Revised Common Lectionary (Semicontinuous)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ಆಸನ ಪರಿವರ್ತನೆ
15 1-2 ಓಬೇದನ ಮಗನಾದ ಅಜರ್ಯನ ಮೇಲೆ ದೇವರಾತ್ಮವು ಬಂದಿತು. ಅಜರ್ಯನು ಆಸನನ್ನು ಸಂಧಿಸಿ ಹೀಗೆ ಹೇಳಿದನು: “ಆಸನೇ, ನನ್ನ ಮಾತನ್ನು ಕೇಳು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವನೊಡನೆ ಇದ್ದರೆ ಆತನು ನಿಮ್ಮ ಸಂಗಡ ಇರುವನು. ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು. ಆದರೆ ನೀವು ಆತನನ್ನು ತೊರೆದರೆ ಆತನು ನಿಮ್ಮನ್ನೂ ತೊರೆಯುವನು. 3 ಬಹಳಕಾಲದ ತನಕ ಇಸ್ರೇಲರಲ್ಲಿ ನಿಜವಾದ ದೇವರಿರಲಿಲ್ಲ; ಬೋಧಕನಿರಲಿಲ್ಲ; ಧರ್ಮಶಾಸ್ತ್ರವೂ ಇರಲಿಲ್ಲ. 4 ಆದರೆ ಇಸ್ರೇಲರು ತಮಗೆ ಕಷ್ಟಬಂದಾಗ ದೇವರ ಕಡೆಗೆ ತಿರುಗಿದರು. ಆತನೇ ಇಸ್ರೇಲಿನ ದೇವರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು. 5 ಆ ಕಷ್ಟದ ಸಮಯದಲ್ಲಿ ಯಾರೂ ಸುರಕ್ಷಿತವಾಗಿ ಪ್ರಯಾಣ ಮಾಡುವಂತಿರಲಿಲ್ಲ. ಎಲ್ಲಾ ದೇಶಗಳಲ್ಲಿಯೂ ಕಷ್ಟ ತೊಂದರೆಗಳು ತುಂಬಿದ್ದವು. 6 ಒಂದು ದೇಶವು ಇನ್ನೊಂದು ದೇಶವನ್ನು ನಾಶಮಾಡುತ್ತಿತ್ತು; ಒಂದು ಪಟ್ಟಣವು ಇನ್ನೊಂದು ಪಟ್ಟಣವನ್ನು ಸೂರೆಮಾಡುತ್ತಿತ್ತು. ಹೀಗೆ ದೇವರು ಎಲ್ಲಾ ಬಗೆಯ ತೊಂದರೆಗಳಿಂದ ಅವರನ್ನು ತಳಮಳಗೊಳಿಸಿದನು. 7 ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನೀವು ಶಕ್ತರಾಗಿರಿ, ನಿರಾಶರಾಗಬೇಡಿರಿ; ಯಾಕೆಂದರೆ ನಿಮ್ಮ ಒಳ್ಳೆಯ ಕೆಲಸಕ್ಕೆ ನಿಮಗೆ ಪ್ರತಿಫಲ ದೊರೆಯುವುದು.”
8 ಪ್ರವಾದಿಯಾದ ಓಬೇದನು ತಂದ ಸಂದೇಶವನ್ನು ಆಸನು ಕೇಳಿ ತುಂಬಾ ಪ್ರೋತ್ಸಾಹಗೊಂಡನು. ಅನಂತರ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದಲ್ಲಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಗೆದ್ದಿದ್ದ ಎಫ್ರಾಯೀಮ್ ಬೆಟ್ಟಪ್ರದೇಶಗಳಲ್ಲಿದ್ದ ವಿಗ್ರಹಗಳನ್ನು ತೆಗೆದುಹಾಕಿಸಿದನು. ದೇವಾಲಯದ ಮಂಟಪದೆದುರು ಇದ್ದ ಯೆಹೋವನ ಯಜ್ಞವೇದಿಕೆಯನ್ನು ಸರಿಪಡಿಸಿದನು.
9 ಆಮೇಲೆ ಆಸನು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದ ಜನರನ್ನೆಲ್ಲಾ ಒಟ್ಟಾಗಿ ಸೇರಿಸಿದನು. ಅದೇ ಪ್ರಕಾರ ಅವನು ಇಸ್ರೇಲನ್ನು ಬಿಟ್ಟು ಯೆಹೂದದಲ್ಲಿ ನೆಲೆಸಲು ಬಂದಿದ್ದ ಎಫ್ರಾಯೀಮ್, ಮನಸ್ಸೆ ಮತ್ತು ಸಿಮೆಯೋನ್ ಪ್ರಾಂತ್ಯಗಳವರನ್ನೂ ಒಟ್ಟಾಗಿ ಸೇರಿಸಿದನು. ದೇವರಾದ ಯೆಹೋವನು ಆಸನ ಕೂಡ ಇರುವದನ್ನು ನೋಡಿ ಅವನೊಂದಿಗೆ ಸೇರಲು ಅನೇಕ ಜನರು ಬಂದಿದ್ದರು.
10 ಅವರೆಲ್ಲರೂ ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಸೇರಿಬಂದರು. 11 ಆ ಸಮಯದಲ್ಲಿ ಅವರು ಏಳುನೂರು ಹೋರಿಗಳನ್ನೂ ಏಳುಸಾವಿರ ಆಡುಕುರಿಗಳನ್ನೂ, ಯೆಹೋವನಿಗೆ ಸಮರ್ಪಿಸಿದರು. ಇವುಗಳನ್ನು ಆಸನ ಸೈನ್ಯವು ಶತ್ರುಗಳಿಂದ ಸುಲಿದುಕೊಂಡಿದ್ದರು. 12 ತಮ್ಮ ಪೂರ್ವಿಕರು ಸೇವೆಮಾಡಿದ ದೇವರೊಂದಿಗೆ ಅಲ್ಲಿ ಅವರು ಒಡಂಬಡಿಕೆ ಮಾಡಿಕೊಂಡು ತಾವು ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಆತನ ಸೇವೆ ಮಾಡುವುದಾಗಿ ಪ್ರಮಾಣಮಾಡಿದರು. 13 ಯಾವನಾದರೂ ದೇವರಾದ ಯೆಹೋವನ ಸೇವೆಮಾಡಲು ನಿರಾಕರಿಸುವದಾದರೆ ಆ ವ್ಯಕ್ತಿಯು ಗಂಡಸಾಗಿದ್ದರೂ ಹೆಂಗಸಾಗಿದ್ದರೂ ಮುಖ್ಯವಾದವನಾಗಿದ್ದರೂ ಮುಖ್ಯವಲ್ಲದವನಾಗಿದ್ದರೂ ಕೊಲ್ಲಲ್ಪಡಬೇಕು ಎಂಬುದಾಗಿ ಹೇಳಿದರು. 14 ಆಮೇಲೆ ಆಸನೂ ಅವನ ಜನರೂ ದೇವರಿಗೆ ಪ್ರಮಾಣಮಾಡಿ ಸಂತೋಷದಿಂದ ಹರ್ಷಧ್ವನಿ ಮಾಡಿದರು. ಅಲ್ಲದೆ ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿದರು. 15 ಯೆಹೂದದ ಎಲ್ಲಾ ಜನರು ತಾವು ಯೆಹೋವನಿಗೆ ಮಾಡಿದ ಪ್ರಮಾಣದ ನಿಮಿತ್ತ ಸಂತೋಷಪಟ್ಟರು. ಯಾಕೆಂದರೆ ಅವರು ತಮ್ಮ ಪೂರ್ಣ ಹೃದಯದಿಂದ ಪ್ರಮಾಣಮಾಡಿದ್ದರು. ಅವರು ಯೆಹೋವನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಪ್ರಸನ್ನನಾಗಿ ಅವರಿಗೆ ಸಮಾಧಾನವನ್ನು ಕೊಟ್ಟನು.
15 ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು. 16 ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ[a] ಎತ್ತರವಾಗಿತ್ತು. 17 ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು.[b] ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. 18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.
19 ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸಕಲ ವಿಧವಾದ ಬೆಲೆಬಾಳುವ ರತ್ನಗಳಿದ್ದವು. ಮೊದಲನೆ ಮೂಲೆಗಲ್ಲು ವಜ್ರ, ಎರಡನೆಯದು ವೈಢೂರ್ಯ, ಮೂರನೆಯದು ಪಚ್ಚೆ, 20 ನಾಲ್ಕನೆಯದು ಪದ್ಮರಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ ಮತ್ತು ಹನ್ನೆರಡನೆಯದು ನೀಲಸ್ಫಟಿಕ. 21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.
22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International