Revised Common Lectionary (Semicontinuous)
ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.
142 ನಾನು ಯೆಹೋವನಿಗೆ ಮೊರೆಯಿಡುವೆನು;
ಯೆಹೋವನನ್ನು ಕೂಗಿಕೊಳ್ಳುವೆನು.
2 ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
ಆತನಿಗೆ ಅರಿಕೆಮಾಡಿಕೊಳ್ಳುವೆನು.
3 ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.
4 ನಾನು ಸುತ್ತಮುತ್ತ ನೋಡಿದರೂ
ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
5 ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಆಶ್ರಯಸ್ಥಾನವೂ ನೀನೇ,
ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
7 ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
ನೀತಿವಂತರು ನನ್ನೊಂದಿಗೆ ಕೊಂಡಾಡುವರು.
ಎದೋಮಿನ ಬಗ್ಗೆ ಸಂದೇಶ
7 ಈ ಸಂದೇಶ ಎದೋಮನ್ನು ಕುರಿತದ್ದು. ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
“ತೇಮಾನ್ ಪಟ್ಟಣನಿವಾಸಿಗಳಲ್ಲಿ ಈಗ ಬುದ್ಧಿ ಉಳಿದಿಲ್ಲವೇ?
ಎದೋಮಿನ ವಿವೇಕಿಗಳು ಒಳ್ಳೆಯ ಸಲಹೆಗಳನ್ನು ಕೊಡಲು ಸಮರ್ಥರಾಗಿಲ್ಲವೇ?
ಅವರು ತಮ್ಮ ಜ್ಞಾನವನ್ನು ಕಳೆದುಕೊಂಡರೇ?
8 ದೆದಾನಿನ ನಿವಾಸಿಗಳೇ, ಓಡಿಹೋಗಿರಿ, ಅಡಗಿಕೊಳ್ಳಿರಿ;
ಏಕೆಂದರೆ ಏಸಾವನು[a] ಮಾಡಿದ ತಪ್ಪಿಗಾಗಿ ನಾನು ಅವನನ್ನು ದಂಡಿಸುವೆನು.
9 “ಕೆಲಸಗಾರರು ನಿಮ್ಮ ದ್ರಾಕ್ಷಿತೋಟಕ್ಕೆ ಬಂದು ದ್ರಾಕ್ಷಿಯನ್ನು ಕೀಳುವರು;
ಆದರೆ ಬಳ್ಳಿಯಲ್ಲಿ ಕೆಲವು ದ್ರಾಕ್ಷಿಗಳನ್ನು ಬಿಡುವರು;
ರಾತ್ರಿಯಲ್ಲಿ ಕಳ್ಳರು ಬಂದರೆ
ಅವರು ತಮಗೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
10 ಆದರೆ ಏಸಾವನಿಂದ ನಾನು ಎಲ್ಲವನ್ನು ಕಿತ್ತುಕೊಳ್ಳುವೆನು.
ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನ್ನು ನಾನು ಪತ್ತೆ ಹಚ್ಚುವೆನು.
ಅವನು ನನ್ನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.
ಅವನ ಮಕ್ಕಳು, ಬಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.
11 ನಿನ್ನ ಅನಾಥಮಕ್ಕಳನ್ನು ನಾನು ಸಂರಕ್ಷಿಸುವೆನು.
ನಿನ್ನ ವಿಧವೆಯರು ನನ್ನಲ್ಲಿ ಭರವಸೆ ಇಡಲಿ.”
ನೀವು ಜೀವಿಸಬೇಕಾದ ರೀತಿ
17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.
25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(A) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.
29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. 2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
Kannada Holy Bible: Easy-to-Read Version. All rights reserved. © 1997 Bible League International