Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-11

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಯೆಹೋವನೇ ನಮ್ಮ ದೇವರು.
    ಆತನು ಇಡೀ ಪ್ರಪಂಚವನ್ನು ಆಳುವನು.[a]
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
    ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
    ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
    ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
    ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.

ಕೀರ್ತನೆಗಳು 105:45

45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ಆದಿಕಾಂಡ 29:31-30:24

ಯಾಕೋಬನ ಕುಟುಂಬದ ಅಭಿವೃದ್ಧಿ

31 ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸುವುದನ್ನು ಯೆಹೋವನು ನೋಡಿದನು. ಆದ್ದರಿಂದ ಯೆಹೋವನು ಲೇಯಳಿಗೆ ಮಕ್ಕಳಾಗುವಂತೆ ಮಾಡಿದನು. ಆದರೆ ರಾಹೇಲಳಿಗೆ ಮಕ್ಕಳಿರಲಿಲ್ಲ.

32 ಲೇಯಳು ಒಬ್ಬ ಮಗನನ್ನು ಹೆತ್ತಳು. ಆಕೆಯು ತನ್ನೊಳಗೆ, “ಯೆಹೋವನು ನನ್ನ ದುಃಖವನ್ನು ನೋಡಿದ್ದಾನೆ. ನನ್ನ ಗಂಡನು ನನ್ನನ್ನು ಪ್ರೀತಿಸುವುದಿಲ್ಲ. ಈಗಲಾದರೊ ಅವನು ನನ್ನನ್ನು ಪ್ರೀತಿಸಬಹುದು” ಎಂದು ಹೇಳಿ ಆ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.

33 ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದು ನನಗೆ ಈ ಮಗುವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಸಿಮೆಯೋನ್ ಎಂದು ಹೆಸರಿಟ್ಟಳು.

34 ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ಖಂಡಿತವಾಗಿಯೂ ನನ್ನ ಗಂಡ ನನ್ನ ಜೊತೆಗೂಡಿರುವನು. ನಾನು ಅವನಿಗೆ ಮೂರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.

35 ನಂತರ ಲೇಯಾ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಲೇಯಳು ತನ್ನೊಳಗೆ, “ಈಗ ನಾನು ಯೆಹೋವನನ್ನು ಸ್ತುತಿಸುವೆನು” ಎಂದು ಹೇಳಿ ಆ ಮಗುವಿಗೆ ಯೆಹೂದ ಎಂದು ಹೆಸರಿಟ್ಟಳು. ನಂತರ ಲೇಯಳಿಗೆ ಮಕ್ಕಳಾಗುವುದು ನಿಂತುಹೋಯಿತು.

30 ರಾಹೇಲಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿದಳು. ರಾಹೇಲಳಿಗೆ ತನ್ನ ಅಕ್ಕ ಲೇಯಳ ಮೇಲೆ ಹೊಟ್ಟೆಕಿಚ್ಚಾಯಿತು. ಆದ್ದರಿಂದ ರಾಹೇಲಳು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲವಾದರೆ ನಾನು ಸಾಯುವೆ” ಎಂದು ಹೇಳಿದಳು.

ಯಾಕೋಬನಿಗೆ ರಾಹೇಲಳ ಮೇಲೆ ಕೋಪವಾಯಿತು. ಅವನು ಆಕೆಗೆ, “ನಾನು ದೇವರಲ್ಲ. ನಿನಗೆ ಮಕ್ಕಳಾಗದಂತೆ ಮಾಡಿರುವವನು ದೇವರು” ಎಂದು ಹೇಳಿದನು.

ನಂತರ ರಾಹೇಲಳು, “ನೀನು ನನ್ನ ಸೇವಕಿಯಾದ ಬಿಲ್ಹಾಳನ್ನು ತೆಗೆದುಕೊಳ್ಳಬಹುದು. ಆಕೆಯೊಡನೆ ಮಲಗಿಕೊ; ಆಕೆ ನನಗೋಸ್ಕರ ಒಂದು ಮಗುವನ್ನು ಹೆರುವಳು. ಆಗ ನಾನು ಆಕೆಯ ಮೂಲಕ ತಾಯಿಯಾಗುವೆನು” ಎಂದು ಹೇಳಿದಳು.

ಅಂತೆಯೇ ರಾಹೇಲಳು ಬಿಲ್ಹಾಳನ್ನು ತನ್ನ ಗಂಡನಾದ ಯಾಕೋಬನಿಗೆ ಕೊಟ್ಟಳು. ಯಾಕೋಬನು ಬಿಲ್ಹಾಳನ್ನು ಕೂಡಿದನು. ಬಿಲ್ಹಾ ಬಸುರಾಗಿ ಯಾಕೋಬನಿಗೆ ಒಬ್ಬ ಮಗನನ್ನು ಹೆತ್ತಳು.

ರಾಹೇಲಳು, “ದೇವರು ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಒಬ್ಬ ಮಗನನ್ನು ಕೊಡಲು ನಿರ್ಧರಿಸಿದನು” ಎಂದು ಹೇಳಿ ಆ ಮಗುವಿಗೆ ದಾನ್ ಎಂದು ಹೆಸರಿಟ್ಟಳು.

ಬಿಲ್ಹಾ ಮತ್ತೆ ಬಸುರಾಗಿ ಯಾಕೋಬನಿಗೆ ಎರಡನೆ ಮಗನನ್ನು ಹೆತ್ತಳು. ರಾಹೇಲಳು, “ನನ್ನ ಅಕ್ಕನೊಂದಿಗೆ ಕಷ್ಟಪಟ್ಟು ಹೋರಾಡಿ ಗೆದ್ದಿದ್ದೇನೆ” ಎಂದು ಹೇಳಿ ಆ ಮಗುವಿಗೆ ನಫ್ತಾಲಿ ಎಂದು ಹೆಸರಿಟ್ಟಳು.

ಲೇಯಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿ ತನ್ನ ಸೇವಕಿಯಾದ ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಳು. 10 ಜಿಲ್ಪಳಿಗೂ ಒಬ್ಬ ಮಗನು ಹುಟ್ಟಿದನು. 11 ಲೇಯಳು, “ನಾನು ಅದೃಷ್ಟವಂತೆ” ಎಂದು ಹೇಳಿ, ಆ ಮಗುವಿಗೆ ಗಾದ್ ಎಂದು ಹೆಸರಿಟ್ಟಳು. 12 ಜಿಲ್ಪಳು ಮತ್ತೊಬ್ಬ ಮಗನನ್ನು ಹೆತ್ತಳು. ಲೇಯಳು, “ನಾನು ಧನ್ಯಳಾದೆ. 13 ಈಗ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು” ಎಂದು ಹೇಳಿ ಆ ಮಗುವಿಗೆ ಆಶೇರ್ ಎಂದು ಹೆಸರಿಟ್ಟಳು.

14 ಗೋಧಿಯ ಸುಗ್ಗಿಕಾಲದಲ್ಲಿ, ರೂಬೇನನು ಹೊಲಕ್ಕೆ ಹೋಗಿದ್ದಾಗ ಕಾಮಜನಕಗಿಡದ ಹೂವುಗಳನ್ನು ಕಂಡನು. ರೂಬೇನನು ಈ ಹೂವುಗಳನ್ನು ತನ್ನ ತಾಯಿಯಾದ ಲೇಯಳಿಗೆ ತಂದುಕೊಟ್ಟನು. ರಾಹೇಲಳು ಲೇಯಳಿಗೆ, “ದಯವಿಟ್ಟು, ನಿನ್ನ ಮಗನು ತಂದಿರುವ ಹೂವುಗಳಲ್ಲಿ ನನಗೆ ಸ್ವಲ್ಪಕೊಡು” ಎಂದು ಕೇಳಿದಳು.

15 ಲೇಯಳು, “ನೀನು ಈಗಾಗಲೇ ನನ್ನ ಗಂಡನನ್ನು ತೆಗೆದುಕೊಂಡಿರುವೆ. ಈಗ ನನ್ನ ಮಗನು ತಂದಿರುವ ಹೂವುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವೆ” ಎಂದು ಹೇಳಿದಳು.

ರಾಹೇಲಳು, “ನಿನ್ನ ಮಗನು ತಂದಿರುವ ಹೂವುಗಳನ್ನು ನನಗೆ ಕೊಟ್ಟರೆ, ನೀನು ಈ ರಾತ್ರಿ ಯಾಕೋಬನ ಸಂಗಡ ಮಲಗಿಕೊಳ್ಳಬಹುದು” ಎಂದು ಹೇಳಿದಳು.

16 ಆ ರಾತ್ರಿ ಯಾಕೋಬನು ಹೊಲದಿಂದ ಬಂದನು. ಲೇಯಳು ಅವನನ್ನು ಕಂಡು ಭೇಟಿಯಾಗಲು ಹೋದಳು. ಅವಳು ಅವನಿಗೆ, “ಈ ರಾತ್ರಿ ನೀನು ನನ್ನ ಸಂಗಡ ಮಲಗಿಕೊಳ್ಳುವೆ. ನನ್ನ ಮಗನು ತಂದ ಹೂವುಗಳನ್ನು ನಾನು ನಿನಗೋಸ್ಕರವಾಗಿ ಕೊಟ್ಟಿರುವೆ” ಎಂದು ಹೇಳಿದಳು. ಆದ್ದರಿಂದ ಯಾಕೋಬನು ಆ ರಾತ್ರಿ ಲೇಯಳೊಡನೆ ಮಲಗಿಕೊಂಡನು.

17 ಲೇಯಳು ಮತ್ತೆ ಬಸುರಾಗುವಂತೆ ದೇವರು ಅನುಗ್ರಹಿಸಿದನು. ಆಕೆ ತನ್ನ ಐದನೆಯ ಮಗನನ್ನು ಹೆತ್ತಳು. 18 ಲೇಯಳು, “ದೇವರು ನನಗೆ ಒಂದು ಬಹುಮಾನವನ್ನು ಕೊಟ್ಟನು; ಯಾಕೆಂದರೆ ನಾನು ನನ್ನ ಸೇವಕಿಯನ್ನು ನನ್ನ ಗಂಡನಿಗೆ ಕೊಟ್ಟೆನು” ಎಂದು ಹೇಳಿ, ಆ ಮಗುವಿಗೆ ಇಸ್ಸಾಕಾರ್ ಎಂದು ಹೆಸರಿಟ್ಟಳು.

19 ಲೇಯಳು ಮತ್ತೆ ಬಸುರಾಗಿ ಆರನೆಯ ಮಗನನ್ನು ಹೆತ್ತಳು. 20 ಲೇಯಳು, “ದೇವರು ನನಗೆ ಒಂದು ಒಳ್ಳೆಯ ಬಹುಮಾನವನ್ನು ಕೊಟ್ಟಿದ್ದಾನೆ. ಈಗ ಖಂಡಿತವಾಗಿ ಯಾಕೋಬನು ನನ್ನನ್ನು ಸ್ವೀಕರಿಸುವನು, ಯಾಕೆಂದರೆ ನಾನು ಅವನಿಗೆ ಆರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ, ಜೆಬುಲೂನ್ ಎಂದು ಹೆಸರಿಟ್ಟಳು.

21 ತರುವಾಯ ಲೇಯಳು ಒಬ್ಬ ಮಗಳನ್ನು ಹೆತ್ತಳು. ಆಕೆ ತನ್ನ ಮಗಳಿಗೆ ದೀನಾ ಎಂದು ಹೆಸರಿಟ್ಟಳು.

22 ನಂತರ, ದೇವರು ರಾಹೇಲಳ ಪ್ರಾರ್ಥನೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಅನುಗ್ರಹಿಸಿದನು. 23-24 ರಾಹೇಲಳು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ರಾಹೇಲಳು, “ದೇವರು ನನಗಿದ್ದ ಅವಮಾನವನ್ನು ತೆಗೆದುಹಾಕಿದ್ದಾನೆ; ನನಗೆ ಒಬ್ಬ ಮಗನನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಯೋಸೇಫ ಎಂದು ಹೆಸರಿಟ್ಟಳು.

ಮತ್ತಾಯ 12:38-42

ಸೂಚಕಕಾರ್ಯಕ್ಕಾಗಿ ಯೆಹೂದ್ಯರ ಬೇಡಿಕೆ

(ಮಾರ್ಕ 8:11-12; ಲೂಕ 11:29-32)

38 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.

39 ಯೇಸು, “ದುಷ್ಟರು ಮತ್ತು ಪಾಪಿಗಳು ಸೂಚಕಕಾರ್ಯವನ್ನು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಒಂದು ಸೂಚಕಕಾರ್ಯವನ್ನೂ ಗುರುತಿಗಾಗಿ ತೋರಿಸಲಾಗುವುದಿಲ್ಲ. 40 ಪ್ರವಾದಿಯಾದ ಯೋನನು ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟೆಯಲ್ಲಿ ಹೇಗಿದ್ದನೋ ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರೆ ಯಾವ ಸೂಚಕಕಾರ್ಯವನ್ನು ಅವರಿಗೆ ತೋರಿಸಲಾಗುವುದಿಲ್ಲ. 41 ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.

42 “ನ್ಯಾಯತೀರ್ಪಿನ ದಿನದಂದು ದಕ್ಷಿಣ ದೇಶದ ರಾಣಿಯು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರೆಂದು (ಅಪರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಣಿಯು ಸೊಲೊಮೋನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದೂರದಿಂದ ಬಂದಳು. ನಾನಾದರೋ ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International