Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 26

ರಚನೆಗಾರ: ದಾವೀದ.

26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
    ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
    ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
    ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
    ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
    ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.

ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
    ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
    ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
    ನನಗೆ ಎಷ್ಟೋ ಪ್ರಿಯವಾಗಿವೆ.

ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
    ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
    ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
    ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
    ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.

ಯೋಬನು 2:11-3:26

ಯೋಬನ ಮೂವರು ಸ್ನೇಹಿತರು

11 ಯೋಬನ ಮೂವರು ಗೆಳೆಯರು ಯಾರೆಂದರೆ: ತೇಮಾನಿನ ಎಲೀಫಜನು, ಶೂಹದ ಬಿಲ್ದದನು ಮತ್ತು ನಾಮಾಥದ ಚೋಫರನು. ಯೋಬನಿಗೆ ಸಂಭವಿಸಿದ ಆಪತ್ತುಗಳ ಬಗ್ಗೆ ಈ ಮೂವರು ಗೆಳೆಯರು ಕೇಳಿದಾಗ ತಮ್ಮ ಮನೆಯಿಂದ ಹೊರಟು ಒಟ್ಟಾಗಿ ಭೇಟಿಯಾದರು. ಯೋಬನ ಬಳಿಗೆ ಹೋಗಿ ಅನುತಾಪ ಸೂಚಿಸಿ ಸಂತೈಸಲು ಒಪ್ಪಿಕೊಂಡರು. 12 ಆದರೆ ಆ ಮೂವರು ಸ್ನೇಹಿತರು ಬಹು ದೂರದಿಂದ ಯೋಬನನ್ನು ಕಂಡಾಗ ಅವನ ಗುರುತೇ ಹಿಡಿಯಲಾರದೆ ಗಟ್ಟಿಯಾಗಿ ಅಳತೊಡಗಿದರು; ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಗಳ ಮೇಲೆ ಸುರಿಸಿಕೊಂಡರು. 13 ಬಳಿಕ ಆ ಮೂವರು ಸ್ನೇಹಿತರು ಏಳುದಿನ ಹಗಲಿರುಳು ಯೋಬನೊಂದಿಗೆ ನೆಲದ ಮೇಲೆ ಕುಳಿತುಕೊಂಡಿದ್ದರು. ಯೋಬನು ವಿಪರೀತ ನೋವಿನಲ್ಲಿದ್ದ ಕಾರಣ ಅವರು ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ.

ಯೋಬನು ತನ್ನ ಜನ್ಮದಿನವನ್ನು ಶಪಿಸುವನು

ಬಳಿಕ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ ಹೀಗೆಂದನು:

“ನಾನು ಹುಟ್ಟಿದ ದಿನವು ಹಾಳಾಗಲಿ,
    ‘ಗಂಡು ಮಗುವು ಗರ್ಭಧರಿಸಿತು’ ಎಂದು ಹೇಳಿದ ಆ ರಾತ್ರಿಯು ನಾಶವಾಗಲಿ.
ಆ ದಿನವು ಕತ್ತಲೆಯಾಗಲಿ.
    ಆ ದಿನದ ಬಗ್ಗೆ ಮೇಲಿನ ಲೋಕದ ದೇವರು ಯೋಚಿಸದಿರಲಿ.
    ಆ ದಿನದ ಮೇಲೆ ಬೆಳಕು ಬೆಳಗದಿರಲಿ.
ಆ ದಿನವನ್ನು ಕತ್ತಲೆಯೂ ಮರಣದ ನೆರಳೂ ವಶಪಡಿಸಿಕೊಳ್ಳಲಿ.
    ಆ ದಿನವನ್ನು ಮೋಡವು ಕವಿದುಕೊಳ್ಳಲಿ.
    ನಾನು ಹುಟ್ಟಿದ ದಿನದ ಹಗಲನ್ನು ಗ್ರಹಣಗಳು ಭಯಪಡಿಸಲಿ.
ಕಾರ್ಗತ್ತಲೆಯು ಆ ರಾತ್ರಿಯನ್ನು ಆವರಿಸಿಕೊಳ್ಳಲಿ.
    ಆ ರಾತ್ರಿಯು ವರ್ಷದ ದಿನಗಳಲ್ಲಿ ಒಂದು ದಿನವೆಂದು ಲೆಕ್ಕಿಸಲ್ಪಡದಿರಲಿ;
    ಅದು ಯಾವ ತಿಂಗಳುಗಳಲ್ಲೂ ಸೇರಿಸಲ್ಪಡದಿರಲಿ.
ಆ ರಾತ್ರಿಯು ಬಂಜೆಯಾಗಲಿ;
    ಅದರಲ್ಲಿ ಯಾವ ಉತ್ಸಾಹಧ್ವನಿಯೂ ಕೇಳದಿರಲಿ.
ಲಿವ್ಯಾತಾನನನ್ನು ಎಬ್ಬಿಸಬಲ್ಲ ಹಾಗೂ ದಿನಗಳನ್ನು ಶಪಿಸುವ ಮಾಂತ್ರಿಕರು
    ನಾನು ಹುಟ್ಟಿದ ರಾತ್ರಿಯನ್ನು ಶಪಿಸಲಿ.
ಆ ದಿನದ ಮುಂಜಾನೆಯ ನಕ್ಷತ್ರಗಳು ಕತ್ತಲಾಗಲಿ.
    ಅದು ಮುಂಜಾನೆಯ ಬೆಳಕಿಗಾಗಿ ಎದುರುನೋಡಿದರೂ ಹೊಂದದಿರಲಿ.
    ಅದು ಸೂರ್ಯೋದಯದ ಕಿರಣಗಳನ್ನು ನೋಡದಿರಲಿ.
10 ಯಾಕೆಂದರೆ ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ
    ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲ.
11 ನಾನು ಹುಟ್ಟಿದಾಗಲೇ ಯಾಕೆ ಸಾಯಲಿಲ್ಲ?
    ತಾಯಿಯ ಗರ್ಭದಿಂದ ಬರುತ್ತಿರುವಾಗಲೇ ನಾನೇಕೆ ಸಾಯಲಿಲ್ಲ?
12 ತಾಯಿಯು ತನ್ನ ಮಡಿಲಲ್ಲಿ ನನ್ನನ್ನು ಹೊತ್ತುಕೊಂಡದ್ದೇಕೆ?
    ಆಕೆಯ ಸ್ತನಗಳು ನನಗೆ ಹಾಲು ಕುಡಿಯಕೊಟ್ಟದ್ದೇಕೆ?
13 ನಾನು ಹುಟ್ಟಿದಾಗಲೇ ಸತ್ತುಹೋಗಿದ್ದರೆ,
    ಸಮಾಧಾನದಿಂದ ನಿದ್ರೆಮಾಡುತ್ತಿದ್ದೆನು.
14 ಭೂರಾಜರೊಂದಿಗೂ ಮಂತ್ರಿಗಳೊಂದಿಗೂ ವಿಶ್ರಮಿಸಿಕೊಳ್ಳುತ್ತಿದ್ದೆನು.
    ಅವರು ತಮಗಾಗಿ ಕಟ್ಟಿಸಿಕೊಂಡ ಪಟ್ಟಣಗಳು ಈಗ ಹಾಳುಬಿದ್ದಿವೆ.
15 ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿಕೊಂಡ
    ಅಧಿಪತಿಗಳೊಡನೆ ನಾನು ವಿಶ್ರಮಿಸಿಕೊಳ್ಳುತ್ತಿದ್ದೆನು.
16 ನಾನು ಮಗುವಾಗಿ ಹುಟ್ಟುವಾಗಲೇ ಸತ್ತು ನೆಲದಲ್ಲಿ ಸಮಾಧಿಯಾಗಲಿಲ್ಲವೇಕೆ?
    ಹಗಲಿನ ಬೆಳಕನ್ನು ಎಂದೂ ಕಂಡಿಲ್ಲದ ಮಗುವಿನಂತೆ ನಾನಿರಬೇಕಿತ್ತು.
17 ದುಷ್ಟರು ಸಮಾಧಿಯಲ್ಲಿರುವಾಗ ಕೇಡುಮಾಡುವುದನ್ನು ನಿಲ್ಲಿಸುವರು.
    ಆಯಾಸಗೊಂಡಿರುವ ಜನರು ಸಮಾಧಿಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವರು.
18 ಸೆರೆಯಾಳುಗಳು ಸಹ ಸಮಾಧಿಯಲ್ಲಿ ಸುಖವಾಗಿರುವರು;
    ಅವರ ಒಡೆಯನ ಧ್ವನಿಯು ಅವರಿಗೆ ಕೇಳಿಸುವುದಿಲ್ಲ.
19 ಸಮಾಧಿಯಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ;
    ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.

20 “ಬಹು ವ್ಯಥೆಯಿಂದ ಸಂಕಟಪಡುತ್ತಿರುವವನು ಯಾಕೆ ಜೀವಿಸಬೇಕು?
    ಮನನೊಂದಿರುವವನಿಗೆ ಜೀವವನ್ನು ಕೊಡುವುದೇಕೆ?
21 ಅವನು ಸಾಯಲು ಬಯಸಿದರೂ ಸಾವು ಬರುವುದಿಲ್ಲ.
    ಹೂಳಿಟ್ಟಿರುವ ಭಂಡಾರವನ್ನು ಹುಡುಕುವುದಕ್ಕಿಂತಲೂ ಹೆಚ್ಚಾಗಿ
    ವ್ಯಥೆಯುಳ್ಳವನು ಸಾವನ್ನೇ ಹುಡುಕುವನು.
22 ಅವರು ಸಮಾಧಿಗೆ ಸೇರುವಾಗ ಬಹು ಸಂತೋಷಪಡುವರು;
    ಆನಂದದಿಂದ ಕೂಗುವರು.
23 ದೇವರು ಯಾರ ಭವಿಷ್ಯವನ್ನು ರಹಸ್ಯವಾಗಿಡುತ್ತಾನೊ,
    ಯಾರ ಸುತ್ತಲೂ ಗೋಡೆಯನ್ನು ಕಟ್ಟುತ್ತಾನೊ ಅವರಿಗೆ ಯಾಕೆ ಜೀವವನ್ನು
    ಕೊಡುತ್ತಾನೆ?
24 ಊಟದ ಸಮಯದಲ್ಲಿ ನಿಟ್ಟುಸಿರೇ ನನ್ನ ಆಹಾರವಾಗಿದೆ.
    ನನ್ನ ನರಾಳಾಟವು ಜಲಧಾರೆಯಂತಿದೆ.
25 ಆಪತ್ತು ಸಂಭವಿಸಬಹುದೆಂದು ನಾನು ಭಯಗೊಂಡಿದ್ದೆನು.
    ನಾನು ಯಾವುದಕ್ಕೆ ಹೆದರಿಕೊಂಡಿದ್ದೆನೊ ಅದು ನನಗೆ ಸಂಭವಿಸಿದೆ!
26 ನನಗೆ ಸಮಾಧಾನವಿಲ್ಲ, ವಿಶ್ರಾಂತಿಯೂ ಇಲ್ಲ; ನನಗೆ ಉಪಶಮನವಿಲ್ಲ;
    ನನಗಿರುವುದು ಕೇವಲ ಕಷ್ಟವೊಂದೇ!”

ಗಲಾತ್ಯದವರಿಗೆ 3:23-29

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.

26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International