Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಪರಮ ಗೀತ 2:8-13

ಪ್ರಿಯತಮೆ

ಅಗೋ, ನನ್ನ ಪ್ರಿಯನ ಸ್ವರ!
    ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ
    ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
ನನ್ನ ಪ್ರಿಯನು ಸಾರಂಗದಂತೆಯೂ
    ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ;
    ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ;
    ಕಿಟಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ,
    ಎದ್ದೇಳು, ನಾವು ದೂರ ಹೋಗೋಣ!
11 ಇಗೋ, ಚಳಿಗಾಲ ಕಳೆಯಿತು;
    ಮಳೆಗಾಲ ಮುಗಿದುಹೋಯಿತು.
12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ;
    ಪಕ್ಷಿಗಳು ಹಾಡುವ ಸಮಯವು ಬಂದಿದೆ.
    ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
13 ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ;
    ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು,
    ನಾವು ದೂರ ಹೋಗೋಣ!”

ಆದಿಕಾಂಡ 27:30-46

ಏಸಾವನ “ಆಶೀರ್ವಾದ”

30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ಬಳಿಕ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಯಿಂದ ಹೊರಟುಹೋಗುವಷ್ಟರಲ್ಲಿ ಏಸಾವನು ಬೇಟೆಯಿಂದ ಬಂದನು. 31 ಏಸಾವನು ಸಹ ತನ್ನ ತಂದೆಗೆ ಇಷ್ಟವಾದ ರೀತಿಯಲ್ಲಿ ವಿಶೇಷವಾದ ಆಹಾರವನ್ನು ಸಿದ್ಧಪಡಿಸಿ ತನ್ನ ತಂದೆಯ ಬಳಿಗೆ ತೆಗೆದುಕೊಂಡು ಬಂದನು. ಅವನು ತನ್ನ ತಂದೆಗೆ, “ಅಪ್ಪಾ ಎದ್ದೇಳು, ನಿನಗೋಸ್ಕರ ನಿನ್ನ ಮಗನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತಿನ್ನು, ನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.

32 ಇಸಾಕನು ಅವನಿಗೆ, “ನೀನು ಯಾರು?” ಎಂದು ಕೇಳಿದನು.

ಅವನು, “ನಾನು ನಿನ್ನ ಹಿರಿಯಮಗನಾದ ಏಸಾವ” ಎಂದು ಹೇಳಿದನು.

33 ಆಗ ಇಸಾಕನು ತುಂಬ ವ್ಯಸನಗೊಂಡು ಗಡಗಡನೆ ನಡುಗುತ್ತಾ ಅವನಿಗೆ, “ನೀನು ಬರುವುದಕ್ಕಿಂತ ಮೊದಲೇ ಅಡಿಗೆಯನ್ನು ಸಿದ್ಧಪಡಿಸಿ ನನಗೆ ತಂದುಕೊಟ್ಟವನು ಯಾರು? ನಾನು ಅದನ್ನೆಲ್ಲ ತಿಂದು ಅವನನ್ನು ಆಶೀರ್ವದಿಸಿದೆನು. ಈಗ ನನ್ನ ಆಶೀರ್ವಾದವನ್ನು ಹಿಂತೆಗೆದುಕೊಳ್ಳಲಾಗದು” ಎಂದು ಹೇಳಿದನು.

34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ತುಂಬ ಕೋಪಗೊಂಡನು; ವ್ಯಥೆಪಟ್ಟನು; ಗೋಳಾಡಿದನು. ಅವನು ತನ್ನ ತಂದೆಗೆ, “ಹಾಗಾದರೆ, ನನ್ನನ್ನೂ ಆಶೀರ್ವದಿಸಪ್ಪಾ” ಎಂದು ಹೇಳಿದನು.

35 ಇಸಾಕನು, “ನಿನ್ನ ತಮ್ಮನು ನನ್ನನ್ನು ಮೋಸಗೊಳಿಸಿದನು; ಅವನು ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡನು” ಎಂದು ಹೇಳಿದನು.

36 ಏಸಾವನು, “ಅವನ ಹೆಸರು ಯಾಕೋಬ (ಮೋಸಗಾರ). ಅದೇ ಅವನಿಗೆ ಸರಿಯಾದ ಹೆಸರು. ಅವನು ಎರಡು ಸಲ ನನಗೆ ಮೋಸಮಾಡಿದನು. ನನ್ನ ಚೊಚ್ಚಲತನದ ಹಕ್ಕನ್ನು ತೆಗೆದುಕೊಂಡನು. ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡನು” ಎಂದು ಹೇಳಿದನು. ನಂತರ ಏಸಾವನು, “ನನಗೋಸ್ಕರ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.

37 ಇಸಾಕನು, “ಇಲ್ಲ, ತುಂಬ ತಡವಾಯಿತು. ನಿನ್ನ ಮೇಲೆ ಆಡಳಿತ ಮಾಡುವ ಅಧಿಕಾರವನ್ನು ನಾನು ಯಾಕೋಬನಿಗೆ ಕೊಟ್ಟಿದ್ದೇನೆ. ಅವನ ಸಹೋದರರೆಲ್ಲ ಅವನಿಗೆ ಸೇವಕರಾಗಿರುವರು ಎಂದು ನಾನು ಹೇಳಿದ್ದೇನೆ. ಅವನಿಗೆ ಬೇಕಾದಷ್ಟು ದವಸಧಾನ್ಯಗಳೂ ದ್ರಾಕ್ಷಾರಸವೂ ದೊರೆಯುವಂತೆ ಆಶೀರ್ವಾದ ಮಾಡಿದ್ದೇನೆ. ನಿನಗೆ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ ಮಗನೇ” ಎಂದು ಹೇಳಿದನು.

38 ಆದರೆ ಏಸಾವನು ತನ್ನ ತಂದೆಯನ್ನು ಮತ್ತೆ ಬೇಡತೊಡಗಿದನು. “ಅಪ್ಪಾ ನನಗಾಗಿ ಒಂದಾದರೂ ಆಶೀರ್ವಾದವಿಲ್ಲವೇ? ಅಪ್ಪಾ, ನನ್ನನ್ನು ಸಹ ಆಶೀರ್ವದಿಸು” ಎಂದು ಏಸಾವನು ಅಳಲಾರಂಭಿಸಿದನು.

39 ಆಗ ಇಸಾಕನು ಅವನಿಗೆ ಹೀಗೆ ಹೇಳಿದನು:

“ನೀನು ಒಳ್ಳೆಯ ಪ್ರದೇಶದಲ್ಲಿ ಜೀವಿಸುವುದಿಲ್ಲ.
    ನಿನಗೆ ಬೇಕಾದಷ್ಟು ಇಬ್ಬನಿ ಇರುವುದಿಲ್ಲ.
40 ನೀನು ಕತ್ತಿಯಿಂದಲೇ ಜೀವಿಸುವೆ.
    ನೀನು ನಿನ್ನ ತಮ್ಮನ ಸೇವಕನಾಗಿರುವೆ.
ಆದರೆ ನೀನು ಬಿಡುಗಡೆಯಾಗಲು ಹೋರಾಡಿ
    ಅವನ ಹಿಡಿತದಿಂದ ಪಾರಾಗುವೆ.”

41 ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.

42 ಏಸಾವನು ಯಾಕೋಬನನ್ನು ಕೊಲ್ಲಬೇಕೆಂದಿರುವುದು ರೆಬೆಕ್ಕಳಿಗೆ ತಿಳಿಯಿತು. ಆಕೆ ಯಾಕೋಬನನ್ನು ಕರೆಸಿ ಅವನಿಗೆ, “ಕೇಳು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ. 43 ಆದ್ದರಿಂದ ಮಗನೇ, ನಾನು ಹೇಳಿದಂತೆ ಮಾಡು. ನನ್ನ ಅಣ್ಣನಾದ ಲಾಬಾನನು ಹಾರಾನಿನಲ್ಲಿ ವಾಸವಾಗಿದ್ದಾನೆ. ಅವನ ಬಳಿಗೆ ಹೋಗಿ ಅಡಗಿಕೊ. 44 ನಿನ್ನ ಅಣ್ಣನ ಕೋಪ ತಣ್ಣಗಾಗುವವರೆಗೆ ನೀನು ಸ್ವಲ್ಪ ಕಾಲ ಅವನೊಂದಿಗಿರು. 45 ಸ್ವಲ್ಪ ಸಮಯದ ನಂತರ, ನೀನು ಮಾಡಿದ್ದನ್ನು ನಿನ್ನ ಅಣ್ಣನು ಮರೆತುಬಿಡುವನು. ಆಗ ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಲು ನಾನು ಒಬ್ಬ ಸೇವಕನನ್ನು ಅಲ್ಲಿಗೆ ಕಳುಹಿಸಿಕೊಡುವೆನು. ಒಂದೇ ದಿನದಲ್ಲಿ, ನನ್ನ ಇಬ್ಬರು ಗಂಡುಮಕ್ಕಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.

46 ನಂತರ ರೆಬೆಕ್ಕಳು ಇಸಾಕನಿಗೆ, “ನಿನ್ನ ಮಗನಾದ ಏಸಾವನು ಹಿತ್ತಿಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಾನೆ. ಆ ಸ್ತ್ರೀಯರಿಂದ ನನಗೆ ಸಾಕಾಗಿ ಹೋಗಿದೆ; ಯಾಕೆಂದರೆ ಅವರು ನಮ್ಮ ಜನರಲ್ಲ. ಯಾಕೋಬನು ಸಹ ಇಂಥ ಸ್ತ್ರೀಯರಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ನಾನು ಸಾಯುವುದೇ ಮೇಲು” ಎಂದು ಹೇಳಿದಳು.

ರೋಮ್ನಗರದವರಿಗೆ 1:18-25

ಎಲ್ಲಾ ಜನರು ತಪ್ಪು ಮಾಡಿದ್ದಾರೆ

18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ. 19 ದೇವರು ತನ್ನ ಕೋಪವನ್ನು ತೋರಿಸುತ್ತಾನೆ, ಏಕೆಂದರೆ ದೇವರ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ಅವರಿಗೆ ಸ್ಪಷ್ಟಪಡಿಸಲಾಗಿದೆ. ಹೌದು, ತನ್ನ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ದೇವರು ಜನರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.

20 ಜನರು ದೇವರ ನಿತ್ಯಶಕ್ತಿಯನ್ನಾಗಲಿ ಆತನ ದೈವತ್ವಗಳನ್ನಾಗಲಿ ಕಾಣಲಾರರು. ಆದರೆ ಲೋಕದ ಆರಂಭದಿಂದಲೂ ಆ ಸಂಗತಿಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ದೇವರು ಮಾಡಿದ ಸೃಷ್ಟಿಗಳಲ್ಲಿ ಆ ಸಂಗತಿಗಳು ಸ್ಪಷ್ಟವಾಗಿವೆ. ಆದ್ದರಿಂದ ಜನರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ನೆವ ಹೇಳಲು ಸಾಧ್ಯವಿಲ್ಲ.

21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. 22 ಜನರು ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಂಡು ಮೂರ್ಖರಾದರು. 23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.

24 ಪಾಪಗಳಿಂದ ತುಂಬಿಹೋಗಿದ್ದ ಅವರು ದುಷ್ಕೃತ್ಯಗಳನ್ನೇ ಮಾಡಬಯಸಿದರು. ಆದ್ದರಿಂದ ಪಾಪಮಾರ್ಗದಲ್ಲೇ ಹೋಗಲೆಂದು ದೇವರು ಅವರನ್ನು ಬಿಟ್ಟುಬಿಟ್ಟನು. ಅದರಿಂದಾಗಿ ಅವರು ತಮ್ಮತಮ್ಮಲ್ಲೇ ತಮ್ಮ ದೇಹಗಳಿಂದ ಲೈಂಗಿಕ ಪಾಪಗಳನ್ನು ಮಾಡಿದರು. 25 ಅವರು ದೇವರ ಸತ್ಯವನ್ನು ತೊರೆದು ಸುಳ್ಳನ್ನು ಹಿಡಿದುಕೊಂಡರು; ಸೃಷ್ಟಿಸಲ್ಪಟ್ಟ ವಸ್ತುಗಳನ್ನು ಆರಾಧಿಸಿದರು; ಅವುಗಳ ಸೇವೆ ಮಾಡಿದರು. ಆದರೆ ಆ ವಸ್ತುಗಳನ್ನು ಸೃಷ್ಟಿಸಿದ ದೇವರನ್ನು ಅವರು ಆರಾಧಿಸಲಿಲ್ಲ; ಆತನ ಸೇವೆ ಮಾಡಲಿಲ್ಲ. ದೇವರಿಗೇ ನಿರಂತರ ಸ್ತುತಿಸ್ತೋತ್ರ ಸಲ್ಲಬೇಕು. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International