Revised Common Lectionary (Semicontinuous)
ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.
142 ನಾನು ಯೆಹೋವನಿಗೆ ಮೊರೆಯಿಡುವೆನು;
ಯೆಹೋವನನ್ನು ಕೂಗಿಕೊಳ್ಳುವೆನು.
2 ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
ಆತನಿಗೆ ಅರಿಕೆಮಾಡಿಕೊಳ್ಳುವೆನು.
3 ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.
4 ನಾನು ಸುತ್ತಮುತ್ತ ನೋಡಿದರೂ
ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
5 ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಆಶ್ರಯಸ್ಥಾನವೂ ನೀನೇ,
ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
7 ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
ನೀತಿವಂತರು ನನ್ನೊಂದಿಗೆ ಕೊಂಡಾಡುವರು.
15 ಎಲ್ಲಾ ಜನಾಂಗಗಳವರಿಗೆ
ಯೆಹೋವನ ದಿನವು ಬೇಗನೇ ಬರುವದು.
ನೀನು ಬೇರೆಯವರಿಗೆ ಮಾಡಿದ ದುಷ್ಕೃತ್ಯಗಳನ್ನು ಅವರು ನಿನ್ನ ಮೇಲೆಯೇ ನಡೆಸುವರು.
ಅದೇ ದುಷ್ಕೃತ್ಯಗಳು ನಿನ್ನ ತಲೆ ಮೇಲೆ ಬೀಳುವವು.
16 ಯಾಕೆಂದರೆ ನನ್ನ ಪರಿಶುದ್ಧ ಪರ್ವತದಲ್ಲಿ ರಕ್ತವನ್ನು ಸುರಿಸಿದೆ.
ನೀನು ಹುಟ್ಟಲೇ ಇಲ್ಲ ಎಂಬುದಾಗಿ ಅನಿಸುವದು.
ಆದ್ದರಿಂದ ಇತರ ಜನಾಂಗಗಳು ನಿನ್ನ ರಕ್ತವನ್ನು ಸುರಿಸುತ್ತವೆ.
ನೀನು ಕೊನೆಗೊಳ್ಳುವೆ.
17 ಆದರೆ ಚೀಯೋನ್ ಬೆಟ್ಟದಲ್ಲಿ ಅಳಿದುಳಿದವರು ಇರುವರು.
ಅವರು ನನ್ನ ವಿಶೇಷ ಜನರಾಗಿರುವರು.
ಯಾಕೋಬನ ಜನರು ತಮಗೆ ಸೇರಿರುವದನ್ನು
ಹಿಂದಕ್ಕೆ ಪಡೆದುಕೊಳ್ಳುವರು.
18 ಯಾಕೋಬನ ಸಂತತಿಯವರು ಬೆಂಕಿಯಂತಿರುವರು.
ಯೋಸೇಫನ ಜನಾಂಗವು ಬೆಂಕಿಯ ನಾಲಗೆಗಳಂತೆ ಇರುವರು.
ಆದರೆ ಏಸಾವಿನ ಜನಾಂಗ ಸುಟ್ಟ ಬೂದಿಯಂತಿರುವರು.
ಯೆಹೂದದ ಜನರು ಎದೋಮನನ್ನು ಸುಟ್ಟುಹಾಕುವರು.
ಯೆಹೂದದ ಜನರು ಎದೋಮನನ್ನು ನಾಶಮಾಡುವರು.
ಆಗ ಏಸಾವಿನ ಜನರಲ್ಲಿ ಯಾರೂ ಉಳಿಯುವದಿಲ್ಲ.”
ಯಾಕೆಂದರೆ ಇದು ದೇವರಾದ ಯೆಹೋವನ ಮಾತು.
19 ಆಗ ನೆಗೆವಿನ ಜನರು ಏಸಾವಿನ ಪರ್ವತಗಳಲ್ಲಿ ವಾಸಿಸುವರು.
ಬೆಟ್ಟದ ಕೆಳಗೆ ವಾಸಿಸುವವರು ಫಿಲಿಷ್ಟಿಯರ ದೇಶವನ್ನು ಆಕ್ರಮಿಸುವರು.
ಎಫ್ರಾಯೀಮ್ ಮತ್ತು ಸಮಾರ್ಯದ ಜನರು ಜೀವಿಸುವರು.
ಗಿಲ್ಯಾದ್ ಪ್ರಾಂತ್ಯವು ಬೆನ್ಯಾಮೀನರಿಗೆ ಸೇರುವದು.
20 ಸೆರೆ ಒಯ್ಯಲ್ಪಟ್ಟ ಇಸ್ರೇಲರು ಚಾರೆಪ್ತದವರೆಗೆ ಕಾನಾನ್ ದೇಶವನ್ನು ವಶಪಡಿಸಿಕೊಳ್ಳುವರು.
ಸೆಫಾರದಿನಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ನೆಗೆವಿನ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
21 ವಿಜಯಿಗಳು ಚೀಯೋನ್ ಬೆಟ್ಟವನ್ನೇರಿ
ಏಸಾವಿನ ಪರ್ವತಗಳಲ್ಲಿ ವಾಸಿಸುವ ಜನರನ್ನಾಳುವರು.
ಆಗ ಸಾಮ್ರಾಜ್ಯವು ಯೆಹೋವನಿಗೆ ಸೇರುವುದು.
ಯೇಸು ಸಾಮ್ಯಗಳನ್ನು ಏಕೆ ಬಳಸಿದನು?
(ಮಾರ್ಕ 4:10-12; ಲೂಕ 8:9-10)
10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.
11 ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು. 12 ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು. 13 ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ. 14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ:
‘ನೀವು ಆಲಿಸುತ್ತೀರಿ, ಕೇಳುತ್ತೀರಿ,
ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
15 ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
ಕಿವಿ ಮಂದವಾಗಿವೆ,
ಕಣ್ಣು ಮಬ್ಬಾಗಿವೆ.
ಅವರು
ತಮ್ಮ ಕಣ್ಣುಗಳಿಂದ ನೋಡದಂತೆಯೂ
ತಮ್ಮ ಕಿವಿಗಳಿಂದ ಕೇಳದಂತೆಯೂ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’(A)
16 ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ. 17 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International