Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 102:1-17

ಹಿಂಸೆ ಸಂಕಟಗಳಲ್ಲಿರುವವನ ಪ್ರಾರ್ಥನೆ.

102 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
    ಸಹಾಯಕ್ಕಾಗಿ ನಾನಿಡುವ ಮೊರೆಯನ್ನು ಲಾಲಿಸು.
ಯೆಹೋವನೇ, ನಾನು ಆಪತ್ತುಗಳಲ್ಲಿರುವಾಗ ನನಗೆ ವಿಮುಖನಾಗಬೇಡ, ನನಗೆ ಕಿವಿಗೊಡು.
    ಸಹಾಯಕ್ಕಾಗಿ ಮೊರೆಯಿಡುವಾಗ ಬೇಗನೆ ಸದುತ್ತರವನ್ನು ದಯಪಾಲಿಸು.
ನನ್ನ ಜೀವಮಾನವು ಹೊಗೆಯಂತೆ ಕಣ್ಮರೆಯಾಗುತ್ತಿದೆ.
    ನನ್ನ ಎಲುಬುಗಳು ಬೆಂಕಿಯಂತೆ ಸುಟ್ಟುಹೋಗುತ್ತಿವೆ.
ನಾನು ನಿರ್ಬಲನಾಗಿ ಒಣಗಿಹೋಗುತ್ತಿರುವ ಹುಲ್ಲಿನಂತಿದ್ದೇನೆ.
    ನಾನು ಊಟವನ್ನೂ ಮರೆತುಬಿಡುವೆನು.
ದೀರ್ಘ ದುಃಖದಿಂದಾಗಿ
    ನನ್ನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡಿವೆ.
ಅರಣ್ಯದಲ್ಲಿರುವ ಗೂಬೆಯಂತೆ ಒಬ್ಬಂಟಿಗನಾಗಿದ್ದೇನೆ.
    ಪಾಳುಬಿದ್ದ ಕಟ್ಟಡಗಳಲ್ಲಿರುವ ಗೂಬೆಯಂತೆ ನಾನು ಒಬ್ಬಂಟಿಗನಾಗಿದ್ದೇನೆ.
ನನಗೆ ನಿದ್ರೆಯೂ ಬಾರದು.
    ಮೇಲ್ಛಾವಣಿಗೆಯ ಮೇಲಿರುವ ಏಕಾಂಗಿಯಾದ ಪಕ್ಷಿಯಂತೆ ನಾನಿದ್ದೇನೆ.
ನನ್ನ ವೈರಿಗಳು ನನಗೆ ಅವಮಾನ ಮಾಡುತ್ತಲೇ ಇರುವರು.
    ಅವರು ನನ್ನನ್ನು ದೃಷ್ಟಾಂತಮಾಡಿ ಶಪಿಸುವರು.
ನನ್ನ ದುಃಖವೇ ನನಗೆ ಆಹಾರವಾಯಿತು.
    ಕಣ್ಣೀರು ನನ್ನ ಪಾನೀಯದೊಳಗೆ ತೊಟ್ಟಿಕ್ಕುತ್ತಿದೆ.
10 ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ.
    ನೀನು ನನ್ನನ್ನು ಮೇಲೆತ್ತಿ ಎಸೆದುಬಿಟ್ಟೆಯಲ್ಲಾ!

11 ನನ್ನ ಜೀವಮಾನವು ಸಂಜೆಯ ನೆರಳಿನಂತೆ ಕೊನೆಗೊಂಡಿದೆ.
    ನಾನು ಒಣಗಿ ಸಾಯುತ್ತಿರುವ ಹುಲ್ಲಿನಂತಿದ್ದೇನೆ.
12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
    ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
    ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
    ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
    ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
    ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
    ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.

ಯೆರೆಮೀಯ 29:24-32

ಶೆಮಾಯನಿಗೆ ದೇವರ ಸಂದೇಶ

24 (ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು.) ನೀನು ನೆಹೆಲಾಮ್ಯನಾದ ಶೆಮಾಯನಿಗೆ ಕೂಡ ಒಂದು ಸಂದೇಶವನ್ನು ಕೊಡು. 25 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: “ಶೆಮಾಯನೇ, ಜೆರುಸಲೇಮಿನಲ್ಲಿರುವ ಎಲ್ಲಾ ಜನರಿಗೆ ನೀನು ಪತ್ರವನ್ನು ಕಳುಹಿಸಿದೆ. ನೀನು ಮಾಸೇಯನ ಮಗನಾಗಿರುವ ಯಾಜಕನಾದ ಚೆಫನ್ಯನಿಗೂ ಮತ್ತು ಎಲ್ಲಾ ಯಾಜಕರಿಗೂ ಪತ್ರಗಳನ್ನು ಕಳುಹಿಸಿದೆ. ಆ ಪತ್ರಗಳನ್ನು ಯೆಹೋವನ ಆದೇಶದ ಪ್ರಕಾರ ಕಳುಹಿಸದೆ, ನಿನ್ನ ಹೆಸರಿನಿಂದ ಕಳುಹಿಸಿದೆ. 26 ಶೆಮಾಯನೇ, ನೀನು ಚೆಫನ್ಯನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿರುವೆ: ‘ಚೆಫನ್ಯನೇ, ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿದ್ದಾನೆ. ನೀನು ಯೆಹೋವನ ಆಲಯದ ಮೇಲ್ವಿಚಾರಕನಾಗಿರುವೆ. ಹುಚ್ಚನಂತೆ ವರ್ತಿಸುವ ಮತ್ತು ಪ್ರವಾದಿಯಂತೆ ನಟಿಸುವ ವ್ಯಕ್ತಿಯನ್ನು ನೀನು ಬಂಧಿಸಬೇಕು, ಅವನಿಗೆ ಕೋಳಹಾಕಿ ಕೊರಳಿಗೆ ಕಬ್ಬಿಣದ ಕಂಠಪಟ್ಟಿಯನ್ನು ಹಾಕಬೇಕು. 27 ಈಗ ಯೆರೆಮೀಯನು ಪ್ರವಾದಿಯಂತೆ ನಟಿಸುತ್ತಿದ್ದಾನೆ. ನೀನು ಅವನನ್ನು ಏಕೆ ಬಂಧಿಸಲಿಲ್ಲ? 28 ಯೆರೆಮೀಯನು ಬಾಬಿಲೋನಿನಲ್ಲಿದ್ದ ನಮಗೆ ಈ ಸಂದೇಶವನ್ನು ಕಳುಹಿಸಿದ್ದಾನೆ: ಬಾಬಿಲೋನಿನಲ್ಲಿರುವ ನೀವು ಅಲ್ಲಿ ಬಹಳ ಕಾಲದವರೆಗೆ ಇರುವಿರಿ. ಆದ್ದರಿಂದ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ನೆಲೆಸಿರಿ; ತೋಟಗಳನ್ನು ಬೆಳೆಸಿರಿ; ಮತ್ತು ನೀವು ಬೆಳೆದದ್ದನ್ನು ಆಹಾರವನ್ನಾಗಿ ಬಳಸಿರಿ.’”

29 ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು. 30 ಆಗ ಯೆರೆಮೀಯನಿಗೆ ಯೆಹೋವನ ಸಂದೇಶವು ಬಂದಿತು. 31 “ಯೆರೆಮೀಯನೇ, ಬಾಬಿಲೋನಿನಲ್ಲಿರುವ ಎಲ್ಲಾ ಬಂಧಿಗಳಿಗೆ ಈ ಸಂದೇಶವನ್ನು ಕಳುಹಿಸು, ‘ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಹೀಗೆನ್ನುವನು: ಶೆಮಾಯನು ನಿಮಗೆ ಪ್ರವಾದನೆ ಮಾಡಿದ್ದಾನೆ. ಆದರೆ ನಾನು ಅವನನ್ನು ಕಳುಹಿಸಲಿಲ್ಲ. ನೀವು ಸುಳ್ಳನ್ನು ನಂಬುವಂತೆ ಅವನು ಮಾಡಿದ್ದಾನೆ. 32 ಆದ್ದರಿಂದ ಅವನನ್ನು ನಾನು ತಕ್ಷಣ ದಂಡಿಸುತ್ತೇನೆ. ನಾನು ಅವನ ಕುಟುಂಬವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ನಾನು ನನ್ನ ಜನರಿಗಾಗಿ ಮಾಡುವ ಒಳ್ಳೆಯವುಗಳಲ್ಲಿ ಅವನು ಪಾಲು ಹೊಂದುವುದಿಲ್ಲ.’” ಇದು ಯೆಹೋವನ ನುಡಿ. “‘ಶೆಮಾಯನು, ಜನರನ್ನು ಯೆಹೋವನಾದ ನನ್ನ ವಿರುದ್ಧ ತಿರುಗುವಂತೆ ಮಾಡಿದ್ದರಿಂದ ನಾನು ಅವನನ್ನು ದಂಡಿಸುವೆನು.’”

ಎಫೆಸದವರಿಗೆ 6:10-20

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ

10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International