Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:97-104

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

ಯೆರೆಮೀಯ 31:15-26

15 ಯೆಹೋವನು ಹೀಗೆನ್ನುತ್ತಾನೆ:
“ರಾಮದಲ್ಲಿ ಅತಿ ದುಃಖದಿಂದ ಗೋಳಾಡುವ
    ಒಂದು ಧ್ವನಿಯು ಕೇಳಿಬರುತ್ತದೆ.
ರಾಹೇಲಳು[a] ತನ್ನ ಮಕ್ಕಳಿಗಾಗಿ ಗೋಳಾಡುವಳು.
    ಅವಳ ಮಕ್ಕಳು ಸತ್ತುಹೋದುದರಿಂದ
    ರಾಹೇಲಳು ಸಮಾಧಾನ ಹೊಂದುವದಕ್ಕೆ ಒಪ್ಪಲಾರಳು.”

16 ಆದರೆ ಯೆಹೋವನು, “ಅಳುವದನ್ನು ನಿಲ್ಲಿಸು.
    ಕಣ್ಣಿನಲ್ಲಿ ನೀರು ತುಂಬಿಕೊಳ್ಳಬೇಡ.
ನಿನ್ನ ಕೆಲಸಕ್ಕಾಗಿ ನಿನಗೆ ಪ್ರತಿಫಲ ಸಿಕ್ಕುವುದು” ಎಂದು ಹೇಳುವನು.
ಇದು ಯೆಹೋವನ ನುಡಿ.
“ಇಸ್ರೇಲರು ತಮ್ಮ ಶತ್ರುಗಳ ಪ್ರದೇಶದಿಂದ ಹಿಂತಿರುಗಿ ಬರುವರು.
17 ಆದ್ದರಿಂದ ಇಸ್ರೇಲೇ, ನಿನ್ನ ಮಕ್ಕಳು
    ತಮ್ಮ ದೇಶಕ್ಕೆ ಹಿಂತಿರುಗಿ ಬರುವರೆಂಬ ನಿರೀಕ್ಷೆ ನಿನಗಿರಲಿ.”
ಇದು ಯೆಹೋವನ ನುಡಿ.
18 “ಎಫ್ರಾಯೀಮ್ ಅಳುವುದನ್ನು ನಾನು ಕೇಳಿದ್ದೇನೆ.
ಎಫ್ರಾಯೀಮು ಹೀಗೆ ಹೇಳುವದನ್ನು ನಾನು ಕೇಳಿದ್ದೇನೆ.
    ‘ಯೆಹೋವನೇ, ನೀನು ನಿಜವಾಗಿ ನನ್ನನ್ನು ದಂಡಿಸಿದೆ.
    ನಾನು ಪಾಠವನ್ನು ಕಲಿತೆನು.
    ನಾನು ತರಬೇತಿ ಹೊಂದದ ಒಂದು ಹೋರಿಯುಂತಿದ್ದೆನು.
ನನ್ನನ್ನು ದಂಡಿಸುವದನ್ನು ದಯವಿಟ್ಟು ನಿಲ್ಲಿಸು.
    ನಾನು ನಿನ್ನಲ್ಲಿಗೆ ಹಿಂದಿರುಗಿ ಬರುತ್ತೇನೆ.
    ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.
19 ಯೆಹೋವನೇ, ನಾನು ನಿನಗೆ ದೂರವಾಗಿ ಅಲೆದಾಡಿದೆನು.
    ಆದರೆ ನಾನು ಮಾಡಿದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಂಡೆನು.
    ಆದ್ದರಿಂದ ನಾನು ನನ್ನ ಮನಸ್ಸನ್ನೂ ಜೀವನವನ್ನೂ ಪರಿವರ್ತಿಸಿಕೊಂಡೆ.
ತಾರುಣ್ಯಾವಸ್ಥೆಯಲ್ಲಿ ನಾನು ಮಾಡಿದ ಮೂರ್ಖತನಕ್ಕಾಗಿ ಲಜ್ಜೆಗೊಂಡೆನು; ನಾಚಿಕೆಪಟ್ಟೆನು.’”
20 ಯೆಹೋವನು ಹೀಗೆನ್ನುತ್ತಾನೆ:
“ಎಫ್ರಾಯೀಮ್ ನನ್ನ ಪ್ರೀತಿಯ ಮಗನೆಂಬುದು ನೀನು ಬಲ್ಲೆ.
    ನಾನು ಆ ಮಗುವನ್ನು ಪ್ರೀತಿಸುತ್ತೇನೆ.
ಹೌದು, ನಾನು ಹಲವು ಸಲ ಎಫ್ರಾಯೀಮನ ವಿರುದ್ಧವಾಗಿ ಮಾತನಾಡುತ್ತೇನೆ.
    ಆದಾಗ್ಯೂ ನಾನು ಅವನನ್ನು ಜ್ಞಾಪಿಸಿಕೊಳ್ಳುತ್ತೇನೆ.
ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ.
    ನಾನು ನಿಜವಾಗಿಯೂ ಅವನನ್ನು ಸಂತೈಸಬಯಸುತ್ತೇನೆ.”
ಇದು ಯೆಹೋವನ ನುಡಿ.

21 “ಇಸ್ರೇಲರೇ, ದಾರಿತೋರುವ
    ಕಂಬಗಳನ್ನೂ ಕೈಮರಗಳನ್ನೂ ನೆಡಿರಿ.
ನೀವು ಪ್ರಯಾಣ ಮಾಡುತ್ತಿರುವ ರಸ್ತೆಯನ್ನು ಗಮನಿಸಿರಿ.
    ನಿಮ್ಮ ಊರುಗಳಿಗೆ ಹಿಂತಿರುಗಿ ಬನ್ನಿ.
ನನ್ನ ವಧುವಾದ ಇಸ್ರೇಲೇ, ಮನೆಗೆ ಬಾ.
22 ನೀನು ಅಪನಂಬಿಗಸ್ತಳಾದ ಮಗಳಾಗಿದ್ದೆ.
    ಆದರೆ ನೀನು ಬದಲಾವಣೆ ಹೊಂದಿದೆ.
    ಈಗ ನೀನು ಮನೆಗೆ ಹಿಂದಿರುಗಿ ಬರಲು ಎಷ್ಟು ಹೊತ್ತು ಕಾದುಕೊಂಡಿರುವೆ.

“ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಮಾಡಿದ್ದಾನೆ.
    ಹೆಂಗಸು ಗಂಡಸನ್ನು ಕಾಪಾಡುವಳು.”

23 ಇಸ್ರೇಲಿನ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆನ್ನುತ್ತಾನೆ: “ನಾನು ಯೆಹೂದದ ಜನರಿಗಾಗಿ ಮತ್ತೆ ಒಳ್ಳೆಯದನ್ನು ಮಾಡುವೆನು. ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದವರನ್ನು ನಾನು ಮತ್ತೆ ಕರೆದುತರುವೆನು. ಆಗ ಅವರು ಯೆಹೂದನಾಡಿನಲ್ಲಿಯೂ ಅದರ ನಗರಗಳಲ್ಲಿಯೂ ಹೀಗೆನ್ನುವರು: ‘ನ್ಯಾಯವಾದ ನಿವಾಸವೇ, ಪವಿತ್ರ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ.’

24 “ಯೆಹೂದದ ಎಲ್ಲಾ ಊರುಗಳಲ್ಲಿ ಜನರು ಪರಸ್ಪರ ಶಾಂತಿಯಿಂದ ವಾಸಿಸುವರು. ರೈತರೂ ದನಕುರಿಗಳನ್ನು ಮೇಯಿಸುವ ಜನರೂ ಶಾಂತಿಯಿಂದ ಯೆಹೂದದಲ್ಲಿ ವಾಸಿಸುವರು. 25 ದುಬರ್ಲಗೊಂಡ ಮತ್ತು ದಣಿದ ಜನರಿಗೆ ನಾನು ಶಕ್ತಿಯನ್ನೂ ವಿಶ್ರಾಂತಿಯನ್ನೂ ಕೊಡುವೆನು.”

26 ಆಗ ನಾನು ಎಚ್ಚೆತ್ತು ಸುತ್ತಮುತ್ತಲು ನೋಡಿದೆ. ಅದೊಂದು ಬಹಳ ಹಿತಕರವಾದ ನಿದ್ರೆಯಾಗಿತ್ತು.

ಮಾರ್ಕ 10:46-52

ಕುರುಡನಿಗೆ ದೃಷ್ಟಿದಾನ

(ಮತ್ತಾಯ 20:29-34; ಲೂಕ 18:35-43)

46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು. 47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.

48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.

49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು.

ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.

51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು.

ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.

52 ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International