Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:97-104

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

ಯೆರೆಮೀಯ 26:16-24

16 ಆಗ ಸರದಾರರು ಮತ್ತು ಸಮಸ್ತ ಜನರು ಒಬ್ಬರಿಗೊಬ್ಬರು ಮಾತನಾಡಿ ಯಾಜಕರಿಗೂ ಪ್ರವಾದಿಗಳಿಗೂ, “ಯೆರೆಮೀಯನನ್ನು ಕೊಲ್ಲಕೂಡದು. ಯೆರೆಮೀಯನು ನಮಗೆ ಹೇಳಿದ ಸಂಗತಿಗಳು ನಮ್ಮ ದೇವರಾದ ಯೆಹೋವನಿಂದ ಬಂದವುಗಳಾಗಿವೆ” ಎಂದು ಹೇಳಿದರು.

17 ಆಗ ಹಿರಿಯ ನಾಯಕರಲ್ಲಿ ಕೆಲವರು ಎದ್ದುನಿಂತು ಎಲ್ಲಾ ಜನರನ್ನುದ್ದೇಶಿಸಿ 18 ಹೀಗೆ ಹೇಳಿದರು, “ಪ್ರವಾದಿಯಾದ ಮೀಕಾಯನು ಮೋರೆಷೆತ್ ನಗರದವನಾಗಿದ್ದನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಕಾಲದಲ್ಲಿ ಮೀಕಾಯನು ಪ್ರವಾದಿಯಾಗಿದ್ದನು. ಯೆಹೂದದ ಸಮಸ್ತ ಜನರಿಗೆ ಮೀಕಾಯನು ಹೀಗೆ ಹೇಳಿದನು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:

‘ಚೀಯೋನ್ ನಗರವು
    ನೇಗಿಲುಹೊಡೆದ ಹೊಲವಾಗುವುದು.
ಜೆರುಸಲೇಮ್ ನಗರವು ಕಲ್ಲಿನ ದಿಬ್ಬವಾಗುವುದು.
    ಪವಿತ್ರ ಆಲಯವಿದ್ದ ಪರ್ವತವು ಮರಗಿಡಗಳಿಂದ ಮುಚ್ಚಿಹೋಗುವುದು.’(A)

19 “ಹಿಜ್ಕೀಯನು ಯೆಹೂದದ ರಾಜನಾಗಿದ್ದನು. ಹಿಜ್ಕೀಯನು ಮೀಕಾಯನ ಕೊಲೆ ಮಾಡಲಿಲ್ಲ. ಯೆಹೂದದ ಯಾರೂ ಮೀಕಾಯನನ್ನು ಕೊಲೆಮಾಡಲಿಲ್ಲ. ಹಿಜ್ಕೀಯನು ಯೆಹೋವನನ್ನು ಗೌರವಿಸುತ್ತಿದ್ದನೆಂಬುದು ನಿಮಗೆ ಗೊತ್ತು. ಅವನು ಯೆಹೋವನನ್ನು ಸಂತೋಷಪಡಿಸಲು ಬಯಸಿದನು. ಯೆಹೂದಕ್ಕೆ ಕೇಡನ್ನು ತರುವೆನೆಂದು ಯೆಹೋವನು ಹೇಳಿದ್ದನು. ಆದರೆ ಹಿಜ್ಕೀಯನು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ ಕೇಡನ್ನು ಬರಮಾಡಲಿಲ್ಲ. ನಾವು ಯೆರೆಮೀಯನನ್ನು ಕೊಂದರೆ ಅನೇಕ ಕಷ್ಟಗಳನ್ನು ತಂದುಕೊಳ್ಳುವೆವು. ಆ ಕಷ್ಟಗಳಿಗೆ ನಮ್ಮ ತಪ್ಪೇ ಕಾರಣವಾಗುವುದು.”

20 ಮೊದಲು ಯೆಹೋವನ ಸಂದೇಶವನ್ನು ಪ್ರವಾದಿಸುವ ಇನ್ನೊಬ್ಬ ಮನುಷ್ಯನಿದ್ದನು. ಅವನ ಹೆಸರು ಊರೀಯ. ಅವನು ಶಮಾಯನ ಮಗ. ಊರೀಯನು ಕಿರ್ಯತ್‌ಯಾರೀಮ್ ಎಂಬ ಊರಿನವನು. ಈ ನಗರದ ಬಗ್ಗೆ ಮತ್ತು ಪ್ರದೇಶದ ಬಗ್ಗೆ ಯೆರೆಮೀಯನು ಪ್ರವಾದಿಸಿದ್ದನ್ನೇ ಊರೀಯನು ಪ್ರವಾದಿಸಿದ್ದನು. 21 ರಾಜನಾದ ಯೆಹೋಯಾಕೀಮನೂ ಅವನ ಸೇನೆಯ ಅಧಿಕಾರಿಗಳೂ ಯೆಹೂದದ ನಾಯಕರೂ ಊರೀಯನ ಪ್ರವಾದನೆಯನ್ನು ಕೇಳಿದರು. ಅವರಿಗೆ ಕೋಪಬಂದಿತು. ರಾಜನಾದ ಯೆಹೋಯಾಕೀಮನು ಊರೀಯನನ್ನು ಕೊಲ್ಲಬಯಸಿದನು. ಆದರೆ ಯೆಹೋಯಾಕೀಮನು ತನ್ನನ್ನು ಕೊಲ್ಲಬಯಸುತ್ತಾನೆಂದು ಊರೀಯನು ಕೇಳಿದನು. ಊರೀಯನು ಭಯಪಟ್ಟು ತಪ್ಪಿಸಿಕೊಂಡು ಈಜಿಪ್ಟ್ ದೇಶಕ್ಕೆ ಹೋದನು. 22 ಆದರೆ ರಾಜನಾದ ಯೆಹೋಯಾಕೀಮನು ಎಲ್ನಾತಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನು ಈಜಿಪ್ಟಿಗೆ ಕಳುಹಿಸಿದನು. ಎಲ್ನಾತಾನನು ಅಕ್ಬೋರನ ಮಗ. 23 ಅವರು ಊರೀಯನನ್ನು ಈಜಿಪ್ಟಿನಿಂದ ತಂದರು. ಅವರು ಊರೀಯನನ್ನು ರಾಜನಾದ ಯೆಹೋಯಾಕೀಮನ ಹತ್ತಿರ ತೆಗೆದುಕೊಂಡು ಹೋದರು. ಯೆಹೋಯಾಕೀಮನು ಕತ್ತಿಯಿಂದ ಊರೀಯನ ಕೊಲೆಮಾಡಬೇಕೆಂದು ಆಜ್ಞಾಪಿಸಿದನು. ಊರೀಯನ ದೇಹವನ್ನು ಬಡವರ ಸ್ಮಶಾನದಲ್ಲಿ ಎಸೆಯಲಾಯಿತು.

24 ಶಾಫಾನನ ಮಗನಾದ ಅಹೀಕಾಮನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಅಹೀಕಾಮನು ಯೆರೆಮೀಯನಿಗೆ ಬೆಂಬಲ ಕೊಟ್ಟನು; ಯಾಜಕರು ಮತ್ತು ಪ್ರವಾದಿಗಳು ಅವನನ್ನು ಕೊಲ್ಲದಂತೆ ಕಾಪಾಡಿದರು.

2 ತಿಮೊಥೆಯನಿಗೆ 2:14-26

ಯೋಗ್ಯನಾದ ಕೆಲಸಗಾರನು

14 ಜನರಿಗೆ ಈ ಸಂಗತಿಗಳನ್ನು ತಿಳಿಸುತ್ತಲೇ ಇರು. ಪದಗಳ ಬಗ್ಗೆ ವಾಗ್ವಾದ ಮಾಡಬಾರದೆಂದು ಅವರಿಗೆ ದೇವರ ಸನ್ನಿಧಿಯಲ್ಲಿ ಎಚ್ಚರಿಕೆ ನೀಡು. ವಾಗ್ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ. ವಾಗ್ವಾದವನ್ನು ಕೇಳುವ ಜನರು ಅದರಿಂದ ನಾಶವಾಗುತ್ತಾರೆ. 15 ದೇವರ ದೃಷ್ಟಿಯಲ್ಲಿ ಯೋಗ್ಯ ವ್ಯಕ್ತಿಯಾಗಲು ನಿನ್ನಿಂದಾದಷ್ಟು ಪ್ರಯಾಸಪಡು ಮತ್ತು ನಿನ್ನನ್ನೇ ಒಪ್ಪಿಸಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರೀತಿಯಲ್ಲಿ ತಿಳಿಸುವವನಾಗು.

16 ದೇವರಿಂದ ಬಂದಿಲ್ಲದ ನಿರರ್ಥಕ ಸಂಗತಿಗಳನ್ನು ಮಾತನಾಡುವ ಜನರಿಂದ ದೂರವಾಗಿರು. ಆ ರೀತಿಯ ಮಾತುಗಳು ಜನರನ್ನು ದೇವರಿಂದ ಮತ್ತಷ್ಟು ದೂರ ಮಾಡುತ್ತವೆ. 17 ಅವರ ಕೆಟ್ಟ ಉಪದೇಶಗಳು ದೇಹದಲ್ಲಿ ಹರಡಿಕೊಳ್ಳುವ ಕಾಯಿಲೆಯಂತೆ ವ್ಯಾಪಿಸಿಕೊಳ್ಳುತ್ತವೆ. ಹುಮೆನಾಯನು ಮತ್ತು ಪಿಲೇತನು ಅಂತಹ ಜನರಾಗಿದ್ದಾರೆ. 18 ಅವರು ಸತ್ಯೋಪದೇಶವನ್ನು ತಿರಸ್ಕರಿಸಿದರು. ಎಲ್ಲಾ ಜನರಿಗೆ ಉಂಟಾಗುವ ಪುನರುತ್ಥಾನವು ಈಗಾಗಲೇ ಆಗಿ ಹೋಗಿದೆಯೆಂದು ಅವರು ಹೇಳುತ್ತಾರೆ. ಅವರಿಬ್ಬರು ಕೆಲವು ಜನರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ.

19 ಆದರೆ ದೇವರ ಭದ್ರವಾದ ಬುನಾದಿಯು ಬದಲಾಗುವುದೇ ಇಲ್ಲ. “ಪ್ರಭುವಿಗೆ ತನ್ನವರು ಯಾರೆಂಬುದು ತಿಳಿದಿದೆ”(A) ಎಂತಲೂ “ಪ್ರಭುವಿನಲ್ಲಿ ನಂಬಿಕೆಯಿಟ್ಟಿರುವವರೆಲ್ಲರೂ ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಆ ಬುನಾದಿಯ ಮೇಲೆ ಕೆತ್ತಲಾಗಿದೆ.

20 ದೊಡ್ಡ ಮನೆಯಲ್ಲಿ ಚಿನ್ನಬೆಳ್ಳಿಗಳಿಂದ ಮಾಡಿದ ವಸ್ತುಗಳಿರುತ್ತವೆ. ಅಲ್ಲದೆ ಮರದಿಂದ, ಮಣ್ಣಿನಿಂದ ಮಾಡಿದ ವಸ್ತುಗಳೂ ಇರುತ್ತವೆ. ಕೆಲವನ್ನು ವಿಶೇಷ ಕಾರ್ಯಕ್ಕಾಗಿ ಬಳಸುತ್ತಾರೆ. ಇತರ ವಸ್ತುಗಳನ್ನು ಹೀನವಾದ ಕೃತ್ಯಗಳಿಗೆ ಬಳಸುತ್ತಾರೆ. 21 ಹೀಗಿರಲಾಗಿ ಒಬ್ಬನು ತನ್ನ ದುಷ್ಕೃತ್ಯಗಳನ್ನು ತೊರೆದು ತನ್ನನ್ನು ಶುದ್ಧೀಕರಿಸಿಕೊಂಡರೆ ಅವನನ್ನು ಬಳಸಲಾಗುವುದು. ಅವನು ದೇವರ ಸೇವೆಗೆ ಮೀಸಲಾಗುತ್ತಾನೆ; ಯಜಮಾನನಿಗೆ ಉಪಯುಕ್ತನಾಗುತ್ತಾನೆ; ಸತ್ಕಾರ್ಯಗಳನ್ನು ಕೈಕೊಳ್ಳಲು ಸಿದ್ಧನಾಗಿರುತ್ತಾನೆ.

22 ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಪ್ರೀತಿ, ನಂಬಿಕೆ ಮತ್ತು ಶಾಂತಿಯನ್ನು ಹೊಂದಿದವನಾಗಿದ್ದು ಯೋಗ್ಯವಾದ ರೀತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಸವಿಟ್ಟಿರುವ ಮತ್ತು ಪರಿಶುದ್ಧ ಹೃದಯ ಹೊಂದಿರುವ ಜನರೊಂದಿಗೆ ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡು. 23 ಮೂಢತನದ ಮತ್ತು ಕ್ಷುಲ್ಲಕವಾದ ವಾದವಿವಾದಗಳಿಂದ ದೂರವಾಗಿರು. ಆ ವಾಗ್ವಾದಗಳು ಬೆಳೆದು ದೊಡ್ಡದಾಗುತ್ತವೆ ಎಂಬುದು ನಿನಗೆ ತಿಳಿದಿದೆ. 24 ಪ್ರಭುವಿನ ಸೇವಕನು ವಾಗ್ವಾದ ಮಾಡಲೇಬಾರದು. ಅವನು ಪ್ರತಿಯೊಬ್ಬರಿಗೂ ದಯೆತೋರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; ತಾಳ್ಮೆಯಿಂದಿರಬೇಕು. 25 ಅವನು ತನ್ನೊಂದಿಗೆ ಸಮ್ಮತಿಸದಿರುವ ಜನರಿಗೆ ಸಾತ್ವಿಕ ರೀತಿಯಲ್ಲಿ ಉಪದೇಶ ಮಾಡಬೇಕು. ಅವರು ಸತ್ಯವನ್ನು ಅಂಗೀಕರಿಸಿಕೊಳ್ಳುವಂತೆ ದೇವರು ಅವರ ಹೃದಯಗಳನ್ನು ಪರಿವರ್ತಿಸಬಲ್ಲನು. 26 ಸೈತಾನನು ಆ ಜನರನ್ನು ತನ್ನ ಬಲೆಗೆ ಬೀಳಿಸಿ, ತನ್ನ ಅಪೇಕ್ಷೆಗೆ ತಕ್ಕಂತೆ ಅವರಿಂದ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ. ಆದರೆ ಅವರು ಎಚ್ಚರಗೊಂಡು, ಸೈತಾನನು ತಮ್ಮನ್ನು ವಶಪಡಿಸಿ ಕೊಂಡಿರುವುದನ್ನು ಗುರುತಿಸಬಹುದು ಹಾಗೂ ಸೈತಾನನ ಬಲೆಯಿಂದ ತಪ್ಪಿಸಿಕೊಂಡು ಬಿಡುಗಡೆ ಹೊಂದಬಹುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International