Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 75

ಸ್ತುತಿಗೀತೆ. ರಚನೆಗಾರ: ಆಸಾಫ.

75 ದೇವರೇ, ನಿನ್ನನ್ನು ಕೊಂಡಾಡುವೆವು!
    ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
    ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.

ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
    ನಾನು ನೀತಿಯಿಂದಲೇ ತೀರ್ಪುಕೊಡುವೆ.
ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
    ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.

4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
    ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.

ಭೂಲೋಕದ ಯಾವ ಶಕ್ತಿಯೂ
    ಮನುಷ್ಯನನ್ನು ಉದ್ಧಾರ ಮಾಡಲಾರದು.
ನ್ಯಾಯಾಧಿಪತಿಯು ದೇವರೇ.
    ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
    ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
ಯೆಹೋವನ ಕೈಯಲ್ಲಿ ಪಾತ್ರೆಯಿದೆ.
    ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
    ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
    ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
    ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.

ದಾನಿಯೇಲ 12

12 “ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು, ದಾನಿಯೇಲನೇ, ಆಗ ದೇವದೂತನಾದ ಮಿಕಾಯೇಲನು ಏಳುವನು. ಮಿಕಾಯೇಲನು ಯೆಹೂದ್ಯರಾದ ನಿಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುವನು. ಮಹಾಸಂಕಟದ ಕಾಲ ಬರುವದು. ಭೂಮಿಯ ಮೇಲೆ ರಾಷ್ಟ್ರಗಳು ಹುಟ್ಟಿದಂದಿನಿಂದ ಸಂಭವಿಸದಂತಹ ಸಂಕಟಗಳು ಸಂಭವಿಸುವವು. ಆದರೆ ದಾನಿಯೇಲನೇ, ನಿಮ್ಮ ಜನಗಳಲ್ಲಿ ಯಾರ ಹೆಸರುಗಳು ‘ಜೀವಬಾಧ್ಯರ ಗ್ರಂಥದಲ್ಲಿ’ ಬರೆಯಲ್ಪಟ್ಟಿದೆಯೋ ಅವರೆಲ್ಲರನ್ನು ರಕ್ಷಿಸಲಾಗುವುದು. ಮರಣಹೊಂದಿದ, ಸಮಾಧಿಗಳಲ್ಲಿ ದೀರ್ಘನಿದ್ರೆ ಮಾಡುತ್ತಿದ್ದವರಲ್ಲಿ ಅನೇಕರು ಎಚ್ಚೆತ್ತುಕೊಳ್ಳುವರು. ಕೆಲವರು ಎಚ್ಚೆತ್ತು ನಿತ್ಯಜೀವವನ್ನು ಅನುಭವಿಸುವರು. ಕೆಲವರು ಎಚ್ಚೆತ್ತು ನಿತ್ಯನಿಂದನೆಗಳನ್ನೂ ತಿರಸ್ಕಾರಗಳನ್ನೂ ಅನುಭವಿಸುವರು. ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ನೀತಿವಂತರಾಗಿ ಜೀವಿಸಲು ಅವರು ಅನೇಕರಿಗೆ ಉಪದೇಶಿಸುವರು. ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.

“ದಾನಿಯೇಲನೇ, ನೀನು ಈ ಸಂದೇಶವನ್ನು ರಹಸ್ಯವಾಗಿಡು. ಇದನ್ನು ಬರೆದ ಪುಸ್ತಕಕ್ಕೆ ಮುದ್ರೆಹಾಕು. ಅಂತ್ಯಕಾಲದವರೆಗೆ ನೀನು ಇದನ್ನು ರಹಸ್ಯವಾಗಿ ಇಡಬೇಕು. ನಿಜವಾದ ಜ್ಞಾನಕ್ಕಾಗಿ ಬಹುಜನರು ಅತ್ತಿತ್ತ ಸಂಚರಿಸುವರು. ನಿಜವಾದ ಜ್ಞಾನ ಬೆಳೆಯುವದು.”

ಆಗ, ದಾನಿಯೇಲನೆಂಬ ನಾನು, ಮತ್ತಿಬ್ಬರನ್ನು ಕಂಡೆನು. ಅವರೊಳಗೆ ಒಬ್ಬನು ನದಿಯ ಈಚೆ ದಡದಲ್ಲಿಯೂ ಇನ್ನೊಬ್ಬನು ಆಚೆದಡದಲ್ಲಿಯೂ ನಿಂತಿದ್ದರು. ನಾರುಮಡಿಯನ್ನು ಧರಿಸಿದ್ದವನೊಬ್ಬನು ನದಿಯಲ್ಲಿ ನೀರಿನ ಮೇಲೆ ನಿಂತಿದ್ದನು. ಅವರಿಬ್ಬರಲ್ಲಿ ಒಬ್ಬನು, “ಆ ಅದ್ಭುತ ಘಟನೆಗಳು ಸಂಭವಿಸುವದಕ್ಕೆ ಇನ್ನು ಎಷ್ಟು ಕಾಲ ಬೇಕು?” ಎಂದು ಅವನನ್ನು ಕೇಳಿದನು.

ನಾರುಮಡಿಯನ್ನು ಧರಿಸಿ ನೀರಿನ ಮೇಲೆ ನಿಂತುಕೊಂಡಿದ್ದ ಮನುಷ್ಯನು ತನ್ನ ಎರಡೂ ಕೈಗಳನ್ನು ಆಕಾಶದ ಕಡೆಗೆ ಎತ್ತಿದನು. ಅವನು ಶಾಶ್ವತವಾದ ದೇವರ ಮೇಲೆ ಆಣೆಮಾಡಿ, “ಮೂರುವರೆ ವರ್ಷ ಕಳೆಯಬೇಕು. ದೇವರ ಭಕ್ತರ ಬಲವು ಸಂಪೂರ್ಣವಾಗಿ ಮುರಿದುಹೋಗುವದು. ಆಮೇಲೆ ಎಲ್ಲಾ ಸಂಗತಿಗಳು ಜರುಗುವವು” ಎಂದು ಹೇಳಿದನು.

ನಾನು ಉತ್ತರವನ್ನು ಕೇಳಿದೆ, ಆದರೆ ನನಗೆ ಅದು ಅರ್ಥವಾಗಲಿಲ್ಲ. ಆದ್ದರಿಂದ ನಾನು, “ಸ್ವಾಮೀ, ಈ ಎಲ್ಲಾ ಸಂಗತಿಗಳು ಜರುಗಿದ ಮೇಲೆ ಏನು ಸಂಭವಿಸುವದು?” ಎಂದು ಕೇಳಿದೆ.

ಅದಕ್ಕೆ ಆತನು, “ದಾನಿಯೇಲನೇ, ನಿನ್ನ ಜೀವನ ಸಾಗಲಿ. ಈ ಸಂದೇಶವು ರಹಸ್ಯವಾದದ್ದು. ಅಂತ್ಯಕಾಲ ಬರುವವರೆಗೆ ಇದು ರಹಸ್ಯವಾಗಿ ಉಳಿಯುವದು. 10 ಅನೇಕ ಜನರು ಶುದ್ಧೀಕರಿಸಲ್ಪಡುವರು; ಅವರು ತಮ್ಮನ್ನು ತಾವು ಶುಭ್ರಗೊಳಿಸಿಕೊಳ್ಳುವರು. ಆದರೆ ದುಷ್ಟರು ದುಷ್ಟರಾಗಿಯೇ ಉಳಿಯುವರು. ಆ ದುಷ್ಟರು ಈ ಸಂಗತಿಗಳನ್ನು ಅರಿತುಕೊಳ್ಳುವದಿಲ್ಲ. ಜ್ಞಾನಿಗಳು ಇವೆಲ್ಲವನ್ನು ಅರಿತುಕೊಳ್ಳುತ್ತಾರೆ.

11 “ನಿತ್ಯಹೋಮವು ನಿಲ್ಲಿಸಲ್ಪಟ್ಟು ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಒಂದು ಸಾವಿರದ ಇನ್ನೂರ ತೊಂಭತ್ತು ದಿನಗಳು ಕಳೆಯಬೇಕು. 12 ಕಾದುಕೊಂಡು ಒಂದು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯವರೆಗೆ ತಾಳಿರುವವನು ಧನ್ಯನು.

13 “ದಾನಿಯೇಲನೇ, ನೀನು ಹೋಗಿ ಕೊನೆಯವರೆಗೆ ನಿನ್ನ ಜೀವನವನ್ನು ಸಾಗಿಸು. ನೀನು ದೀರ್ಘನಿದ್ರೆಯನ್ನು ಪಡೆಯುವೆ. ಅಂತ್ಯಕಾಲದಲ್ಲಿ, ನೀನು ದೀರ್ಘನಿದ್ರೆಯಿಂದ ಎಚ್ಚೆತ್ತು ನಿನ್ನ ಸ್ವಾಸ್ತ್ಯವನ್ನು ಪಡೆಯುವೆ” ಎಂದು ಉತ್ತರಿಸಿದನು.

ಮತ್ತಾಯ 12:15-21

ಯೇಸು ದೇವರಿಂದ ಆರಿಸಲ್ಪಟ್ಟ ಸೇವಕ

15 ಫರಿಸಾಯರು ಏನು ಮಾಡುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಆ ಸ್ಥಳವನ್ನು ಬಿಟ್ಟುಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿದರು. ಆತನು ಎಲ್ಲಾ ರೋಗಿಗಳನ್ನು ಗುಣಪಡಿಸಿದನು. 16 ಆದರೆ ತಾನು ಯಾರೆಂಬುದನ್ನು ಬೇರೆ ಜನರಿಗೆ ಹೇಳಬಾರದೆಂದು ಆತನು ಜನರನ್ನು ಎಚ್ಚರಿಸಿದನು. 17 ಪ್ರವಾದಿಯಾದ ಯೆಶಾಯನು ಹೇಳಿದ್ದನ್ನು ನೆರವೇರಿಸುವುದಕ್ಕಾಗಿ ಯೇಸು ಇವುಗಳನ್ನು ಮಾಡಿದನು. ಯೆಶಾಯನು ಹೇಳಿದ್ದೇನೆಂದರೆ:

18 “ಇಗೋ, ನನ್ನ ಸೇವಕನು.
    ನಾನು ಆತನನ್ನು ಆರಿಸಿಕೊಂಡಿದ್ದೇನೆ.
ಆತನನ್ನು ಪ್ರೀತಿಸುತ್ತೇನೆ,
    ಆತನನ್ನು ಮೆಚ್ಚಿದ್ದೇನೆ.
ಆತನ ಮೇಲೆ ನನ್ನ ಆತ್ಮವನ್ನು ಇರಿಸುವೆನು.
    ಆತನು ಜನಾಂಗಗಳಿಗೆ ನ್ಯಾಯವಾದ ತೀರ್ಪು ಮಾಡುವನು.
19 ಆತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ.
    ಬೀದಿಗಳಲ್ಲಿ ಆತನ ಶಬ್ದ ಕೇಳಿಸುವುದಿಲ್ಲ.
20 ಬಾಗಿಹೋದ ದಂಟನ್ನು ಆತನು ಮುರಿಯುವುದಿಲ್ಲ;
    ಆರಿಹೋಗುತ್ತಿರುವ ದೀಪವನ್ನು ಆತನು ನಂದಿಸುವುದಿಲ್ಲ.
    ನ್ಯಾಯವಾದ ತೀರ್ಪು ಜಯಗಳಿಸುವಂತೆ ಆತನು ಮಾಡುವನು.
21 ಎಲ್ಲಾ ಜನರು ಆತನಲ್ಲಿ ಭರವಸೆ ಇಡುವರು.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International