Revised Common Lectionary (Semicontinuous)
ಯೆಹೋವನಿಗೆ ಯೋಬನ ಉತ್ತರ
42 ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಹೀಗೆಂದನು:
2 “ಯೆಹೋವನೇ, ನೀನು ಪ್ರತಿಯೊಂದನ್ನೂ ಮಾಡಬಲ್ಲೆ ಎಂದು ನನಗೆ ಗೊತ್ತಿದೆ.
ನೀನು ಮಾಡಿದ ಆಲೋಚನೆಗಳನ್ನು ಯಾವುದೂ ಬದಲಿಸಲಾರದು; ಯಾವುದೂ ನಿಲ್ಲಿಸಲಾರದು.
3 ಯೆಹೋವನೇ, ‘ಈ ಮೂರ್ಖ ಸಂಗತಿಗಳನ್ನು ಹೇಳುತ್ತಿರುವ ಈ ಮೂಢನು ಯಾರು?’ ಎಂದು ನೀನು ಪ್ರಶ್ನಿಸಿದೆ.
ನನಗೆ ಅರ್ಥವಾಗಿಲ್ಲದ ಸಂಗತಿಗಳ ಬಗ್ಗೆಯೂ
ನಾನು ತಿಳಿಯಲಾಗದಷ್ಟು ಆಶ್ಚರ್ಯಕರವಾದ ಅದ್ಭುತಕಾರ್ಯಗಳ ಬಗ್ಗೆಯೂ ನಾನು ಮಾತಾಡಿದ್ದೇನೆ.
4 “ಯೆಹೋವನೇ, ನೀನು ನನಗೆ, ‘ಯೋಬನೇ, ಆಲಿಸು; ನಾನು ಮಾತಾಡುತ್ತೇನೆ.
ನಾನು ನಿನಗೆ ಪ್ರಶ್ನೆಗಳನ್ನು ಕೇಳುತ್ತೇನೆ; ನೀನು ನನಗೆ ಉತ್ತರಿಸು’ ಎಂದು ಹೇಳಿದೆ.
5 ಯೆಹೋವನೇ, ಮೊದಲಾದರೋ ನಾನು ನಿನ್ನ ಬಗ್ಗೆ ಕೇಳಿದ್ದೆನು;
ಈಗಲಾದರೋ ಕಣ್ಣಾರೆ ನಿನ್ನನ್ನು ಕಂಡಿದ್ದೇನೆ.
6 ಯೆಹೋವನೇ, ನನ್ನ ವಿಷಯದಲ್ಲಿ ನನಗೇ ನಾಚಿಕೆಯಾಗಿದೆ.
ನನಗೆ ಎಷ್ಟೋ ದುಃಖವಾಗಿದೆ.
ನಾನು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತುಕೊಳ್ಳುತ್ತೇನೆ.
ನನ್ನ ಹೃದಯವನ್ನೂ ಜೀವಿತವನ್ನೂ ಮಾರ್ಪಡಿಸಿಕೊಳ್ಳುವುದಾಗಿ ನಾನು ನಿನಗೆ ವಾಗ್ದಾನ ಮಾಡುತ್ತೇನೆ.”
10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಮೇಲೆ ಯೆಹೋವನು ಯೋಬನನ್ನು ಅಭಿವೃದ್ಧಿಪಡಿಸಿದನು. ಆತನು ಯೋಬನಿಗೆ, ಮೊದಲಿಗಿಂತ ಎರಡರಷ್ಟು ಹೆಚ್ಚಿಗೆ ಆಸ್ತಿಯನ್ನು ಕೊಟ್ಟನು. 11 ಯೋಬನ ಸಹೋದರಸಹೋದರಿಯರೂ ಅವನ ಪರಿಚಯಸ್ಥರೂ ಅವನ ಮನೆಗೆ ಬಂದರು; ಅವನೊಂದಿಗೆ ಊಟ ಮಾಡಿದರು; ಯೆಹೋವನು ಅವನಿಗೆ ಬಹಳ ಕಷ್ಟವನ್ನು ಬರಮಾಡಿದ್ದರಿಂದ ಅವರು ಮರುಕದಿಂದ ಅವನನ್ನು ಸಂತೈಸಿದರು. ಪ್ರತಿಯೊಬ್ಬರು ಯೋಬನಿಗೆ ಒಂದು ಬೆಳ್ಳಿಯ ನಾಣ್ಯವನ್ನೂ ಒಂದು ಚಿನ್ನದ ಉಂಗುರವನ್ನೂ ಕೊಟ್ಟರು.
12 ಯೆಹೋವನು ಯೋಬನ ಜೀವಿತದ ಅಂತಿಮ ಸ್ಥಿತಿಯನ್ನು ಮೊದಲನೆ ಸ್ಥಿತಿಗಿಂತಲೂ ಹೆಚ್ಚಾಗಿ ಆಶೀರ್ವದಿಸಿದನು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಒಂದು ಸಾವಿರ ಜೊತೆ ಎತ್ತುಗಳೂ ಒಂದು ಸಾವಿರ ಹೆಣ್ಣು ಕತ್ತೆಗಳೂ ಇದ್ದವು. 13 ಅಲ್ಲದೆ ಯೋಬನು ಏಳು ಗಂಡುಮಕ್ಕಳನ್ನೂ ಮೂವರು ಹೆಣ್ಣುಮಕ್ಕಳನ್ನೂ ಪಡೆದನು. 14 ಯೋಬನು ಮೊದಲನೆ ಮಗಳಿಗೆ “ಯೆಮೀಮ” ಎಂತಲೂ, ಎರಡನೆಯವಳಿಗೆ “ಕೆಚೀಯ” ಎಂತಲೂ ಮೂರನೆಯವಳಿಗೆ “ಕೆರೆನ್ಹಪ್ಪೂಕ್” ಎಂತಲೂ ಹೆಸರಿಟ್ಟನು. 15 ಯೋಬನ ಹೆಣ್ಣುಮಕ್ಕಳು ಇಡೀ ದೇಶದಲ್ಲೇ ಅತ್ಯಂತ ಸೌಂದರ್ಯವುಳ್ಳ ಸ್ತ್ರೀಯರಾಗಿದ್ದರು. ಯೋಬನು ತನ್ನ ಗಂಡುಮಕ್ಕಳಿಗೆ ಆಸ್ತಿಯನ್ನು ಕೊಟ್ಟಂತೆ ತನ್ನ ಹೆಣ್ಣುಮಕ್ಕಳಿಗೂ ಕೊಟ್ಟನು.
16 ಆ ಮೇಲೆ ಯೋಬನು ನೂರನಲವತ್ತು ವರ್ಷಗಳ ಕಾಲ ಬದುಕಿದ್ದನು. ಅವನು ತನ್ನ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಮರಿಮಕ್ಕಳನ್ನೂ ಮರಿಮೊಮ್ಮಕ್ಕಳನ್ನೂ ಮರಿಮೊಮ್ಮಕ್ಕಳಿಗೆ ಹುಟ್ಟಿದ ಮಕ್ಕಳನ್ನೂ ಕಣ್ಣಾರೆಕಂಡನು. 17 ತರುವಾಯ ಯೋಬನು ಮುಪ್ಪಿನ ಮುದುಕನಾಗಿ ತೀರಿಕೊಂಡನು.
ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
2 ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
ಕೇಳಿ ಸಂತೋಷಪಡಿರಿ.
3 ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
4 ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
5 ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
ಅವರಿಗೆ ಆಶಾಭಂಗವಾಗದು.
6 ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
7 ಯೆಹೋವನ ಭಕ್ತರ ಸುತ್ತಲೂ ಆತನ ದೂತನು
ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
8 ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.
23 ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು. 24 ಆದರೆ ಯೇಸು ಸದಾಕಾಲವೂ ಜೀವಿಸುವವನಾಗಿದ್ದಾನೆ. ಆತನು ತನ್ನ ಯಾಜಕ ಸೇವೆಯನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ. 25 ಆದ್ದರಿಂದಲೇ ತನ್ನ ಮೂಲಕ ದೇವರ ಬಳಿಗೆ ಬರುವ ಜನರನ್ನು ಯೇಸು ಯಾವಾಗಲೂ ರಕ್ಷಿಸಬಲ್ಲನು. ಏಕೆಂದರೆ ಆತನು ಸದಾಕಾಲ ಜೀವಿಸುವವನಾಗಿದ್ದಾನೆ ಮತ್ತು ಜನರು ದೇವರ ಸನ್ನಿಧಿಗೆ ಬಂದಾಗ ಜನರಿಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ.
26 ಯೇಸುವೇ ನಮಗೆ ಬೇಕಾಗಿದ್ದ ಪ್ರಧಾನ ಯಾಜಕನು. ಆತನು ಪಾಪರಹಿತನೂ ಪರಿಶುದ್ಧನೂ ನಿಷ್ಕಳಂಕನೂ ಪಾಪಿಗಳ ಪ್ರಭಾವಕ್ಕೆ ಒಳಗಾಗದವನೂ ಆಕಾಶಮಂಡಲಕ್ಕಿಂತ ಉನ್ನತನೂ ಆಗಿದ್ದಾನೆ. 27 ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28 ಧರ್ಮಶಾಸ್ತ್ರವು ಮನುಷ್ಯರೊಳಗಿಂದ ಪ್ರಧಾನ ಯಾಜಕರನ್ನು ಆರಿಸುತ್ತದೆ. ಆರಿಸಲ್ಪಟ್ಟ ಈ ಜನರು ಮಾನವ ದೌರ್ಬಲ್ಯಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇವರು ಧರ್ಮಶಾಸ್ತ್ರದ ನಂತರ ಮಾಡಿದ ವಾಗ್ದಾನ ದೇವರ ಮಗನನ್ನು ಪ್ರಧಾನ ಯಾಜಕನನ್ನಾಗಿ ಮಾಡಿತು. ಆ ಮಗನು ಎಂದೆಂದಿಗೂ ಸರ್ವಸಂಪೂರ್ಣನಾಗಿ ಮಾಡಲ್ಪಟ್ಟಿದ್ದಾನೆ.
ಕುರುಡನಿಗೆ ದೃಷ್ಟಿದಾನ
(ಮತ್ತಾಯ 20:29-34; ಲೂಕ 18:35-43)
46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು. 47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.
48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.
49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು.
ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.
51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು.
ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.
52 ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.
Kannada Holy Bible: Easy-to-Read Version. All rights reserved. © 1997 Bible League International