Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 139:13-18

13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
    ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
    ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.

15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
    ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
    ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
    ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
    ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.

ಆದಿಕಾಂಡ 33:1-17

ಯಾಕೋಬನು ತೋರಿದ ಧೈರ್ಯ

33 ಯಾಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಜನರೊಂದಿಗೆ ಬರುವುದನ್ನು ಕಂಡನು. ಯಾಕೋಬನು ತನ್ನ ಕುಟುಂಬವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದನು. ಲೇಯಾ ಮತ್ತು ಅವಳ ಮಕ್ಕಳು ಒಂದು ಗುಂಪಿನಲ್ಲಿದ್ದರು. ರಾಹೇಲಳು ಮತ್ತು ಯೋಸೇಫನು ಇನ್ನೊಂದು ಗುಂಪಿನಲ್ಲಿದ್ದರು. ಇಬ್ಬರು ದಾಸಿಯರು ಮತ್ತು ಅವರ ಮಕ್ಕಳು ಎರಡು ಗುಂಪುಗಳಲ್ಲಿದ್ದರು. ಯಾಕೋಬನು ದಾಸಿಯರನ್ನು ಮತ್ತು ಅವರ ಮಕ್ಕಳನ್ನು ಮುಂಭಾಗದಲ್ಲಿಯೂ ಲೇಯಳನ್ನು ಮತ್ತು ಅವಳ ಮಕ್ಕಳನ್ನು ಅವರ ಹಿಂಭಾಗದಲ್ಲಿಯೂ, ರಾಹೇಲಳನ್ನು ಮತ್ತು ಯೋಸೇಫನನ್ನು ಕೊನೆಯ ಸ್ಥಳದಲ್ಲೂ ಇರಿಸಿದನು.

ಯಾಕೋಬನು ತಾನೇ ಮುಂದಾಗಿ ಏಸಾವನ ಬಳಿಗೆ ನಡೆದುಹೋಗುತ್ತಾ ಏಳು ಸಲ ನೆಲದ ತನಕ ಬಗ್ಗಿ ನಮಸ್ಕರಿಸಿದನು.

ಏಸಾವನು ಯಾಕೋಬನನ್ನು ಕಂಡಾಗ, ಓಡಿಬಂದು ತನ್ನ ಕೈಗಳಿಂದ ತಬ್ಬಿಕೊಂಡು ಅವನ ಕೊರಳಿನ ಮೇಲೆ ಮುದ್ದಿಟ್ಟನು; ಅವರಿಬ್ಬರೂ ಕಣ್ಣೀರು ಸುರಿಸಿದರು. ಏಸಾವನು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕಣ್ಣೆತ್ತಿ ನೋಡಿ, “ನಿನ್ನೊಡನೆ ಇರುವ ಈ ಜನರು ಯಾರು?” ಎಂದು ಕೇಳಿದನು.

ಯಾಕೋಬನು, “ದೇವರು ನನಗೆ ಕೊಟ್ಟ ಮಕ್ಕಳೇ ಇವರು. ದೇವರು ನನಗೆ ಒಳ್ಳೆಯವನಾಗಿದ್ದನು” ಎಂದು ಹೇಳಿದನು.

ಆಮೇಲೆ ಇಬ್ಬರು ದಾಸಿಯರು ಮತ್ತು ಅವರೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ಆಮೇಲೆ ಲೇಯಾ ಮತ್ತು ಅವಳೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ತರುವಾಯ, ರಾಹೇಲಳು ಮತ್ತು ಯೋಸೇಫನು ಏಸಾವನ ಬಳಿಗೆ ಹೋಗಿ ತಲೆಬಾಗಿ ನಮಸ್ಕರಿಸಿದರು.

ಏಸಾವನು, “ನಾನು ಬರುತ್ತಿರುವಾಗ ಕಂಡ ಆ ಜನರೆಲ್ಲಾ ಯಾರು? ಆ ಪಶುಗಳೆಲ್ಲಾ ಯಾತಕ್ಕೆ?” ಎಂದು ಕೇಳಿದನು.

ಯಾಕೋಬನು, “ನೀನು ನನ್ನನ್ನು ಸ್ವೀಕರಿಸಿಕೊಳ್ಳಲಿ ಎಂದು ಅವುಗಳನ್ನು ಉಡುಗೊರೆಗಳನ್ನಾಗಿ ಕಳುಹಿಸಿಕೊಟ್ಟೆನು” ಎಂದು ಹೇಳಿದನು.

ಆದರೆ ಏಸಾವನು, “ತಮ್ಮನೇ, ನೀನು ನನಗೆ ಉಡುಗೊರೆಗಳನ್ನು ಕೊಡಬೇಕಾಗಿಲ್ಲ, ನನಗೆ ಬೇಕಾದಷ್ಟಿದೆ” ಎಂದು ಹೇಳಿದನು.

10 ಯಾಕೋಬನು, “ಇಲ್ಲ! ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ನೀನು ನನ್ನನ್ನು ನಿಜವಾಗಿಯೂ ಸ್ವೀಕರಿಸಿಕೊಳ್ಳುವುದಾದರೆ, ನಾನು ಕೊಡುವ ಉಡುಗೊರೆಗಳನ್ನು ದಯವಿಟ್ಟು ಸ್ವೀಕರಿಸಬೇಕು. ನಿನ್ನ ಮುಖವನ್ನು ಮತ್ತೆ ನೋಡಿ ನನಗೆ ತುಂಬ ಸಂತೋಷವಾಗಿದೆ. ದೇವರ ಮುಖವನ್ನೇ ನೋಡಿದಂತಾಯಿತು. ನೀನು ನನ್ನನ್ನು ಸ್ವೀಕರಿಸಿಕೊಂಡದ್ದರಿಂದ ನನಗೆ ತುಂಬ ಸಂತೋಷವಾಗಿದೆ. 11 ಆದ್ದರಿಂದ ನಾನು ಕೊಡುವ ಈ ಉಡುಗೊರೆಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಿರುವೆ. ದೇವರು ನನಗೆ ತುಂಬ ಒಳ್ಳೆಯವನಾಗಿದ್ದನು. ನನಗೆ ಬೇಕಾದದ್ದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿದೆ” ಎಂದು ಹೇಳಿದನು. ಹೀಗೆ ಯಾಕೋಬನು ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಏಸಾವನನ್ನು ಬೇಡಿಕೊಂಡನು. ಆದ್ದರಿಂದ ಏಸಾವನು ಉಡುಗೊರೆಗಳನ್ನು ಸ್ವೀಕರಿಸಿದನು.

12 ಆಮೇಲೆ ಏಸಾವನು, “ಈಗ ನೀನು ನಿನ್ನ ಪ್ರಯಾಣವನ್ನು ಮುಂದುವರಿಸಬಹುದು. ನಾನು ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.

13 ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ. 14 ಆದ್ದರಿಂದ ನೀನು ಮುಂದಾಗಿ ಹೋಗು. ನಾನು ನಿನ್ನನ್ನು ನಿಧಾನವಾಗಿ ಹಿಂಬಾಲಿಸುವೆನು. ದನಕುರಿಗಳು ಮತ್ತು ಇತರ ಪಶುಗಳು ಸುರಕ್ಷಿತವಾಗಿರುವಂತೆಯೂ ನನ್ನ ಮಕ್ಕಳು ತುಂಬ ಆಯಾಸಗೊಳ್ಳದಂತೆಯೂ ನಾನು ಸಾಕಷ್ಟು ನಿಧಾನವಾಗಿ ಬಂದು ನಿನ್ನನ್ನು ಸೇಯೀರ್‌ನಲ್ಲಿ ಭೇಟಿಯಾಗುವೆನು” ಎಂದು ಹೇಳಿದನು.

15 ಅದಕ್ಕೆ ಏಸಾವನು, “ಹಾಗಾದರೆ ನನ್ನ ಜನರಲ್ಲಿ ಕೆಲವರನ್ನು ನಿನ್ನ ಸಹಾಯಕ್ಕಾಗಿ ಬಿಟ್ಟುಹೋಗುವೆನು” ಎಂದು ಹೇಳಿದನು.

ಆದರೆ ಯಾಕೋಬನು, “ಅದು ನಿನ್ನ ದಯೆ. ಆದರೆ ಅಂಥ ಅಗತ್ಯವೇನೂ ಇಲ್ಲ” ಎಂದು ಹೇಳಿದನು. 16 ಆದ್ದರಿಂದ ಆ ದಿನ ಏಸಾವನು ಸೇಯೀರಿಗೆ ಮರಳಿ ಪ್ರಯಾಣ ಮಾಡಿದನು. 17 ಆದರೆ ಯಾಕೋಬನು ಸುಕ್ಕೋತಿಗೆ ಹೋದನು. ಆ ಸ್ಥಳದಲ್ಲಿ ಅವನು ತನಗಾಗಿ ಒಂದು ಮನೆಯನ್ನೂ ತನ್ನ ದನಕುರಿಗಳಿಗಾಗಿ ಚಿಕ್ಕ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಆದ್ದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.

ಗಲಾತ್ಯದವರಿಗೆ 4:21-5:1

ಹಾಗರಳ ಮತ್ತು ಸಾರಳ ಉದಾಹರಣೆ

21 ನಿಮ್ಮಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಅಧೀನರಾಗಿರಲು ಇಷ್ಟಪಡುತ್ತೀರಿ. ಧರ್ಮಶಾಸ್ತ್ರವು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ನನಗೆ ತಿಳಿಸಿ. 22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು. 23 ಮಾನವ ಸಹಜವಾದ ರೀತಿಯಲ್ಲಿ ಅಬ್ರಹಾಮನ ಮಗನು ಆ ದಾಸಿಯಲ್ಲಿ ಹುಟ್ಟಿದನು. ಸ್ವತಂತ್ರಳಾಗಿದ್ದ ಸ್ತ್ರೀಯಲ್ಲಿ ಹುಟ್ಟಿದ ಮಗನಾದರೋ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಫಲವಾಗಿದ್ದನು.

24 ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು. 25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ. 26 ಆದರೆ ಪರಲೋಕದಲ್ಲಿರುವ ಜೆರುಸಲೇಮ್ ಸ್ವತಂತ್ರಳಾದ ಸ್ತ್ರೀಯಂತಿದೆ. ಇದೇ ನಮ್ಮ ತಾಯಿ. 27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

“ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ,
    ಸಂತೋಷಪಡು.
ಪ್ರಸವವೇದನೆಯಿಲ್ಲದವಳೇ,
    ಸ್ವರವೆತ್ತಿ ಕೂಗು.
ಗಂಡನುಳ್ಳವಳಿಗಿಂತ ಗಂಡ
    ಬಿಟ್ಟವಳಿಗೆ ಮಕ್ಕಳು ಹೆಚ್ಚು.”(A)

28-29 ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ. 30 ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.”(B) 31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.

ಸ್ವತಂತ್ರರಾಗಿರಿ

ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International