Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 55:1-15

ರಚನೆಗಾರ: ದಾವೀದ.

55 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು.
    ನನ್ನ ವಿಜ್ಞಾಪನೆಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸಿ ಸದುತ್ತರವನ್ನು ದಯಪಾಲಿಸು.
    ನಾನು ನಿನ್ನೊಂದಿಗೆ ಮಾತಾಡುವೆನು; ನನಗಾಗಿರುವ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳುವೆನು.
ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ಆ ದುಷ್ಟರು ನನ್ನ ಮೇಲೆ ಅಬ್ಬರಿಸಿದರು.
    ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು.
    ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು.
ನನ್ನ ಹೃದಯ ಬಡಿತವು ಮಿತಿಮೀರಿದೆ;
    ಮರಣ ಭಯವು ನನ್ನನ್ನು ಆವರಿಸಿಕೊಂಡಿದೆ.
ನಾನು ಭಯದಿಂದ ನಡುಗುತ್ತಿದ್ದೇನೆ.
    ನಾನು ದಿಗಿಲುಗೊಂಡಿದ್ದೇನೆ.
ಆಹಾ, ನನಗೆ ಪಾರಿವಾಳದಂತೆ ರೆಕ್ಕೆಗಳಿದ್ದರೆ,
    ನಾನು ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
    ನಾನು ಅರಣ್ಯದಲ್ಲಿ ಬಹು ದೂರಕ್ಕೆ ಹಾರಿಹೋಗುತ್ತಿದ್ದೆನು.

ನಾನು ಓಡಿಹೋಗಿ
    ಹಾನಿಕರವಾದ ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೆನು.
ನನ್ನ ಒಡೆಯನೇ, ಅವರ ಸುಳ್ಳುಗಳನ್ನು ನಿಲ್ಲಿಸು.
    ಈ ಪಟ್ಟಣದಲ್ಲಿ ಹಿಂಸೆಕಲಹಗಳು ಕಾಣುತ್ತಿವೆ.
10 ಹಗಲಿರುಳು, ಈ ನಗರದಲ್ಲೆಲ್ಲಾ ಅಪರಾಧ
    ಮತ್ತು ಬಲಾತ್ಕಾರಗಳು ತುಂಬಿಕೊಂಡಿವೆ.
11 ಬೀದಿಗಳಲ್ಲಿ ಅಪರಾಧಗಳು ಅತಿಯಾಗಿವೆ.
    ಜನರು ಎಲ್ಲೆಲ್ಲಿಯೂ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ.

12 ನನಗೆ ಅವಮಾನ ಮಾಡುವವನು
    ವೈರಿಯಾಗಿದ್ದಿದ್ದರೆ ತಾಳಿಕೊಳ್ಳಬಹುದಿತ್ತು.
ನನ್ನ ಮೇಲೆ ಆಕ್ರಮಣ ಮಾಡುವವರು ನನ್ನ ಶತ್ರುವಾಗಿದ್ದಿದ್ದರೆ
    ಅಡಗಿಕೊಳ್ಳಬಹುದಿತ್ತು.
13 ಆದರೆ ನನಗೆ ಕೇಡುಮಾಡುತ್ತಿರುವವನು ನನ್ನ ಸಂಗಡಿಗನಾದ ನೀನೇ;
    ನನ್ನ ಸಹೋದ್ಯೋಗಿಯೂ ನನ್ನ ಸ್ನೇಹಿತನೂ ಆದ ನೀನೇ.
14 ನಾವು ಜನಸಮೂಹದ ನಡುವೆ ದೇವಾಲಯಕ್ಕೆ ಹೋಗುವಾಗ,
    ಗುಟ್ಟಾದ ವಿಷಯಗಳನ್ನು ಮಾತಾಡುತ್ತಿದ್ದೆವಲ್ಲಾ!

15 ನನ್ನ ಶತ್ರುಗಳಿಗೆ ಮರಣವು ಇದ್ದಕ್ಕಿದ್ದಂತೆ ಬರಲಿ!
    ಭೂಮಿಯು ಬಾಯ್ದೆರೆದು ಅವರನ್ನು ಜೀವಂತವಾಗಿ ನುಂಗಿಬಿಡಲಿ!
    ಯಾಕೆಂದರೆ ಅವರು ಒಟ್ಟಾಗಿ ಸೇರಿ ಅಂಥಾ ಭಯಂಕರವಾದವುಗಳನ್ನು ಆಲೋಚಿಸುವರು.

ಯೋಬನು 11

ಚೋಫರನ ವಾದ

11 ಆಗ ನಾಮಾಥ ದೇಶದ ಚೋಫರನು ಯೋಬನಿಗೆ ಉತ್ತರಿಸಿದನು:

“ಮಾತುಗಳ ಈ ಪ್ರವಾಹಕ್ಕೆ ಯಾರಾದರೊಬ್ಬರು ಉತ್ತರ ಕೊಡಬೇಕು!
    ಇಷ್ಟೆಲ್ಲಾ ಮಾತುಗಳು ಯೋಬನನ್ನು ನೀತಿವಂತನನ್ನಾಗಿ ಮಾಡುತ್ತವೆಯೋ? ಇಲ್ಲ!
ಯೋಬನೇ, ಅರ್ಥರಹಿತವಾದ ನಿನ್ನ ಮಾತುಗಳಿಗೆ
    ನಮ್ಮಲ್ಲಿ ಉತ್ತರವೇ ಇಲ್ಲವೆಂದು ಆಲೋಚಿಸಿಕೊಂಡಿರುವೆಯಾ?
ನೀನು ದೇವರನ್ನು ಅಪಹಾಸ್ಯ ಮಾಡುವಾಗ
    ಯಾರೂ ನಿನ್ನನ್ನು ಎಚ್ಚರಿಸುವುದಿಲ್ಲ ಎಂದುಕೊಂಡಿರುವಿಯಾ?
ಯೋಬನೇ, ನೀನು ದೇವರಿಗೆ,
    ‘ನನ್ನ ವಾದಗಳು ಸರಿಯಾಗಿವೆ,
    ನಿನ್ನ ದೃಷ್ಟಿಯಲ್ಲಿ ನಾನು ಶುದ್ಧನಾಗಿರುವೆ’ ಎಂದು ಹೇಳಿದೆಯಲ್ಲವೇ?
ದೇವರು ನಿನಗೆ ಉತ್ತರ ನೀಡಿ ನಿನ್ನನ್ನು ತಪ್ಪಿತಸ್ಥನೆಂದು ಹೇಳಿದರೆ
    ಎಷ್ಟೋ ಒಳ್ಳೆಯದು.
ಆತನು ನಿನಗೆ ಜ್ಞಾನದ ರಹಸ್ಯಗಳನ್ನು ತಿಳಿಸಿ
    ಜ್ಞಾನಕ್ಕೆ ಎರಡು ಮುಖಗಳಿವೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು.
ದೇವರು ನಿನಗೆ ತಕ್ಕ ದಂಡನೆಯನ್ನು ವಿಧಿಸಿಲ್ಲವೆಂಬುದು
    ನಿನಗೆ ತಿಳಿದಿರಲಿ.

“ನೀನು ದೇವರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲೆಯಾ?
    ಸರ್ವಶಕ್ತನಾದ ದೇವರ ಜ್ಞಾನದ ಮೇರೆಗಳನ್ನು ತಿಳಿದುಕೊಳ್ಳಬಲ್ಲೆಯಾ?
ಆತನ ಜ್ಞಾನವು ಆಕಾಶಕ್ಕಿಂತಲೂ ಉನ್ನತವಾಗಿದೆ; ಅದನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವೇ ಇಲ್ಲ.
    ಅದು ಮೃತ್ಯುಲೋಕಕ್ಕಿಂತಲೂ ಆಳವಾಗಿದೆ. ನೀನು ಅದನ್ನು ಗ್ರಹಿಸಿಕೊಳ್ಳಲಾರೆ.
ದೇವರ ಜ್ಞಾನವು ಭೂಮಿಗಿಂತಲೂ ಉದ್ದವಾಗಿದೆ;
    ಸಮುದ್ರಕ್ಕಿಂತಲೂ ಅಗಲವಾಗಿದೆ.

10 “ದೇವರು ನಿನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಬರುವುದಾದರೆ
    ಆತನನ್ನು ತಡೆಯಬಲ್ಲವರು ಯಾರು?
11 ಅಯೋಗ್ಯರು ಯಾರೆಂಬುದು ದೇವರಿಗೆ ಚೆನ್ನಾಗಿ ಗೊತ್ತಿದೆ.
    ಆತನು ಕೆಟ್ಟದ್ದನ್ನು ಕಂಡಾಗ ಗಮನಿಸುವನು.
12 ಕಾಡುಕತ್ತೆಯು ಮನುಷ್ಯನನ್ನು ಹೇಗೆ ಹೆರಲಾರದೋ
    ಅದೇ ರೀತಿಯಲ್ಲಿ ದಡ್ಡನು ಎಂದಿಗೂ ಜ್ಞಾನಿಯಾಗಲಾರನು.
13 ಯೋಬನೇ, ನಿನ್ನ ಕೈಗಳನ್ನು ಮೇಲೆತ್ತಿ ದೇವರೊಬ್ಬನನ್ನೇ ಆರಾಧಿಸುವುದಕ್ಕಾಗಿ
    ನಿನ್ನ ಹೃದಯವನ್ನು ಸಿದ್ಧಪಡಿಸಿಕೊ.
14 ನೀನು ಪಾಪವನ್ನು ಹಿಡಿದುಕೊಂಡಿದ್ದರೆ ಅದನ್ನು ನಿನ್ನಿಂದ ದೂರಮಾಡು.
    ದುಷ್ಟತನವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
15 ಆಗ ನೀನು ಖಂಡಿತವಾಗಿ ನಾಚಿಕೆಯಿಲ್ಲದೆ ತಲೆಯೆತ್ತುವೆ;
    ಸ್ಥಿರವಾಗಿ ನಿಂತುಕೊಂಡು ನಿರ್ಭಯದಿಂದಿರುವೆ.
16 ಯೋಬನೇ, ಆಗ ನೀನು ನಿನ್ನ ಕಷ್ಟವನ್ನು ಮರೆತುಬಿಡುವೆ;
    ಹರಿದುಹೋದ ನೀರನ್ನೋ ಎಂಬಂತೆ ನಿನ್ನ ಕಷ್ಟಗಳನ್ನು ಜ್ಞಾಪಿಸಿಕೊಳ್ಳುವೆ.
17 ನಿನ್ನ ಜೀವಿತವು ಮಧ್ಯಾಹ್ನದ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವುದು.
    ನಿನ್ನ ಜೀವಿತದ ಕಾರ್ಗತ್ತಲೆಯ ತಾಸುಗಳು ಮುಂಜಾನೆಯ ಸೂರ್ಯನಂತೆ ಹೊಳೆಯುತ್ತವೆ.
18 ಯೋಬನೇ, ನಿನಗೆ ನಿರೀಕ್ಷೆಯಿರುವುದರಿಂದ ಸುರಕ್ಷಿತನಾಗಿರುವೆ.
    ಆತನು ನಿನ್ನನ್ನು ಪರಿಪಾಲಿಸುತ್ತಾ ನಿನಗೆ ವಿಶ್ರಾಂತಿಯನ್ನು ದಯಪಾಲಿಸುವನು.
19 ಆಗ ನೀನು ಮಲಗಿ ವಿಶ್ರಮಿಸಿಕೊಳ್ಳುವೆ; ಯಾರೂ ನಿನಗೆ ಭಯ ಹುಟ್ಟಿಸುವುದಿಲ್ಲ.
    ಅನೇಕರು ನಿನ್ನ ಸಹಾಯಕ್ಕಾಗಿಯೇ ಕೇಳಿಕೊಳ್ಳುವರು.
20 ಆದರೆ ದುಷ್ಟರು ಸಹಾಯಕ್ಕಾಗಿ ಎದುರುನೋಡಿದರೂ
    ತಮ್ಮ ಆಪತ್ತುಗಳಿಂದ ಪಾರಾಗಲು ಅವರಿಗೆ ಸಾಧ್ಯವಿಲ್ಲ.
    ಅವರ ನಿರೀಕ್ಷೆಯೇ ಅವರನ್ನು ಮರಣಕ್ಕೆ ನಡೆಸುತ್ತದೆ.”

1 ಕೊರಿಂಥದವರಿಗೆ 7:10-16

10 ಮದುವೆಯಾಗಿರುವವರಿಗೆ ನಾನು ಈ ಆಜ್ಞೆಯನ್ನು ಕೊಡುತ್ತೇನೆ. (ಈ ಆಜ್ಞೆಯು ನನ್ನದಲ್ಲ. ಪ್ರಭುವಿನದು.) ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಡಬಾರದು. 11 ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಟ್ಟರೆ ಆಕೆಯು ಮತ್ತೆ ಮದುವೆ ಮಾಡಿಕೊಳ್ಳಕೂಡದು, ಇಲ್ಲವಾದರೆ ಆಕೆ ತನ್ನ ಗಂಡನ ಸಂಗಡ ಮತ್ತೆ ಒಂದಾಗಬೇಕು. ಇದೇ ರೀತಿ, ಗಂಡನು, ತನ್ನ ಹೆಂಡತಿಯನ್ನು ಬಿಟ್ಟುಬಿಡಬಾರದು.

12 ಉಳಿದೆಲ್ಲ ಜನರ ವಿಷಯದಲ್ಲಿ ನಾನು ಹೇಳುವುದೇನೆಂದರೆ (ಈ ಸಂಗತಿಗಳನ್ನು ಹೇಳುತ್ತಿರುವವನು ನಾನೇ ಹೊರತು ಪ್ರಭುವಲ್ಲ.) ಕ್ರಿಸ್ತನಲ್ಲಿ ಸಹೋದರನಾದ ಒಬ್ಬನಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯಿದ್ದರೆ ಮತ್ತು ಆಕೆ ಅವನೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಅವನು ಆಕೆಗೆ ವಿವಾಹವಿಚ್ಛೇದನ ಕೊಡಕೂಡದು. 13 ಅದೇರೀತಿ, ಸ್ತ್ರೀಯೊಬ್ಬಳಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ಇದ್ದರೆ ಮತ್ತು ಅವನು ಆಕೆಯೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಆಕೆ ಅವನಿಗೆ ವಿವಾಹವಿಚ್ಛೇದನ ಕೊಡಕೂಡದು. 14 ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ತನ್ನ ಕ್ರೈಸ್ತ ಹೆಂಡತಿಯ ಮೂಲಕ ಪವಿತ್ರನಾಗುತ್ತಾನೆ. ಅದೇರೀತಿ, ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯು ತನ್ನ ಕ್ರೈಸ್ತ ಗಂಡನ ಮೂಲಕ ಪವಿತ್ರಳಾಗುತ್ತಾಳೆ. ಇದು ಸತ್ಯವಾಗಿಲ್ಲದಿದ್ದರೆ, ನಿಮ್ಮ ಮಕ್ಕಳು ಪವಿತ್ರರಾಗುತ್ತಿರಲಿಲ್ಲ. ಆದರೆ ಈಗ ನಿಮ್ಮ ಮಕ್ಕಳು ಪವಿತ್ರರಾಗಿದ್ದಾರೆ.

15 ಆದರೆ ಕ್ರಿಸ್ತ ವಿಶ್ವಾಸಿಯಲ್ಲದ ವ್ಯಕ್ತಿಯು ಬಿಟ್ಟು ಹೋಗಲು ನಿರ್ಧರಿಸಿದರೆ, ಆ ವ್ಯಕ್ತಿಯು ಬಿಟ್ಟು ಹೋಗಲಿ. ಈ ರೀತಿ ಸಂಭವಿಸಿದರೆ, ಕ್ರೈಸ್ತ ಸಹೋದರನಾಗಲಿ ಕ್ರೈಸ್ತ ಸಹೋದರಿಯಾಗಲಿ ವಿವಾಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ದೇವರು ನಮ್ಮನ್ನು ಸಮಾಧಾನದ ಜೀವಿತಕ್ಕೆ ಕರೆದನು. 16 ಹೆಂಡತಿಯರೇ, ನೀವು ನಿಮ್ಮ ಗಂಡಂದಿರನ್ನು ರಕ್ಷಿಸಬಹುದು. ಗಂಡಂದಿರೇ, ನೀವು ನಿಮ್ಮ ಹೆಂಡತಿಯರನ್ನು ರಕ್ಷಿಸಬಹುದು. ಆದರೆ ಮುಂದೆ ಏನಾಗುವುದೋ ನಮಗೆ ಗೊತ್ತಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International