Revised Common Lectionary (Semicontinuous)
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
7 ಯೆಹೋವನೇ ನಮ್ಮ ದೇವರು.
ಆತನು ಇಡೀ ಪ್ರಪಂಚವನ್ನು ಆಳುವನು.[a]
8 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
9 ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
9 ಯಾಕೋಬನು ಕುರುಬರೊಡನೆ ಮಾತಾಡುತ್ತಿರುವಾಗ ರಾಹೇಲಳು ತನ್ನ ತಂದೆಯ ಕುರಿಗಳೊಡನೆ ಬಂದಳು. (ಕುರಿಗಳನ್ನು ನೋಡಿಕೊಳ್ಳುವುದು ರಾಹೇಲಳ ಕೆಲಸವಾಗಿತ್ತು.) 10 ರಾಹೇಲಳು ಲಾಬಾನನ ಮಗಳು. ಲಾಬಾನನು ಯಾಕೋಬನ ತಾಯಿಯಾದ ರೆಬೆಕ್ಕಳ ಅಣ್ಣ. ಯಾಕೋಬನು ರಾಹೇಲಳನ್ನು ನೋಡಿದಾಗ ಬಾವಿಯ ಮೇಲಿದ್ದ ಕಲ್ಲನ್ನು ತೆಗೆದುಹಾಕಿ ತನ್ನ ತಾಯಿಯ ಅಣ್ಣನಾದ ಲಾಬಾನನ ಕುರಿಗಳಿಗೆ ನೀರು ಕೊಟ್ಟನು. 11 ಬಳಿಕ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಅತ್ತನು. 12 ಯಾಕೋಬನು ರಾಹೇಲಳಿಗೆ, ತಾನು ಅವಳ ತಂದೆಯ ಕುಟುಂಬದವನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ರಾಹೇಲಳು ಮನೆಗೆ ಓಡಿಹೋಗಿ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದಳು.
13 ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.
14 ನಂತರ ಲಾಬಾನನು, “ಇದು ಆಶ್ಚರ್ಯವಾಗಿದೆ; ನೀನು ನನ್ನ ಸ್ವಂತ ಕುಟುಂಬದವನು” ಎಂದು ಹೇಳಿದನು. ಆದ್ದರಿಂದ ಯಾಕೋಬನು ಲಾಬಾನನೊಡನೆ ಒಂದು ತಿಂಗಳವರೆಗೆ ಇದ್ದನು.
44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[a] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.
48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:
49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(A)”
51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”
Kannada Holy Bible: Easy-to-Read Version. All rights reserved. © 1997 Bible League International