Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 86:11-17

11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
    ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
    ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
    ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
    ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
    ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
    ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
    ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
    ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
    ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
    ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.

ಯೆಶಾಯ 44:18-20

18 ಅವರಿಗೆ ತಾವು ಮಾಡುವುದು ಗೊತ್ತಿಲ್ಲ. ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಕಾಣಲಾರದಂತೆ ಅವರ ಕಣ್ಣುಗಳು ಮುಚ್ಚಲ್ಪಟ್ಟಿವೆಯೋ ಎಂಬಂತಿವೆ. ಅವರ ಹೃದಯಗಳು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. 19 “ನಾನು ಆ ಮರದ ತುಂಡುಗಳನ್ನು ಬೆಂಕಿಯಲ್ಲಿ ಉರಿಸಿ ಚಳಿಕಾಯಿಸಿಕೊಂಡೆನು; ಅದರ ಕೆಂಡದಲ್ಲಿ ರೊಟ್ಟಿ ಸುಟ್ಟೆನು; ಮಾಂಸ ಬೇಯಿಸಿದೆನು; ಆ ಮಾಂಸವನ್ನು ತಿಂದೆನು; ಉಳಿದ ಮರದ ತುಂಡಿನಿಂದ ಅಸಹ್ಯವಾದ ಈ ವಿಗ್ರಹವನ್ನು ಮಾಡಿದೆನು; ನಾನು ಮರದ ತುಂಡನ್ನು ಪೂಜಿಸುತ್ತೇನೆ” ಎಂದು ಅವರೆಂದೂ ಯೋಚಿಸುವದಿಲ್ಲ.

20 ಆ ಮನುಷ್ಯನಿಗೆ ತಾನು ಮಾಡುತ್ತಿರುವುದೇ ತಿಳಿಯದು. ಅವನು ಗಲಿಬಿಲಿಗೊಂಡಿದ್ದಾನೆ. ಅವನ ಹೃದಯವು ಅವನನ್ನು ತಪ್ಪುದಾರಿಯಲ್ಲಿ ನಡಿಸುತ್ತದೆ. ಅವನು ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ತಾನು ಮಾಡುತ್ತಿರುವುದು ತಪ್ಪೆಂದು ಅವನು ಕಾಣಲಾರನು. “ನನ್ನ ಕೈಯಲ್ಲಿರುವ ಈ ವಿಗ್ರಹವು ಸುಳ್ಳು ದೇವರಾಗಿದೆ” ಎಂದು ಅವನು ಹೇಳುವದಿಲ್ಲ.

ಮತ್ತಾಯ 7:15-20

ಜನರ ನಡತೆಯನ್ನು ಗಮನಿಸಿ

(ಲೂಕ 6:43-44; 13:25-27)

15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ. 16 ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ. 17 ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. 20 ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International