Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:161-168

161 ಅಧಿಪತಿಗಳು ನಿಷ್ಕಾರಣವಾಗಿ ನನ್ನ ಮೇಲೆ ಆಕ್ರಮಣ ಮಾಡಿದರು.
    ನಾನಾದರೋ ನಿನ್ನ ಧರ್ಮಶಾಸ್ತ್ರವೊಂದಕ್ಕೇ ಭಯಪಡುವೆನು, ಅದೊಂದನ್ನೇ ಗೌರವಿಸುವೆನು.
162 ಮಹಾಭಂಡಾರವನ್ನು ಕಂಡುಕೊಂಡವನಂತೆ
    ನಾನು ನಿನ್ನ ವಾಕ್ಯದಲ್ಲಿ ಸಂತೋಷಿಸುವೆನು.
163 ನಾನು ಸುಳ್ಳುಗಳನ್ನು ದ್ವೇಷಿಸುವೆನು!
    ಅವು ನನಗೆ ಅಸಹ್ಯವಾಗಿವೆ.
    ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ.
164 ನಿನ್ನ ನೀತಿಯ ವಿಧಿನಿಯಮಗಳಿಗಾಗಿ
    ನಾನು ದಿನಕ್ಕೆ ಏಳು ಸಲ ನಿನ್ನನ್ನು ಕೊಂಡಾಡುವೆನು.
165 ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುವುದು.
    ಅವರನ್ನು ಯಾವುದೂ ಬೀಳಿಸಲಾರದು.
166 ಯೆಹೋವನೇ, ನಿನ್ನ ರಕ್ಷಣೆಗಾಗಿ ಕಾಯ್ದುಕೊಂಡಿದ್ದೇನೆ.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ.
167 ನಾನು ನಿನ್ನ ಕಟ್ಟಳೆಗಳನ್ನು ಅನುಸರಿಸಿದೆನು.
    ಅವು ನನಗೆ ಬಹು ಪ್ರಿಯವಾಗಿವೆ.
168 ನಾನು ನಿನ್ನ ಒಡಂಬಡಿಕೆಗೂ ನಿನ್ನ ನಿಯಮಗಳಿಗೂ ವಿಧೇಯನಾಗಿದ್ದೇನೆ.
    ನನ್ನ ನಡತೆಯೆಲ್ಲಾ ನಿನಗೆ ಗೊತ್ತಿದೆ.

ಯೆರೆಮೀಯ 18:1-11

ಕುಂಬಾರ ಮತ್ತು ಜೇಡಿಮಣ್ಣು

18 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನೀನು ಕುಂಬಾರನ ಮನೆಗೆ ಹೋಗು. ನಾನು ಕುಂಬಾರನ ಮನೆಯಲ್ಲಿಯೇ ನಿನಗೆ ಸಂದೇಶವನ್ನು ಕೊಡುತ್ತೇನೆ.”

ನಾನು ಕುಂಬಾರನ ಮನೆಗೆ ಹೋದೆನು. ಅವನು ಜೇಡಿಮಣ್ಣನ್ನು ಉಪಯೋಗಿಸಿ ಚಕ್ರದಿಂದ ಕೆಲಸ ಮಾಡುವದನ್ನು ನಾನು ಕಂಡೆನು. ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನ್ನು ಮಾಡುತ್ತಿದ್ದನು. ಆ ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದ್ದರಿಂದ ಆ ಕುಂಬಾರನು ಪುನಃ ಆ ಜೇಡಿಮಣ್ಣನ್ನು ಬಳಸಿ ಮತ್ತೊಂದು ಮಡಕೆಯನ್ನು ಮಾಡಿದನು. ಮಡಕೆಗೆ ತಾನು ಬಯಸಿದ ಆಕಾರವನ್ನು ಕೊಡಲು ತನ್ನ ಕೈಗಳನ್ನು ಉಪಯೋಗಿಸಿದನು.

ಆಗ ನನಗೆ ಯೆಹೋವನಿಂದ ಈ ಸಂದೇಶ ಬಂದಿತು: “ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಬುದನ್ನು ನೀವು ಬಲ್ಲಿರಿ. ನೀವು ಕುಂಬಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಬಾರನಂತಿದ್ದೇನೆ. ಒಮ್ಮೆ ನಾನು ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕುರಿತು ಮಾತನಾಡುವಾಗ ಆ ಜನಾಂಗವನ್ನು ನಾನು ಖಂಡಿಸುವೆನೆಂದು ಮತ್ತು ಆ ಜನಾಂಗವನ್ನು ನಾನು ನಾಶಪಡಿಸುವೆನೆಂದು ಹೇಳಬಹುದು. ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನ್ನು ಮತ್ತು ಜೀವನವನ್ನು ಪರಿವರ್ತಿಸಿಕೊಳ್ಳಬಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಆಗ ನಾನು ನನ್ನ ವಿಚಾರವನ್ನು ಬದಲಾಯಿಸಿ, ಆ ಜನಾಂಗವನ್ನು ನಾಶಪಡಿಸಬೇಕೆಂದು ಮಾಡಿದ ನನ್ನ ಮುಂಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರಬಹುದು. ಇನ್ನೊಮ್ಮೆ ಒಂದು ಜನಾಂಗದ ಬಗ್ಗೆ ಹೇಳುವಾಗ ಆ ಜನಾಂಗವನ್ನು ನಾನು ಅಭಿವೃದ್ಧಿಗೆ ತರುತ್ತೇನೆ, ಅದನ್ನು ನೆಟ್ಟು ಕಟ್ಟುತ್ತೇನೆ ಎಂದು ಹೇಳಬಹುದು. 10 ಆದರೆ ಆ ಜನಾಂಗವು ನನ್ನ ಆಜ್ಞಾಪಾಲನೆಯನ್ನು ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನ್ನು ನೋಡಿ ಆ ಜನಾಂಗಕ್ಕೆ ನಾನು ಮಾಡಬೇಕೆಂದಿದ್ದ ಒಳಿತಿನ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬಹುದು.

11 “ಯೆರೆಮೀಯನೇ, ಯೆಹೂದದ ಜನರಿಗೆ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಜನರಿಗೆ ಯೆಹೋವನು ಹೀಗೆನ್ನುವನು: ‘ಈಗಲೇ ನಾನು ನಿಮಗೋಸ್ಕರ ತೊಂದರೆಗಳನ್ನು ಎಬ್ಬಿಸುತ್ತೇನೆ. ನಿಮ್ಮ ವಿರುದ್ಧ ಯೋಜನೆಗಳನ್ನು ಹಾಕುತ್ತಿದ್ದೇನೆ. ಆದ್ದರಿಂದ ನೀವು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಪ್ರತಿಯೊಬ್ಬನು ಪರಿವರ್ತನೆ ಹೊಂದಿ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು’ ಎಂದು ಹೇಳು.

ಮತ್ತಾಯ 11:20-24

ನಂಬದ ಜನರಿಗೆ ಯೇಸುವಿನ ಎಚ್ಚರಿಕೆ

(ಲೂಕ 10:13-15)

20 ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೋ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ. 21 ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು. 22 ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.

23 “ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International