Revised Common Lectionary (Semicontinuous)
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
ಯಾಕೋಬನು ಲಾಬಾನನಿಗೆ ಮೋಸ ಮಾಡಿದ್ದು
25 ಯೋಸೇಫನು ಹುಟ್ಟಿದ ಮೇಲೆ, ಯಾಕೋಬನು ಲಾಬಾನನಿಗೆ, “ಈಗ ನಾನು ನನ್ನ ಸ್ವಂತ ಮನೆಗೆ ಹೋಗಲು ಅನುಮತಿ ಕೊಡು. 26 ನನ್ನ ಹೆಂಡತಿಯರನ್ನೂ ಮಕ್ಕಳನ್ನೂ ನನಗೆ ಕೊಡು. ನಾನು ಹದಿನಾಲ್ಕು ವರ್ಷ ನಿನ್ನ ಸೇವೆಮಾಡಿ ಅವರನ್ನು ಸಂಪಾದಿಸಿಕೊಂಡಿದ್ದೇನೆ. ನಾನು ನಿನಗೆ ಒಳ್ಳೆಯ ಸೇವೆ ಮಾಡಿರುವುದು ನಿನಗೆ ತಿಳಿದಿದೆ” ಎಂದು ಹೇಳಿದನು.
27 ಲಾಬಾನನು ಅವನಿಗೆ, “ನಾನು ಹೇಳುವುದನ್ನು ಕೇಳು; ಯೆಹೋವನು ನಿನ್ನ ನಿಮಿತ್ತವಾಗಿ ನನ್ನನ್ನು ಆಶೀರ್ವದಿಸಿದ್ದಾನೆಂದು ನನಗೆ ತಿಳಿದಿದೆ. 28 ಹೇಳು, ನಾನು ನಿನಗೆ ಎಷ್ಟು ಸಂಬಳ ಕೊಡಬೇಕು? ನೀನು ಹೇಳಿದಷ್ಟು ಕೊಡುತ್ತೇನೆ” ಎಂದು ಹೇಳಿದನು.
29 ಯಾಕೋಬನು, “ನಾನು ನಿನಗೋಸ್ಕರ ಕಷ್ಟಪಟ್ಟು ಕೆಲಸ ಮಾಡಿರುವುದು ನಿನಗೆ ಗೊತ್ತಿದೆ. ನಾನು ನಿನ್ನ ಕುರಿಮಂದೆಗಳನ್ನು ನೋಡಿಕೊಂಡಿದ್ದರಿಂದ ಅವು ಹೆಚ್ಚಾಗಿವೆ. 30 ನಾನು ಬಂದಾಗ ನಿನಗೆ ಸ್ವಲ್ಪವಿತ್ತು, ಈಗ ನಿನಗೆ ಬೇಕಾದಷ್ಟಿದೆ. ನಾನು ನಿನಗೋಸ್ಕರ ಮಾಡಿದ್ದನ್ನೆಲ್ಲ ಯೆಹೋವನು ಆಶೀರ್ವದಿಸಿದನು. ನಾನು ನನಗೋಸ್ಕರ ಕೆಲಸ ಮಾಡುವ ಸಮಯವಿದು. ನನ್ನ ಸ್ವಂತ ಮನೆಗೆ ಒದಗಿಸುವ ಸಮಯವಿದು” ಎಂದು ಹೇಳಿದನು.
31 ಲಾಬಾನನು “ಹಾಗಾದರೆ ನಾನು ನಿನಗೇನು ಕೊಡಬೇಕು” ಎಂದು ಕೇಳಿದನು.
ಯಾಕೋಬನು, “ನೀನು ನನಗೆ ಏನೂ ಕೊಡಬೇಕಾಗಿಲ್ಲ. (ನಾನು ಕೆಲಸ ಮಾಡಿದ್ದಕ್ಕೆ ನೀನು ಸಂಬಳ ಕೊಟ್ಟರೆ ಸಾಕು.) ಇದೊಂದು ಕಾರ್ಯವನ್ನು ಮಾಡು; ನಾನು ಹೋಗಿ ನಿನ್ನ ಕುರಿಗಳನ್ನು ನೋಡಿಕೊಳ್ಳುವೆ. 32 ನಾನು ನಿನ್ನ ಕುರಿಮಂದೆಯೊಳಗೆ ಹೋಗಿ, ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಕುರಿಯನ್ನೂ ಪ್ರತಿಯೊಂದು ಕಪ್ಪು ಕುರಿಯನ್ನೂ ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಮೇಕೆಯನ್ನೂ ತೆಗೆದುಕೊಳ್ಳುವೆನು. ಅದೇ ನನಗೆ ಸಂಬಳ. 33 ಮುಂದಿನ ದಿನಗಳಲ್ಲಿ ನೀನು ಬಂದು ಪರೀಕ್ಷಿಸಿದಾಗ ನಾನು ಯಥಾರ್ಥನೊ ಇಲ್ಲವೊ ಎಂಬುದನ್ನು ನೀನು ಸುಲಭವಾಗಿ ಕಂಡುಕೊಳ್ಳಬಹುದು. ನಾನೇನಾದರೂ ಚುಕ್ಕೆಯಿಲ್ಲದ ಮೇಕೆಗಳನ್ನಾಗಲಿ ಅಥವಾ ಕಪ್ಪಿಲ್ಲದ ಕುರಿಗಳನ್ನಾಗಲಿ ಹೊಂದಿದ್ದರೆ, ನಾನು ಅದನ್ನು ಕದ್ದುಕೊಂಡದ್ದೆಂದು ನೀನು ಪರಿಗಣಿಸಬಹುದು” ಎಂದು ಹೇಳಿದನು.
34 ಲಾಬಾನನು, “ನಾನು ಅದಕ್ಕೆ ಒಪ್ಪಿಕೊಂಡಿದ್ದೇನೆ. ನೀನು ಹೇಳಿದಂತೆ ನಾವು ಮಾಡೋಣ” ಎಂದು ಹೇಳಿದನು. 35 ಆ ದಿನ ಲಾಬಾನನು ಚುಕ್ಕೆಗಳಿದ್ದ ಎಲ್ಲಾ ಹೋತಗಳನ್ನೂ ಮೇಕೆಗಳನ್ನೂ ಕಪ್ಪಾದ ಕುರಿಗಳನ್ನೂ ಪ್ರತ್ಯೇಕಿಸಿದನು. ಲಾಬಾನನು ತನ್ನ ಗಂಡುಮಕ್ಕಳಿಗೆ ಆ ಕುರಿಗಳನ್ನು ನೋಡಿಕೊಳ್ಳಲು ಹೇಳಿದನು. 36 ಆದ್ದರಿಂದ ಅವನ ಗಂಡುಮಕ್ಕಳು ಚುಕ್ಕೆಗಳಿದ್ದ ಅವುಗಳೊಂದಿಗೆ ಮತ್ತೊಂದು ಸ್ಥಳಕ್ಕೆ ಹೋದರು. ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಯಾಕೋಬನು ಅಲ್ಲಿದ್ದುಕೊಂಡು ಉಳಿದವುಗಳನ್ನೆಲ್ಲ ನೋಡಿಕೊಳ್ಳತೊಡಗಿದನು.
ನಿಜವಾದ ಜ್ಞಾನ
13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.
Kannada Holy Bible: Easy-to-Read Version. All rights reserved. © 1997 Bible League International