆ ಕೆಲವು ಆತ್ಮಗಳಿರುವುದನ್ನು ನಾನು ನೋಡಿದೆನು. ದೇವರ ಸಂದೇಶಕ್ಕೂ ತಾವು ಸ್ವೀಕರಿಸಿ ಕೊಂಡ ಸತ್ಯಕ್ಕೂ ನಂಬಿಗಸ್ತರಾಗಿದ್ದ ಕಾರಣ ಕೊಲ್ಲಲ್ಪಟ್ಟವರ ಆತ್ಮಗಳೇ ಅವು. 10 ಈ ಆತ್ಮಗಳು, “ಪವಿತ್ರನಾದ ಮತ್ತು ಸತ್ಯವಂತನಾದ ಪ್ರಭುವೇ, ನಮ್ಮನ್ನು ಕೊಂದ ಜನರಿಗೆ ತೀರ್ಪು ನೀಡಲು ಮತ್ತು ಅವರನ್ನು ದಂಡಿಸಲು ನೀನು ಎಷ್ಟು ಕಾಲ ತೆಗೆದುಕೊಳ್ಳುವೆ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದವು. 11 ಆ ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಬಿಳಿ ನಿಲುವಂಗಿಯನ್ನು ಕೊಡಲಾಯಿತು. ಇನ್ನೂ ಸ್ವಲ್ಪಕಾಲ ಕಾಯುವಂತೆ ಅವುಗಳಿಗೆ ತಿಳಿಸಲಾಯಿತು. ಅವರ ಸಹೋದರರಲ್ಲಿ ಕೆಲವರು ಇನ್ನೂ ಕ್ರಿಸ್ತನ ಸೇವೆಯಲ್ಲಿದ್ದಾರೆ. ಅವರೂ ಕೊಲ್ಲಲ್ಪಡಬೇಕು. ಈ ಕೊಲೆಗಳೆಲ್ಲಾ ಮುಗಿಯುವ ತನಕ ಕಾಯಬೇಕೆಂದು ಆ ಆತ್ಮಗಳಿಗೆ ಹೇಳಲಾಯಿತು.

12 ಆ ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. 13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು. 14 ಆಕಾಶವು ವಿಭಾಗಗೊಂಡು ಸುರುಳಿಯಂತೆ ಸುತ್ತಲ್ಪಟ್ಟಿತು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ನೆಲೆಯಿಂದ ಚಲಿಸಿದವು.

15 ಆಗ ಲೋಕದ ರಾಜರುಗಳೂ ಅಧಿಪತಿಗಳೂ ಸೇನಾಧಿಪತಿಗಳೂ ಶ್ರೀಮಂತರೂ ಬಲಿಷ್ಠರೂ ಪ್ರತಿಯೊಬ್ಬ ಗುಲಾಮನೂ ಸ್ವತಂತ್ರ ಪ್ರಜೆಯೂ ಗವಿಗಳಲ್ಲಿ ಮತ್ತು ಬೆಟ್ಟಗಳ ಮೇಲಿನ ಬಂಡೆಗಳ ಮರೆಯಲ್ಲಿ ಅಡಗಿಕೊಂಡರು. 16 ಆ ಜನರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ, “ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುಳಿತಿರುವಾತನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿ; ಕುರಿಮರಿಯಾದಾತನ ಕೋಪದಿಂದ ನಮ್ಮನ್ನು ಮರೆಮಾಡಿ; 17 ಆತನ ಕೋಪವು ಪ್ರಕಟವಾಗುವ ಮಹಾದಿನವು ಬಂದುಬಿಟ್ಟಿದೆ. ಆ ಕೋಪದ ಎದುರಿನಲ್ಲಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದರು.

ಇಸ್ರೇಲಿನ 1,44,000 ಜನರು

ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರುವುದನ್ನು ನಾನು ನೋಡಿದೆನು. ಗಾಳಿಯು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಬೀಸದಂತೆ ಅವರು ಭೂಮಿಯ ನಾಲ್ಕು ದಿಕ್ಕುಗಳ ಗಾಳಿಯನ್ನು ತಡೆಹಿಡಿದಿದ್ದರು. ನಂತರ ಬೇರೊಬ್ಬ ದೇವದೂತನು ಪೂರ್ವದಿಕ್ಕಿನ ಕಡೆಯಿಂದ ಬರುತ್ತಿರುವುದನ್ನು ನಾನು ನೋಡಿದೆನು. ಜೀವಸ್ವರೂಪನಾದ ದೇವರ ಮುದ್ರೆಯು ಈ ದೇವದೂತನ ಬಳಿಯಿತ್ತು. ಈ ದೇವದೂತನು ನಾಲ್ಕುಮಂದಿ ದೇವದೂತರನ್ನು ಗಟ್ಟಿಯಾದ ಧ್ವನಿಯಲ್ಲಿ ಕರೆದನು. ಭೂಮಿಗೆ ಮತ್ತು ಸಮುದ್ರಕ್ಕೆ ತೊಂದರೆ ಮಾಡುವುದಕ್ಕೆ ಅಧಿಕಾರವನ್ನು ದೇವರು ಈ ನಾಲ್ವರು ದೇವದೂತರಿಗೆ ನೀಡಿದ್ದನು. ಆ ದೇವದೂತನು ಈ ನಾಲ್ವರು ದೇವದೂತರಿಗೆ, “ನಮ್ಮ ದೇವರ ಸೇವೆಮಾಡುವ ಜನರ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಗಾಗಲಿ ಸಮುದ್ರಕ್ಕಾಗಲಿ ಮರಗಳಿಗಾಗಲಿ ತೊಂದರೆಯನ್ನು ಮಾಡಬೇಡಿ” ಎಂದು ಕೂಗಿ ಹೇಳಿದನು.

ನಂತರ, ಮುದ್ರೆ ಒತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಅವರ ಒಟ್ಟು ಸಂಖ್ಯೆ 1,44,000 ಮಂದಿ. ಅವರು ಇಸ್ರೇಲರ ಹನ್ನೆರಡು ಕುಲಗಳಿಗೆ ಸೇರಿದವರಾಗಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International