Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 16:9-15

ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು. ಈ ದರ್ಶನದಲ್ಲಿ ಮಕೆದೋನಿಯದ ನಾಡಿನಿಂದ ಬಂದ ಒಬ್ಬ ಮನುಷ್ಯನು ಅಲ್ಲಿ ನಿಂತುಕೊಂಡು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಬೇಡಿಕೊಂಡನು. 10 ಪೌಲನು ಆ ದರ್ಶನವನ್ನು ಕಂಡಕೂಡಲೇ, ಅಲ್ಲಿಯ ಜನರಿಗೆ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ದೇವರು ನಮ್ಮನ್ನು ಕರೆದಿದ್ದಾನೆಂದು ಅರ್ಥಮಾಡಿಕೊಂಡು ಮಕೆದೋನಿಯಕ್ಕೆ ಹೋಗಲು ನಾವು ಸಿದ್ಧರಾದೆವು.

ಲಿಡಿಯಳ ಪರಿವರ್ತನೆ

11 ನಾವು ತ್ರೋವದಿಂದ ಹಡಗಿನಲ್ಲಿ ಹೊರಟು ಸಮೊಥ್ರ ದ್ವೀಪಕ್ಕೆ ಬಂದು ಮರುದಿನ ನೆಯಪೊಲಿಸ್ ಪಟ್ಟಣವನ್ನು ತಲುಪಿ, 12 ಅಲ್ಲಿಂದ ಫಿಲಿಪ್ಪಿಗೆ ಹೋದೆವು. ಅದು ಮಕೆದೋನಿಯದ ಜಿಲ್ಲೆಯಲ್ಲಿ ಮತ್ತು ರೋಮನ್ನರ ವಸಾಹತುವಿನಲ್ಲಿ[a] ಮುಖ್ಯವಾದ ಪಟ್ಟಣವಾಗಿತ್ತು. ನಾವು ಅಲ್ಲಿ ಕೆಲವು ದಿನಗಳವರೆಗೆ ಇಳಿದುಕೊಂಡೆವು.

13 ನದಿಯ ಸಮೀಪದಲ್ಲಿ ವಿಶೇಷವಾದ ಪ್ರಾರ್ಥನಾ ಸ್ಥಳವನ್ನು ನಾವು ಕಾಣಬಹುದೆಂದು ಆಲೋಚಿಸಿಕೊಂಡು ಸಬ್ಬತ್ ದಿನದಂದು ನದಿಯ ಬಳಿಗೆ ಹೋಗಲು ನಗರದ್ವಾರದಿಂದ ಹೊರಗೆ ಹೋದೆವು. ಕೆಲವು ಸ್ತ್ರೀಯರು ಅಲ್ಲಿ ಸೇರಿ ಬಂದಿದ್ದರು. ಆದ್ದರಿಂದ ನಾವು ಕುಳಿತುಕೊಂಡು ಅವರೊಂದಿಗೆ ಮಾತಾಡಿದೆವು. 14 ಅಲ್ಲಿ ಲಿಡಿಯಾ ಎಂಬ ಒಬ್ಬ ಹೆಂಗಸಿದ್ದಳು. ಆಕೆಯು ಥುವತೈರ ಪಟ್ಟಣದವಳು. ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಮಾರುವುದು ಆಕೆಯ ಕಸುಬಾಗಿತ್ತು. ಆಕೆಯು ನಿಜ ದೇವರನ್ನು ಆರಾಧಿಸುತ್ತಿದ್ದಳು. ಪೌಲನ ಮಾತನ್ನು ಲಿಡಿಯಾ ಆಲಿಸುತ್ತಿದ್ದಳು. ಪ್ರಭುವು ಆಕೆಯ ಹೃದಯವನ್ನು ತೆರೆದನು. ಪೌಲನು ಹೇಳಿದ ಸಂಗತಿಗಳನ್ನು ಆಕೆ ನಂಬಿಕೊಂಡಳು. 15 ಆಕೆ ಮತ್ತು ಆಕೆಯ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆಕೆಯು, “ನಾನು ಪ್ರಭು ಯೇಸುವಿನಲ್ಲಿ ನಿಜವಾದ ವಿಶ್ವಾಸಿಯೆಂದು ನೀವು ಯೋಚಿಸುವುದಾಗಿದ್ದರೆ, ನನ್ನ ಮನೆಗೆ ಬಂದು ತಂಗಿರಿ” ಎಂದು ಕೇಳಿಕೊಂಡು ನಮ್ಮನ್ನು ಒತ್ತಾಯ ಮಾಡಿದಳು.

ಕೀರ್ತನೆಗಳು 67

ಸ್ತುತಿಗೀತೆ.

67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
    ಪ್ರಸನ್ನಮುಖದಿಂದ ನಮ್ಮನ್ನು ನೋಡು.

ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
    ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
    ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
    ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
    ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
ಆತನು ನಮ್ಮನ್ನು ಆಶೀರ್ವದಿಸಲಿ.
    ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.

ಪ್ರಕಟನೆ 21:10

10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.

ಪ್ರಕಟನೆ 21:22-22:5

22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.

24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

22 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ, ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.

ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ. ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ. ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.

ಯೋಹಾನ 14:23-29

23 ಯೇಸು ಹೀಗೆ ಉತ್ತರಕೊಟ್ಟನು: “ನನ್ನನ್ನು ಪ್ರೀತಿಸುವವನು ನನ್ನ ಉಪದೇಶಕ್ಕೆ ವಿಧೇಯನಾಗುವನು. ನನ್ನ ತಂದೆಯು ಅವನನ್ನು ಪ್ರೀತಿಸುವನು. ನನ್ನ ತಂದೆ ಮತ್ತು ನಾನು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24 ಆದರೆ ನನ್ನನ್ನು ಪ್ರೀತಿಸದವನು, ನನ್ನ ಉಪದೇಶಕ್ಕೆ ವಿಧೇಯನಾಗುವುದಿಲ್ಲ. ನೀವು ಕೇಳುತ್ತಿರುವ ಈ ಉಪದೇಶವು ನಿಜವಾಗಿಯೂ ನನ್ನದಲ್ಲ, ನನ್ನನ್ನು ಕಳುಹಿಸಿರುವ ನನ್ನ ತಂದೆಯದು.

25 “ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.

27 “ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ. 28 ‘ನಾನು ಹೊರಟುಹೋಗುತ್ತೇನೆ. ಆದರೆ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇನೆ’ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ತಂದೆಯ ಬಳಿಗೆ ಮರಳಿಹೋಗುವುದರ ಬಗ್ಗೆ ಸಂತೋಷಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29 ಇದು ಸಂಭವಿಸುವುದಕ್ಕಿಂತ ಮೊದಲೇ ನಾನು ನಿಮಗೆ ಇದನ್ನು ಈಗಲೇ ತಿಳಿಸಿದ್ದೇನೆ. ಹೀಗಿರಲು, ಇದು ಸಂಭವಿಸುವಾಗ ನೀವು ನಂಬುವಿರಿ.

ಯೋಹಾನ 5:1-9

ಕೊಳದ ಬಳಿ ಗುಣಹೊಂದಿದ ರೋಗಿ

ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು. ಜೆರುಸಲೇಮಿನಲ್ಲಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಯೆಹೂದ್ಯರ ಭಾಷೆಯಲ್ಲಿ ಅದಕ್ಕೆ “ಬೆತ್ಸಥ” ಎಂದು ಕರೆಯುತ್ತಾರೆ. ಈ ಕೊಳವು “ಕುರಿಬಾಗಿಲು” ಎಂಬ ಸ್ಥಳದ ಸಮೀಪದಲ್ಲಿದೆ. ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು.[a] [b] ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬನು ಅಲ್ಲಿ ಬಿದ್ದುಕೊಂಡಿದ್ದನು. ಯೇಸು ಅವನನ್ನು ನೋಡಿದನು. ಅವನು ಬಹುಕಾಲದಿಂದ ರೋಗಿಯಾಗಿರುವುದು ಆತನಿಗೆ ಗೊತ್ತಿತ್ತು. ಆದ್ದರಿಂದ ಆತನು ಅವನಿಗೆ, “ಗುಣಹೊಂದಲು ನಿನಗೆ ಅಪೇಕ್ಷೆ ಇದೆಯಾ?” ಎಂದು ಕೇಳಿದನು.

ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.

ಆಗ ಯೇಸು, “ಎದ್ದುನಿಲ್ಲು! ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ” ಎಂದು ಹೇಳಿದನು. ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು.

ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International