Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:121-128

121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
    ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
    ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
    ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
    ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
    ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
    ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
    ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.

1 ರಾಜರುಗಳು 4:29-34

ಸೊಲೊಮೋನನ ಜ್ಞಾನ

29 ದೇವರು ಸೊಲೊಮೋನನಿಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು. ಸೊಲೊಮೋನನು ಅನೇಕಾನೇಕ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದನು. ಯಾರೂ ಊಹಿಸಿಕೊಳ್ಳಲಾರದಷ್ಟು ಜ್ಞಾನವನ್ನು ಅವನು ಹೊಂದಿದ್ದನು. 30 ಅವನ ಜ್ಞಾನವು ಈಜಿಪ್ಟಿನ ಗಂಡಸರೆಲ್ಲರ ಜ್ಞಾನಕ್ಕಿಂತಲೂ ಹೆಚ್ಚಿನದಾಗಿತ್ತು. ಸೊಲೊಮೋನನ ಜ್ಞಾನವು ಪೂರ್ವದಿಕ್ಕಿನ ಜನರೆಲ್ಲರ ಜ್ಞಾನಕ್ಕಿಂತ ವಿಶಾಲವಾಗಿತ್ತು. 31 ಪ್ರಪಂಚದಲ್ಲಿನ ಯಾವುದೇ ವ್ಯಕ್ತಿಯ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವು ಅವನಲ್ಲಿತ್ತು. ಅವನು ಜೆರಹನ ಮಗನಾದ ಏತಾನನಿಗಿಂತಲೂ ಜ್ಞಾನಿಯಾಗಿದ್ದನು. ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದರಿಗಿಂತ ಅವನು ಜ್ಞಾನಿಯಾಗಿದ್ದನು. ರಾಜನಾದ ಸೊಲೊಮೋನನು ಇಸ್ರೇಲ್ ಮತ್ತು ಯೆಹೂದಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ಪ್ರಸಿದ್ಧನಾಗಿದ್ದನು. 32 ರಾಜನಾದ ಸೊಲೊಮೋನನು ತನ್ನ ಜೀವಿತದ ಅವಧಿಯಲ್ಲಿ ಮೂರುಸಾವಿರ ಜ್ಞಾನೋಪದೇಶಗಳನ್ನೂ ಒಂದು ಸಾವಿರದ ಐದು ಹಾಡುಗಳನ್ನೂ ಬರೆದನು.

33 ಸೊಲೊಮೋನನು ಪ್ರಕೃತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡನು. ಸೊಲೊಮೋನನು ಲೆಬನೋನಿನ ದೇವದಾರು ವೃಕ್ಷಗಳಿಂದ ಮೊದಲುಗೊಂಡು ಗೋಡೆಗಳಲ್ಲಿ ಬೆಳೆಯುವ ಗಿಡಗಳವರೆಗೆ, ವಿವಿಧ ರೀತಿಯ ಸಸ್ಯಗಳ ಬಗ್ಗೆ ಪ್ರಸ್ತಾಪಿಸಿದನು. ರಾಜನಾದ ಸೊಲೊಮೋನನು ಪ್ರಾಣಿಗಳ, ಪಕ್ಷಿಗಳ ಮತ್ತು ಹರಿದಾಡುವ ಜಂತುಗಳ ಬಗ್ಗೆಯೂ ಪ್ರಸ್ತಾಪಿಸಿದನು. 34 ರಾಜನಾದ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳಲು ಎಲ್ಲಾ ದೇಶಗಳ ಜನರೂ ಬರುತ್ತಿದ್ದರು. ಎಲ್ಲಾ ದೇಶದ ರಾಜರುಗಳು ತಮ್ಮ ದೇಶದ ಜ್ಞಾನಿಗಳನ್ನು ರಾಜನಾದ ಸೊಲೊಮೋನನ ಬಳಿಗೆ ಕಳುಹಿಸುತ್ತಿದ್ದರು.

ಎಫೆಸದವರಿಗೆ 6:10-18

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ

10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International