Revised Common Lectionary (Complementary)
8 ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
ನೀನು ಎಂದೆಂದಿಗೂ ಆಳುವೆ.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
ತನ್ನ ಜನರು ಹಿಂದಿರುಗಿ ಬರಬೇಕೆಂದು ಯೆಹೋವನು ಆಶಿಸುತ್ತಾನೆ
1 ಪರ್ಶಿಯಾದಲ್ಲಿ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಬೆರೆಕ್ಯನ ಮಗನಾದ ಜೆಕರ್ಯನಿಗೆ ಯೆಹೋವನಿಂದ ಸಂದೇಶವು ದೊರಕಿತು. ಬೆರೆಕ್ಯನು ಪ್ರವಾದಿಯಾದ ಇದ್ದೋವಿನ ಮಗನು. ಇದು ಆತನ ಸಂದೇಶ:
2 ನಿಮ್ಮ ಪೂರ್ವಿಕರ ಮೇಲೆ ಯೆಹೋವನು ಬಹಳವಾಗಿ ಕೋಪಗೊಂಡಿದ್ದಾನೆ. 3 ಆದ್ದರಿಂದ ನಿನ್ನ ಜನರಿಗೆ ನೀನು ಈ ವಿಷಯಗಳನ್ನು ತಿಳಿಸಬೇಕು. ಯೆಹೋವನು ಹೇಳುವುದೇನೆಂದರೆ, “ನನ್ನ ಬಳಿಗೆ ಹಿಂದಿರುಗಿರಿ. ಆಗ ನಾನು ನಿಮ್ಮ ಬಳಿಗೆ ಹಿಂದಿರುಗುವೆನು” ಇದು ಸರ್ವಶಕ್ತನಾದ ಯೆಹೋವನ ಮಾತುಗಳು.
4 ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರಂತೆ ಆಗಬೇಡಿರಿ. ಹಿಂದಿನ ಕಾಲದಲ್ಲಿ ಪ್ರವಾದಿಗಳು ಅವರ ಸಂಗಡ ಮಾತನಾಡಿದರು. ಅವರು, ‘ಸರ್ವಶಕ್ತನಾದ ಯೆಹೋವನು ನಿಮ್ಮ ಕೆಟ್ಟಜೀವಿತವನ್ನು ಬದಲಾಯಿಸಲು ಇಷ್ಟಪಡುತ್ತಾನೆ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿರಿ.’ ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ.
5 ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರು ದಾಟಿಹೋದರು. ಆ ಪ್ರವಾದಿಗಳು ನಿತ್ಯಕಾಲಕ್ಕೂ ಜೀವಿಸಲಿಲ್ಲ. 6 ಪ್ರವಾದಿಗಳು ನನ್ನ ಸೇವಕರು. ನಿಮ್ಮ ಪೂರ್ವಿಕರಿಗೆ ನ್ಯಾಯಪ್ರಮಾಣಗಳನ್ನು ಬೋಧಿಸಲು ನಾನು ಅವರನ್ನು ಉಪಯೋಗಿಸಿದೆನು. ನಿಮ್ಮ ಪೂರ್ವಿಕರು ಕಟ್ಟಕಡೆಗೆ ಪಾಠವನ್ನು ಕಲಿತರು. ಅವರು, ‘ಸರ್ವಶಕ್ತನಾದ ಯೆಹೋವನು ತಾನು ಹೇಳಿದ್ದನ್ನು ನೆರವೇರಿಸಿದನು. ನಮ್ಮ ದುಷ್ಕೃತ್ಯಗಳಿಗಾಗಿ ನಮ್ಮನ್ನು ಶಿಕ್ಷಿಸಿದನು’ ಎಂದು ಹೇಳಿದರು ಮತ್ತು ದೇವರ ಕಡೆಗೆ ತಿರುಗಿದರು.”
ನೀತಿವಂತರಿಗೆ ಧರ್ಮಶಾಸ್ತ್ರದ ಹಂಗಿಲ್ಲ
7 ಸಹೋದರ ಸಹೋದರಿಯರೇ, ನೀವೆಲ್ಲರು ಮೋಶೆಯ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯು ಜೀವದಿಂದಿರುವವರೆಗೆ ಮಾತ್ರ ಧರ್ಮಶಾಸ್ತ್ರವು ಆ ವ್ಯಕ್ತಿಯನ್ನು ಆಳುತ್ತದೆ ಎಂಬುದು ನಿಮಗೆ ತಿಳಿದಿಲ್ಲವೇ? 2 ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ: ಗಂಡನು ಬದುಕಿರುವ ತನಕ ಹೆಂಡತಿಯು ಕಾನೂನಿನ ಪ್ರಕಾರ ಅವನಿಗೆ ಬದ್ಧಳಾಗಿರಬೇಕು. ಆದರೆ ಆಕೆಯ ಗಂಡನು ತೀರಿಕೊಂಡರೆ, ವಿವಾಹದ ಕಾನೂನಿನಿಂದ ಆಕೆಯು ಬಿಡುಗಡೆಯಾಗಿದ್ದಾಳೆ. 3 ಆದರೆ ತನ್ನ ಗಂಡನು ಜೀವದಿಂದಿರುವಾಗಲೇ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುತ್ತಾಳೆಂದು ಧರ್ಮಶಾಸ್ತ್ರವು ಹೇಳುತ್ತದೆ. ಆದರೆ ಆಕೆಯ ಗಂಡನು ಸತ್ತುಹೋದರೆ ಆಕೆಯು ವಿವಾಹದ ಹಂಗಿನಿಂದ ಬಿಡುಗಡೆಯಾಗಿದ್ದಾಳೆ. ಹೀಗಿರಲಾಗಿ, ತನ್ನ ಗಂಡನು ತೀರಿಕೊಂಡ ಮೇಲೆ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುವುದಿಲ್ಲ.
4 ನನ್ನ ಸಹೋದರ ಸಹೋದರಿಯರೇ, ಇದೇ ರೀತಿಯಲ್ಲಿ ನಿಮ್ಮ ಹಳೆಯ ಸ್ವಭಾವವು ಸತ್ತುಹೋಯಿತು; ನೀವು ಕ್ರಿಸ್ತನ ದೇಹದ ಮೂಲಕ ಧರ್ಮಶಾಸ್ತ್ರದಿಂದ ಬಿಡುಗಡೆಯಾದಿರಿ. ಈಗ ನೀವು, ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಾತನಿಗೆ ಸೇರಿದವರಾಗಿದ್ದೀರಿ. ನಾವು ದೇವರಿಗೋಸ್ಕರ ಫಲವನ್ನು ಫಲಿಸುವುದಕ್ಕಾಗಿ ಕ್ರಿಸ್ತನಿಗೆ ಸೇರಿದವರಾಗಿದ್ದೇವೆ. 5 ಹಿಂದಿನ ಕಾಲದಲ್ಲಿ, ನಮ್ಮ ಪಾಪಾಧೀನಸ್ವಭಾವವು ನಮ್ಮನ್ನು ಆಳುತ್ತಿತ್ತು. ಪಾಪಕೃತ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಧರ್ಮಶಾಸ್ತ್ರವು ನಮ್ಮಲ್ಲಿ ಉಂಟುಮಾಡಿತು. ಮತ್ತು ನಾವು ಮಾಡಲಿಚ್ಛಿಸಿದ್ದ ಆ ಪಾಪಕೃತ್ಯಗಳು ನಮ್ಮ ದೇಹಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡವು. ಇದರಿಂದಾಗಿ, ನಾವು ಮಾಡಿದ ಕಾರ್ಯಗಳೆಲ್ಲ ನಮಗೆ ಆತ್ಮಿಕ ಮರಣವನ್ನು ಮಾತ್ರ ಉಂಟು ಮಾಡುತ್ತಿದ್ದವು. 6 ಹಿಂದಿನ ಕಾಲದಲ್ಲಿ, ಧರ್ಮಶಾಸ್ತ್ರವು ನಮ್ಮನ್ನು ಸೆರೆಯಾಳುಗಳಂತೆ ಬಂಧಿಸಿತ್ತು. ಆದರೆ ನಮ್ಮ ಹಳೆಯ ಸ್ವಭಾವವು ಸತ್ತುಹೋದ ಕಾರಣ ನಾವು ಧರ್ಮಶಾಸ್ತ್ರದಿಂದ ಬಿಡುಗಡೆಯಾದೆವು. ಆದ್ದರಿಂದ ಈಗ ನಾವು ಲಿಖಿತ ನಿಯಮಗಳೊಡನೆ ಹಳೇ ರೀತಿಯಲ್ಲಿ ದೇವರ ಸೇವೆಮಾಡದೆ ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ದೇವರ ಸೇವೆ ಮಾಡುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International