Revised Common Lectionary (Semicontinuous)
ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
2 ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
ಕೇಳಿ ಸಂತೋಷಪಡಿರಿ.
3 ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
4 ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
5 ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
ಅವರಿಗೆ ಆಶಾಭಂಗವಾಗದು.
6 ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
7 ಯೆಹೋವನ ಭಕ್ತರ ಸುತ್ತಲೂ ಆತನ ದೂತನು
ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
8 ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.
ಹಿಜ್ಕೀಯನು ತನ್ನ ಭಂಡಾರವನ್ನು ಬಾಬಿಲೋನಿನ ಜನರಿಗೆ ತೋರಿಸಿದನು
12 ಆ ಸಮಯದಲ್ಲಿ, ಬಲದಾನನ ಮಗನಾದ ಬೆರೋದಕ ಬಲದಾನ ಎಂಬುವನು ಬಾಬಿಲೋನಿನ ರಾಜನಾಗಿದ್ದನು. ಅವನು ಹಿಜ್ಕೀಯನಿಗೆ ಪತ್ರಗಳನ್ನು ಮತ್ತು ಕಾಣಿಕೆಯನ್ನು ಕಳುಹಿಸಿದನು. ಹಿಜ್ಕೀಯನು ಅಸ್ವಸ್ಥನಾಗಿದ್ದಾನೆ ಎಂಬುದನ್ನು ಬೆರೋದಕ ಬಲದಾನನು ತಿಳಿದುಕೊಂಡದ್ದರಿಂದ ಹೀಗೆ ಮಾಡಿದನು. 13 ಹಿಜ್ಕೀಯನು ಬಾಬಿಲೋನಿನ ಜನರನ್ನು ಸ್ವಾಗತಿಸಿ, ಅವರಿಗೆ ತನ್ನ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೋರಿಸಿದನು. ಅವನು ತನ್ನ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು, ಸುಗಂಧದ್ರವ್ಯಗಳನ್ನು, ಪರಿಮಳಭರಿತ ತೈಲವನ್ನು, ಆಯುಧಗಳನ್ನು ತೋರಿಸಿದನು. ಹಿಜ್ಕೀಯನ ಮನೆಯಲ್ಲಿ ಮತ್ತು ಅವನ ರಾಜ್ಯದಲ್ಲಿ ಅವರಿಗೆ ತೋರಿಸದೆ ಉಳಿದದ್ದು ಏನೂ ಇರಲಿಲ್ಲ.
14 ನಂತರ ಪ್ರವಾದಿಯಾದ ಯೆಶಾಯನು ರಾಜನಾದ ಹಿಜ್ಕೀಯನ ಬಳಿಗೆ ಬಂದು, “ಈ ಜನರು ಹೇಳುವುದೇನು? ಇವರು ಎಲ್ಲಿಂದ ಬಂದರು?” ಎಂದು ಕೇಳಿದನು.
ಹಿಜ್ಕೀಯನು, “ಅವರು ಬಹಳ ದೂರದೇಶದಿಂದ, ಬಾಬಿಲೋನಿನಿಂದ ಬಂದಿದ್ದಾರೆ” ಎಂದನು.
15 ಯೆಶಾಯನು, “ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು.
ಹಿಜ್ಕೀಯನು, “ಅವರು ನನ್ನ ಮನೆಯಲ್ಲಿರುವುದನ್ನೆಲ್ಲಾ ನೋಡಿದರು. ಅವರಿಗೆ ತೋರಿಸದೆ ಉಳಿದಿರುವುದು ನನ್ನ ಭಂಡಾರದಲ್ಲಿ ಏನೂ ಇಲ್ಲ” ಎಂದು ಉತ್ತರಿಸಿದನು.
16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನಿಂದ ಬಂದ ಈ ಸಂದೇಶವನ್ನು ಆಲಿಸು. 17 ನಿನ್ನ ಮನೆಯಲ್ಲಿರುವ ವಸ್ತುಗಳೆಲ್ಲವನ್ನು ನಿನ್ನ ಮನೆಯಿಂದ ಬಾಬಿಲೋನಿಗೆ ಕೊಂಡೊಯ್ಯುವ ಕಾಲವು ಬರುತ್ತಿದೆ; ನಿನ್ನ ಪೂರ್ವಿಕರು ಇಂದಿನವರೆಗೆ ರಕ್ಷಿಸಿದ ವಸ್ತುಗಳೆಲ್ಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗುವ ಸಮಯವು ಬರುತ್ತಿದೆ. ಏನನ್ನೂ ಬಿಡುವುದಿಲ್ಲ! ಯೆಹೋವನೇ ಇದನ್ನು ನುಡಿದಿದ್ದಾನೆ. 18 ಬಾಬಿಲೋನಿನವರು ನಿನ್ನ ಮಕ್ಕಳನ್ನೂ ತೆಗೆದುಕೊಂಡು ಹೋಗುವರು. ನಿನ್ನ ಮಕ್ಕಳು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗುತ್ತಾರೆ” ಎಂದು ಹೇಳಿದನು.
19 ಹಿಜ್ಕೀಯನು ತನ್ನ ಜೀವಮಾನದಲ್ಲಿ ಹೇಗೂ ಶಾಂತಿಯಿರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ಯೆಹೋವನ ಈ ಸಂದೇಶವು ಒಳ್ಳೆಯದಾಗಿದೆ” ಎಂದು ಹೇಳಿದನು.
ಯಾಜಕ ಮೆಲ್ಕಿಜೆದೇಕ
7 ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು. 2 ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು.
ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ. 3 ಮೆಲ್ಕಿಜೆದೇಕನ ತಂದೆತಾಯಿಗಳು ಯಾರೆಂಬುದಾಗಲಿ ಅವನು ಎಲ್ಲಿಂದ ಬಂದನೆಂಬುದಾಗಲಿ ಅವನು ಯಾವಾಗ ಹುಟ್ಟಿದನೆಂಬುದಾಗಲಿ ಅವನು ಯಾವಾಗ ಸತ್ತನೆಂಬುದಾಗಲಿ ಯಾರಿಗೂ ತಿಳಿದಿಲ್ಲ. ಅವನು ದೇವರ ಮಗನಂತೆ ಸದಾಕಾಲವೂ ಯಾಜಕನಾಗಿದ್ದಾನೆ.
4 ಮೆಲ್ಕಿಜೆದೇಕನು ಎಷ್ಟು ದೊಡ್ಡವನೆಂಬುದನ್ನು ಸ್ವಲ್ಪ ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು, ಯುದ್ಧದಲ್ಲಿ ತಾನು ಜಯಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. 5 ಲೇವಿಯಕುಲದ ಜನರಲ್ಲಿ ಯಾಜಕರಾಗುವವರು ಯೆಹೂದ್ಯರಿಂದ ಹತ್ತನೆಯ ಒಂದು ಭಾಗವನ್ನು ಪಡೆಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಯಾಜಕರು ತಮ್ಮ ಸ್ವಂತ ಜನರಿಂದಲೇ (ಯೆಹೂದ್ಯರು) ಅದನ್ನು ಸಂಗ್ರಹಿಸುತ್ತಾರೆ ಮತ್ತು ಅವರ ಜನರು ಅಬ್ರಹಾಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. 6 ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು. 7 ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.
8 ಯಾಜಕರು ಹತ್ತನೆಯ ಒಂದು ಭಾಗವನ್ನು ಪಡೆಯುತ್ತಾರೆ. ಆದರೆ ಅವರು ಸ್ವಲ್ಪಕಾಲ ಜೀವಿಸಿದ್ದು ನಂತರ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ಹತ್ತನೆಯ ಒಂದು ಭಾಗವನ್ನು ಪಡೆದ ಮೆಲ್ಕಿಜೆದೇಕನು ಜೀವಂತನಾಗಿಯೇ ಇರುತ್ತಾನೆಂದು ಪವಿತ್ರ ಗ್ರಂಥವು ಹೇಳುತ್ತದೆ. 9 ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು. 10 ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.
Kannada Holy Bible: Easy-to-Read Version. All rights reserved. © 1997 Bible League International