Revised Common Lectionary (Semicontinuous)
ಯೋಬನಿಗೆ ದೇವರ ಉತ್ತರ
38 ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು:
2 “ನನ್ನ ಉದ್ದೇಶಗಳನ್ನು ಮೂರ್ಖತನದ ಮಾತುಗಳಿಂದ ಗಲಿಬಿಲಿಗೊಳಿಸುತ್ತಿರುವ
ಈ ಮನುಷ್ಯನು ಯಾರು?
3 ಯೋಬನೇ, ನಡುಕಟ್ಟಿಕೊಂಡು ಬಲಿಷ್ಠನಾಗಿರು.
ನಾನು ನಿನಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗು.
4 “ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ?
ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು.
5 ಯೋಬನೇ, ಭೂಮಿಯ ಅಳತೆಗಳನ್ನು ಯಾರು ನಿರ್ಧರಿಸಿದರು?
ಭೂಮಿಯ ಅಳತೆಯನ್ನು ನೂಲುಗುಂಡಿನಿಂದ ಅಳೆದವರು ಯಾರು?
6 ಭೂಮಿಯ ಆಧಾರಸ್ತಂಭಗಳು ಯಾವುದರ ಮೇಲೆ ನೆಲೆಗೊಂಡಿವೆ?
ಭೂಮಿಯ ಅಸ್ತಿವಾರಕ್ಕೆ ಮೊದಲ ಕಲ್ಲನ್ನು ಹಾಕಿದವರು ಯಾರು?
7 ಅದು ಸಂಭವಿಸಿದಾಗ, ಮುಂಜಾನೆಯ ನಕ್ಷತ್ರಗಳು ಒಟ್ಟಾಗಿ ಹಾಡಿದವು;
ದೇವದೂತರುಗಳು ಆನಂದಘೋಷ ಮಾಡಿದರು!
34 “ಯೋಬನೇ, ನೀನು ಮೋಡಗಳಿಗೆ ಮಹಾಧ್ವನಿಯಿಂದ ಆಜ್ಞಾಪಿಸಿ
ಅವು ನಿನ್ನನ್ನು ದೊಡ್ಡ ಮಳೆಯಿಂದ ಆವರಿಸಿಕೊಳ್ಳುವಂತೆ ಮಾಡಬಲ್ಲೆಯಾ?
35 ಯೋಬನೇ, ನೀನು ಸಿಡಿಲಿಗೆ ಆಜ್ಞಾಪಿಸಬಲ್ಲೆಯಾ?
ಅದು ನಿನ್ನ ಬಳಿಗೆ ಬಂದು, ‘ಇಗೋ ಬಂದಿದ್ದೇನೆ;
ತಮಗೇನಾಗಬೇಕು’ ಎನ್ನುವುದೇ?
36 “ಯೋಬನೇ, ಮನುಷ್ಯರನ್ನು ಜ್ಞಾನಿಗಳನ್ನಾಗಿ ಮಾಡುವವರು ಯಾರು?
ಅವರ ಅಂತರಾಳದಲ್ಲಿ ಜ್ಞಾನವನ್ನು ಇಡುವವರು ಯಾರು?
37 ಮೋಡಗಳನ್ನು ಲೆಕ್ಕಿಸಿ
ಮಳೆ ಸುರಿಸಲು ಅವುಗಳನ್ನು ಮೊಗಚಿಹಾಕಿ
38 ಧೂಳನ್ನು ಮಣ್ಣನ್ನಾಗಿಯೂ ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ
ಮಾಡುವ ಜ್ಞಾನಿ ಯಾರು?
39-40 “ಯೋಬನೇ, ಹೆಣ್ಣುಸಿಂಹಕ್ಕೆ ನೀನು ಆಹಾರವನ್ನು ಹುಡುಕುವೆಯಾ?
ಗವಿಗಳಲ್ಲಿ ಮಲಗಿಕೊಂಡಿರುವ ಸಿಂಹಗಳಿಗೂ ಪೊದೆಯಲ್ಲಿ ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಿಗೂ ನೀನು ಉಣಿಸಬಲ್ಲೆಯಾ?
41 ಕಾಗೆಗಳು ಆಹಾರವಿಲ್ಲದೆ ಅಲೆದಾಡುತ್ತಿರುವ ಅವುಗಳ ಮರಿಗಳು ದೇವರಿಗೆ ಮೊರೆಯಿಡುವಾಗ
ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು?
104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
2 ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
3 ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
4 ಗಾಳಿಯನ್ನು ನಿನ್ನ ದೂತರನ್ನಾಗಿಯೂ
ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
5 ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
ಅದೆಂದಿಗೂ ನಾಶವಾಗದು.
6 ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
7 ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
ನೀನು ಬರ್ಜಿಸಲು ನೀರು ಓಡಿಹೋಯಿತು.
8 ಜಲರಾಶಿಗಳು ಬೆಟ್ಟಗಳಿಂದ ಇಳಿದು
ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
9 ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!
ಯೆಹೋವನನ್ನು ಕೊಂಡಾಡು!
5 ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. 2 ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. 3 ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.
4 ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. 5 ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:
“ನೀನು ನನ್ನ ಮಗನು.
ಈ ದಿನ ನಾನು ನಿನ್ನ ತಂದೆಯಾದೆನು.”(A)
6 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:
“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
ಪ್ರಧಾನಯಾಜಕನಾಗಿರುವೆ.”(B)
7 ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು. 8 ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು. 9 ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ. 10 ದೇವರು ಆತನನ್ನು ಮೆಲ್ಕಿಜೆದೇಕನಂತೆ ಪ್ರಧಾನ ಯಾಜಕನನ್ನಾಗಿ ಮಾಡಿದನು.
ಯಾಕೋಬ ಮತ್ತು ಯೋಹಾನರ ವಿಶೇಷ ಕೋರಿಕೆ
(ಮತ್ತಾಯ 20:20-28)
35 ನಂತರ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮ ಒಂದು ಕೋರಿಕೆಯನ್ನು ನೀನು ನಡೆಸಿಕೊಡಬೇಕು” ಎಂದರು.
36 ಯೇಸು, “ನಿಮ್ಮ ಯಾವ ಕೋರಿಕೆಯನ್ನು ನಡೆಸಿಕೊಡಬೇಕು?” ಎಂದು ಕೇಳಿದನು.
37 ಅವರು, “ನೀನು ನಿನ್ನ ರಾಜ್ಯದಲ್ಲಿ ವೈಭವದಿಂದಿರುವಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ಅನುಗ್ರಹಿಸು” ಎಂದು ಉತ್ತರಿಸಿದರು.
38 ಯೇಸು, “ನೀವು ಏನು ಕೇಳುತ್ತಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲ. ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ಕುಡಿಯಲು ನಿಮಗೆ ಸಾಧ್ಯವೇ? ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವು ಹೊಂದಲು ಸಾಧ್ಯವೇ?” ಎಂದನು.
39 ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ. 40 ಆದರೆ ನನ್ನ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಆರಿಸುವವನು ನಾನಲ್ಲ. ಆ ಸ್ಥಳಗಳನ್ನು ಯಾರಿಗಾಗಿ ಸಿದ್ಧಪಡಿಸಲಾಗಿದೆಯೋ ಅವರಿಗಾಗಿಯೇ ಅವುಗಳನ್ನು ಕಾದಿರಿಸಲಾಗಿದೆ” ಎಂದನು.
41 ಉಳಿದ ಹತ್ತು ಜನ ಶಿಷ್ಯರು ಇದನ್ನು ಕೇಳಿ ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು. 42 ಯೇಸು ಎಲ್ಲಾ ಶಿಷ್ಯರನ್ನು ಒಟ್ಟಾಗಿ ಕರೆದು, “ಯೆಹೂದ್ಯರಲ್ಲದವರು ಅಧಿಪತಿಗಳನ್ನು ಹೊಂದಿದ್ದಾರೆ. ಆ ಅಧಿಪತಿಗಳು ಜನರ ಮೇಲೆ ತಮಗಿರುವ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆಂಬುದು ನಿಮಗೆ ತಿಳಿದಿದೆ. ಅವರ ಪ್ರಮುಖ ನಾಯಕರುಗಳು ಜನರ ಮೇಲೆ ತಮಗಿರುವ ಅಧಿಕಾರವನ್ನೆಲ್ಲಾ ಉಪಯೋಗಿಸಲು ಇಷ್ಟಪಡುತ್ತಾರೆ. 43 ಆದರೆ ನೀವು ಅವರಂತಾಗಬಾರದು. 44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು. 45 ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International