Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
ಮಾಡಲು ನಾನು ಪ್ರಯತ್ನಿಸುವುದಿಲ್ಲ.
2 ನಾನು ಸಮಾಧಾನದಿಂದಿರುವೆ.
ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.
3 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಈಗಲೂ ಆತನಲ್ಲಿ ಭರವಸವಿಡು.
ಎಂದೆಂದಿಗೂ ಆತನಲ್ಲಿ ಭರವಸವಿಡು!
10 ಯೆರೆಮೀಯನು ತನ್ನ ಹೆಗಲಿನ ಮೇಲೆ ನೊಗವನ್ನು ಹೊತ್ತುಕೊಂಡಿದ್ದನು. ಪ್ರವಾದಿಯಾದ ಹನನ್ಯನು ಯೆರೆಮೀಯನ ಹೆಗಲಿನಿಂದ ಆ ನೊಗವನ್ನು ತೆಗೆದುಕೊಂಡು ಆ ನೊಗವನ್ನು ಮುರಿದುಹಾಕಿದನು. 11 ಆಮೇಲೆ ಹನನ್ಯನು ಗಟ್ಟಿಯಾಗಿ ಎಲ್ಲರೂ ಕೇಳುವಂತೆ ಮಾತನಾಡಿದನು. “ಯೆಹೋವನು ಹೇಳುತ್ತಾನೆ: ‘ಇದೇ ರೀತಿಯಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಹೇರಿದ ನೊಗವನ್ನು ನಾನು ಮುರಿದುಹಾಕುವೆನು. ಅವನು ಆ ನೊಗವನ್ನು ಜಗತ್ತಿನ ಸಮಸ್ತ ಜನಾಂಗಗಳ ಮೇಲೆ ಹೇರಿದ್ದಾನೆ. ಆದರೆ ನಾನು ಆ ನೊಗವನ್ನು ಎರಡು ವರ್ಷದೊಳಗಾಗಿ ಮುರಿದುಹಾಕುವೆನು.’”
ಹನನ್ಯನು ಹಾಗೆ ಹೇಳಿದ ಮೇಲೆ ಯೆರೆಮೀಯನು ಪವಿತ್ರಾಲಯವನ್ನು ಬಿಟ್ಟನು.
12 ಆಗ ಯೆರೆಮೀಯನಿಗೆ ಯೆಹೋವನ ಸಂದೇಶ ಬಂದಿತು. ಹನನ್ಯನು ಯೆರೆಮೀಯನ ಕತ್ತಿನಿಂದ ನೊಗವನ್ನು ತೆಗೆದುಕೊಂಡು ಮುರಿದುಹಾಕಿದ ಮೇಲೆ ಈ ಸಂದೇಶ ಬಂದಿತು. 13 ಯೆಹೋವನು ಯೆರೆಮೀಯನಿಗೆ ಹೀಗೆಂದನು: “ಹೋಗಿ ಹನನ್ಯನಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ. ನೀನು ಮರದ ನೊಗವನ್ನು ಮುರಿದೆ, ಆದರೆ ನಾನು ಮರದ ನೊಗಕ್ಕೆ ಬದಲಾಗಿ ಕಬ್ಬಿಣದ ನೊಗವನ್ನು ಮಾಡುವೆನು. 14 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ, ನಾನು ಕಬ್ಬಿಣದ ನೊಗವನ್ನು ಈ ಎಲ್ಲಾ ಜನಾಂಗಗಳ ಹೆಗಲಿನ ಮೇಲೆ ಹೊರಿಸುವೆನು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಸೇವೆಯನ್ನು ಮಾಡುವಂತೆ ಮಾಡುತ್ತೇನೆ. ಅವರು ಅವನಿಗೆ ಗುಲಾಮರಾಗಿರುವರು. ನಾನು ನೆಬೂಕದ್ನೆಚ್ಚರನಿಗೆ ಕಾಡುಪ್ರಾಣಿಗಳ ಮೇಲೂ ಅಧಿಕಾರವನ್ನು ದಯಪಾಲಿಸುವೆನು.’”
15 ತರುವಾಯ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಹೇಳಿದನು: “ಹನನ್ಯನೇ, ಕೇಳು. ಯೆಹೋವನು ನಿನ್ನನ್ನು ಕಳುಹಿಸಲಿಲ್ಲ. ಆದರೆ ಯೆಹೂದದ ಜನರಿಗೆ ಸುಳ್ಳನ್ನು ನಂಬುವಂತೆ ನೀನು ಮಾಡಿರುವೆ. 16 ಅದಕ್ಕಾಗಿ ಯೆಹೋವನು ಹೀಗೆ ಹೇಳುತ್ತಾನೆ: ‘ಹನನ್ಯನೇ, ನಾನು ನಿನ್ನನ್ನು ಶೀಘ್ರದಲ್ಲಿ ಈ ಜಗತ್ತಿನಿಂದ ತೆಗೆದುಬಿಡುತ್ತೇನೆ. ನೀನು ಈ ವರ್ಷ ಮರಣಹೊಂದುವೆ. ಏಕೆಂದರೆ ನೀನು ಜನರನ್ನು ಯೆಹೋವನ ವಿರುದ್ಧ ತಿರುಗುವಂತೆ ಮಾಡಿದೆ.’”
17 ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಮರಣಹೊಂದಿದನು.
3 ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ? 2 ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು. 3 ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ? 4 ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ:
“ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು.
ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.”(A)
5 ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) 6 ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.
7 “ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು. 8 “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.
Kannada Holy Bible: Easy-to-Read Version. All rights reserved. © 1997 Bible League International