Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 131

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
    ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
    ಮಾಡಲು ನಾನು ಪ್ರಯತ್ನಿಸುವುದಿಲ್ಲ.
ನಾನು ಸಮಾಧಾನದಿಂದಿರುವೆ.
    ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
    ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.

ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಈಗಲೂ ಆತನಲ್ಲಿ ಭರವಸವಿಡು.
    ಎಂದೆಂದಿಗೂ ಆತನಲ್ಲಿ ಭರವಸವಿಡು!

ಯೆರೆಮೀಯ 13:1-11

ನಡುಪಟ್ಟಿಯ ಸಂಕೇತ

13 ಯೆಹೋವನು ನನಗೆ ಹೀಗೆ ಹೇಳಿದನು, “ಯೆರೆಮೀಯನೇ, ಹೋಗಿ ಒಂದು ನಾರಿನ ನಡುಪಟ್ಟಿಯನ್ನು ಕೊಂಡುಕೊ. ಅದನ್ನು ನಿನ್ನ ಸೊಂಟಕ್ಕೆ ಸುತ್ತಿಕೊ. ಆ ನಡುಪಟ್ಟಿ ನೀರಿನಲ್ಲಿ ನೆನೆಯದಂತೆ ನೋಡಿಕೊ.”

ಯೆಹೋವನು ಹೇಳಿದಂತೆ ನಾನು ಒಂದು ನಾರಿನ ನಡುಪಟ್ಟಿಯನ್ನು ಕೊಂಡು ತಂದೆನು. ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಂಡೆನು. ಆಗ ಎರಡನೇ ಸಲ ನನಗೆ ಯೆಹೋವನ ಸಂದೇಶ ಬಂದಿತು. ಆ ಸಂದೇಶವಿದು, “ಯೆರೆಮೀಯನೇ, ನೀನು ಕೊಂಡ ತಂದು ಸುತ್ತಿಕೊಂಡ ನಡುಪಟ್ಟಿಯನ್ನು ತೆಗೆದುಕೊಂಡು ಪೆರಾತ್‌ಗೆ ಹೋಗು. ಆ ನಡುಪಟ್ಟಿಯನ್ನು ಬೆಟ್ಟದ ಸಂದಿನಲ್ಲಿ ಬಚ್ಚಿಡು.”

ಆದ್ದರಿಂದ ನಾನು ಪೆರಾತ್‌ಗೆ ಹೋದೆ. ಯೆಹೋವನು ಹೇಳಿದ ಪ್ರಕಾರ ನಡುಪಟ್ಟಿಯನ್ನು ಬಚ್ಚಿಟ್ಟೆ. ಬಹಳ ದಿನಗಳಾದ ತರುವಾಯ, ಯೆಹೋವನು ನನಗೆ, “ಯೆರೆಮೀಯನೇ, ಪೆರಾತ್‌ಗೆ ಹೋಗು, ನಾನು ನಿನಗೆ ಅಲ್ಲಿ ಬಚ್ಚಿಡಲು ಹೇಳಿದ ನಡುಪಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.

ನಾನು ಪೆರಾತ್‌ಗೆ ಹೋದೆ ಮತ್ತು ನಡುಪಟ್ಟಿಯನ್ನು ಬಚ್ಚಿಟ್ಟ ಬೆಟ್ಟದ ಸಂದಿನಿಂದ ಹೊರತೆಗೆದೆ. ಆದರೆ ಆ ನಡುಪಟ್ಟಿ ಹಾಳಾಗಿಹೋಗಿತ್ತು. ನಾನು ಅದನ್ನು ಧರಿಸಲಾಗಲಿಲ್ಲ. ಅದು ಯಾವುದಕ್ಕೂ ಪ್ರಯೋಜನವಿರಲಿಲ್ಲ.

ಆಗ ನನಗೆ ಯೆಹೋವನ ಸಂದೇಶ ಬಂದಿತು. ಯೆಹೋವನು ಹೀಗೆ ಹೇಳಿದನು, “ನಡುಪಟ್ಟಿಯು ಹಾಳಾಗಿ ನಿಷ್ಪ್ರಯೋಜಕವಾಗಿದೆ. ಅಂತೆಯೇ ನಾನು ಯೆಹೂದದ ಮತ್ತು ಜೆರುಸಲೇಮಿನ ಜಂಬದ ಜನರನ್ನು ಹಾಳುಮಾಡುತ್ತೇನೆ. 10 ಯೆಹೂದದಲ್ಲಿ ದುಷ್ಟರೂ ಗರ್ವಿಷ್ಠರೂ ಆಗಿರುವ ಜನರನ್ನು ಹಾಳುಮಾಡುವೆನು. ಅವರು ನನ್ನ ಸಂದೇಶವನ್ನು ಕೇಳುವುದಿಲ್ಲ. ಅವರು ಹಟಮಾರಿಗಳೂ ತಮ್ಮ ಮನಸ್ಸಿಗೆ ಬಂದಂತೆ ಮಾಡುವವರೂ ಆಗಿದ್ದಾರೆ. ಅವರು ಬೇರೆ ದೇವರುಗಳನ್ನು ಅನುಸರಿಸುತ್ತಾರೆ ಮತ್ತು ಪೂಜಿಸುತ್ತಾರೆ. ಯೆಹೂದದ ಜನರು ಈ ನಾರಿನ ನಡುಪಟ್ಟಿಯಂತೆ ಆಗುವರು. ಅವರು ಹಾಳಾಗಿ ನಿಷ್ಪ್ರಯೋಜಕರಾಗುವರು. 11 ಪುರುಷನೊಬ್ಬನು ನಡುಪಟ್ಟಿಯನ್ನು ಬಿಗಿಯಾಗಿ ಸೊಂಟಕ್ಕೆ ಸುತ್ತಿಕೊಳ್ಳುವಂತೆ ನಾನು ಇಸ್ರೇಲಿನ ಎಲ್ಲಾ ವಂಶಗಳನ್ನು ಮತ್ತು ಯೆಹೂದದ ಎಲ್ಲಾ ವಂಶಗಳನ್ನು ನನ್ನ ಸುತ್ತಲೂ ಬಿಗಿದುಕೊಂಡೆನು.” ಇದು ಯೆಹೋವನಿಂದ ಬಂದ ಮಾತು. “ಅವರು ನನ್ನ ಜನರಾಗುವರು ಎಂದುಕೊಂಡು ನಾನು ಹಾಗೆ ಮಾಡಿದೆ. ನನ್ನ ಜನರು ನನಗೆ ಕೀರ್ತಿ, ಸ್ತುತಿ, ಗೌರವ ತರುವರೆಂದು ತಿಳಿದಿದ್ದೆ. ಆದರೆ ನನ್ನ ಜನರು ನನ್ನ ಮಾತನ್ನು ಕೇಳದೆಹೋದರು.”

ಯೋಹಾನ 13:1-17

ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು

13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.

ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.

ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.

ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.

ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.

ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.

ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.

10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.

12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International