Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 55:10-13

10 “ಮಳೆಯೂ ಹಿಮವೂ ಆಕಾಶದಿಂದ ಬೀಳುವವು.
    ಅವು ನೆಲವನ್ನು ತೇವಮಾಡದೆ ಆಕಾಶಕ್ಕೆ ಹಿಂತಿರುಗುವುದಿಲ್ಲ.
ಆಗ ನೆಲವು ಬೀಜವನ್ನು ತೋಯಿಸಿ ಸಸಿ ಚಿಗುರುವಂತೆ ಮಾಡುವದು.
    ಆ ಸಸಿಗಳು ವ್ಯವಸಾಯಗಾರನಿಗೆ ಧಾನ್ಯವನ್ನು ಫಲಿಸುತ್ತವೆ.
    ಜನರು ಆ ಧಾನ್ಯದಿಂದ ರೊಟ್ಟಿಗಳನ್ನು ಮಾಡುವರು.
11 ಅದೇ ಪ್ರಕಾರ ನನ್ನ ಬಾಯಿಂದ ಹೊರಟ ಮಾತುಗಳು
    ಯೋಚಿಸಿದ ಕಾರ್ಯಗಳನ್ನು ಮಾಡದೆ ಹಿಂತಿರುಗುವುದಿಲ್ಲ.
ನನ್ನ ಮಾತುಗಳು ನನ್ನ ಆಲೋಚನೆಗೆ ಸರಿಯಾಗಿ ಕಾರ್ಯ ಮಾಡುವವು.
    ನನ್ನ ಮಾತುಗಳು ತಮಗೆ ನೇಮಕವಾದ ಆ ಕಾರ್ಯಗಳನ್ನು ಮಾಡಿಮುಗಿಸುವವು.

12 “ಆದ್ದರಿಂದ ನೀವು ಸಂತೋಷದಿಂದ ಹೊರಡುವಿರಿ
    ಮತ್ತು ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ.
ಪರ್ವತಗಳೂ ಬೆಟ್ಟಗಳೂ ಸಂತೋಷದಿಂದ ನಿಮ್ಮ ಮುಂದೆ ಕುಣಿದಾಡುವವು.
    ಭೂಮಿಯ ಮೇಲಿರುವ ಮರಗಳೆಲ್ಲಾ ಚಪ್ಪಾಳೆ ತಟ್ಟುವವು.
13 ಪೊದೆಗಳು ಇದ್ದ ಸ್ಥಳಗಳಲ್ಲಿ ಎತ್ತರವಾದ ದೇವದಾರು ಮರಗಳು ಬೆಳೆಯುವವು.
    ಹಣಜಿಯಿರುವ ಸ್ಥಳಗಳಲ್ಲಿ ಸುಗಂಧ ಮರಗಳು ಬೆಳೆಯುವವು.
ಇವು ಯೆಹೋವನಾಮವನ್ನು ಪ್ರಸಿದ್ಧಿಪಡಿಸುವವು.
    ಯೆಹೋವನೇ ಸರ್ವಶಕ್ತನೆಂದು ಇವು ತೋರಿಸುವವು.
    ಈ ಸಾಕ್ಷಿಯು ಎಂದಿಗೂ ನಾಶವಾಗುವದಿಲ್ಲ.”

ಕೀರ್ತನೆಗಳು 65:1-8

ರಚನೆಗಾರ: ದಾವೀದ.

65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
    ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
ಪ್ರಾರ್ಥನೆಯನ್ನು ಕೇಳುವಾತನೇ,
    ಜನರೆಲ್ಲರೂ ನಿನ್ನ ಬಳಿಗೆ ಬರುವರು.
ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
    ನಮ್ಮನ್ನು ಆ ಪಾಪಗಳಿಂದ ಬಿಡಿಸು.
ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
    ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
    ನಾವು ಉಲ್ಲಾಸಗೊಂಡಿದ್ದೇವೆ.
ನಮ್ಮ ರಕ್ಷಕನಾದ ದೇವರೇ,
    ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
    ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
    ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
ಭೋರ್ಗರೆಯುವ ಸಮುದ್ರಗಳನ್ನೂ
    ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
    ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.

ಕೀರ್ತನೆಗಳು 65:9-13

ದೇವರೇ, ಭೂಪಾಲಕನು ನೀನೇ.
    ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
    ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
    ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
    ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
    ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
    ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
    ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.

ರೋಮ್ನಗರದವರಿಗೆ 8:1-11

ಪವಿತ್ರಾತ್ಮನಿಗೆ ಅಧೀನವಾದ ಜೀವಿತ

ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.

ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.

ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.

ಮತ್ತಾಯ 13:1-9

ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ

(ಮಾರ್ಕ 4:1-9; ಲೂಕ 8:4-8)

13 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:

“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”

ಮತ್ತಾಯ 13:18-23

ಬಿತ್ತನೆಯ ಕುರಿತು ಯೇಸುವಿನ ವಿವರಣೆ

(ಮಾರ್ಕ 4:13-20; ಲೂಕ 8:11-15)

18 “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ.

19 “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ.

20 “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು. 21 ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು.

22 “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ.

23 “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International