Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 65

ರಚನೆಗಾರ: ದಾವೀದ.

65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
    ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
ಪ್ರಾರ್ಥನೆಯನ್ನು ಕೇಳುವಾತನೇ,
    ಜನರೆಲ್ಲರೂ ನಿನ್ನ ಬಳಿಗೆ ಬರುವರು.
ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
    ನಮ್ಮನ್ನು ಆ ಪಾಪಗಳಿಂದ ಬಿಡಿಸು.
ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
    ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
    ನಾವು ಉಲ್ಲಾಸಗೊಂಡಿದ್ದೇವೆ.
ನಮ್ಮ ರಕ್ಷಕನಾದ ದೇವರೇ,
    ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
    ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
    ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
ಭೋರ್ಗರೆಯುವ ಸಮುದ್ರಗಳನ್ನೂ
    ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
    ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
ದೇವರೇ, ಭೂಪಾಲಕನು ನೀನೇ.
    ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
    ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
    ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
    ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
    ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
    ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
    ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.

ಯೋವೇಲ 2:12-22

ಜನರು ಬದಲಾಗಬೇಕೆಂದು ಯೆಹೋವನು ಹೇಳುತ್ತಾನೆ

12 ಇದು ಯೆಹೋವನ ಸಂದೇಶ:
    “ನಿಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಬನ್ನಿರಿ,
ನೀವು ದುಷ್ಟತ್ವವನ್ನು ನಡಿಸಿರುವದರಿಂದ ದುಃಖಿಸಿರಿ,
    ಅಳಿರಿ, ಉಪವಾಸ ಮಾಡಿರಿ.
13 ನಿಮ್ಮ ಬಟ್ಟೆಗಳನ್ನಲ್ಲ,
    ಹೃದಯವನ್ನು ಹರಿಯಿರಿ.”
ನಿಮ್ಮ ದೇವರಾದ ಯೆಹೋವನ ಬಳಿಗೆ ಬನ್ನಿರಿ.
    ಆತನು ದಯಾಪರನೂ ಕನಿಕರವುಳ್ಳವನೂ ಆಗಿದ್ದಾನೆ.
ಆತನು ಬೇಗನೆ ಕೋಪಿಸುವುದಿಲ್ಲ.
    ಆತನಲ್ಲಿ ಆಳವಾದ ಪ್ರೀತಿ ಇದೆ.
ಆತನು ಯೋಚಿಸಿದ ಶಿಕ್ಷೆಯನ್ನು ಒಂದುವೇಳೆ ನಿಮಗೆ ಕೊಡದೆ
    ತನ್ನ ಮನಸ್ಸನ್ನು ಬದಲಾಯಿಸಬಹುದು.
14 ಒಂದುವೇಳೆ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿದರೂ ಬದಲಾಯಿಸಬಹುದು.
    ಒಂದುವೇಳೆ ಆತನು ನಿಮಗಾಗಿ ಆಶೀರ್ವಾದವನ್ನು ಬಿಟ್ಟುಹೋಗಬಹುದು.
ಆಗ ನೀವು ದೇವರಾದ ಯೆಹೋವನಿಗೆ ಧಾನ್ಯ
    ಮತ್ತು ಪಾನಸಮರ್ಪಣೆ ಮಾಡುವಿರಿ.

ಯೆಹೋವನಿಗೆ ಪ್ರಾರ್ಥಿಸಿರಿ

15 ಚೀಯೋನಿನಲ್ಲಿ ತುತ್ತೂರಿ ಊದಿರಿ.
    ವಿಶೇಷ ಕೂಟಕ್ಕಾಗಿ ಜನರನ್ನು ಕೂಡಿಸಿರಿ.
    ಉಪವಾಸದ ದಿನ ಗೊತ್ತುಮಾಡಿರಿ.
16 ವಿಶೇಷ ಕೂಟಕ್ಕಾಗಿ
    ಜನರನ್ನು ಒಟ್ಟಾಗಿ ಕೂಡಿಸಿರಿ.
ಪ್ರಾಯಸ್ಥರನ್ನು ಕೂಡಿಸಿರಿ.
    ಮಕ್ಕಳನ್ನೂ ಕೂಡಿಸಿರಿ.
    ಮೊಲೆಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ.
ವಧುವರರು ತಮ್ಮ
    ಶೋಭನದ ಕೋಣೆಯಿಂದ ಹೊರಬರಲಿ.
17 ಯೆಹೋವನ ಸೇವಕರಾದ ಯಾಜಕರು
    ಮಂಟಪಕ್ಕೂ ವೇದಿಕೆಗೂ ಮಧ್ಯದಲ್ಲಿ ಗೋಳಾಡಲಿ.
ಆ ಜನರೆಲ್ಲಾ ಹೀಗೆ ಹೇಳಬೇಕು, “ಯೆಹೋವನೇ, ನಿನ್ನ ಜನರ ಮೇಲೆ ಕರುಣೆ ಇಡು,
    ನಿನ್ನ ಜನರನ್ನು ನಾಚಿಕೆಗೆ ತುತ್ತಾಗುವಂತೆ ಮಾಡಬೇಡ.
    ನಿನ್ನ ಜನರ ವಿಷಯವಾಗಿ ಅನ್ಯಜನರು ಗೇಲಿ ಮಾಡದಿರಲಿ.
ಇತರ ದೇಶದ ಜನರು ನಮಗೆ ಹಾಸ್ಯ ಮಾಡುತ್ತಾ,
    ‘ಅವರ ದೇವರು ಎಲ್ಲಿ?’ ಎಂದು ಹೇಳದ ಹಾಗೆ ಮಾಡು.”

ಯೆಹೋವನು ದೇಶವನ್ನು ಸುಸ್ಥಿತಿಗೆ ತರುವನು

18 ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು.
    ತನ್ನ ಜನರ ಬಗ್ಗೆ ದುಃಖಿಸಿದನು.
19 ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು:
“ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು.
    ನಿಮಗೆ ಬೇಕಾದಷ್ಟು ಇರುವದು.
    ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ.
20 ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು.
    ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು.
ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು,
    ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು.
ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ
    ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು.
ಆಗ ಭಯಂಕರ ಹೊಲಸು ವಾಸನೆ ಇರುವದು.”

ದೇಶವು ಹೊಸತಾಗಿ ಮಾಡಲ್ಪಡುವದು

21 ದೇಶವೇ, ಭಯಪಡದಿರು.
    ಯೆಹೋವನು ಮಹತ್ಕಾರ್ಯವನ್ನು ಮಾಡಲಿರುವದರಿಂದ
    ಸಂತೋಷದಿಂದ ಆನಂದಿಸು.
22 ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ.
    ಮರುಭೂಮಿಯು ಹುಲ್ಲುಗಾವಲಾಗುವದು.
ಮರಗಳು ಹಣ್ಣುಗಳನ್ನು ಬಿಡುವವು.
    ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ಬಹಳ ಹಣ್ಣುಗಳನ್ನು ಬಿಡುವವು.

ಲೂಕ 1:46-55

ಮರಿಯಳು ದೇವರನ್ನು ಸ್ತುತಿಸಿದಳು

46 ಆಗ ಮರಿಯಳು,

47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
    ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
    ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
    ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
    ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
    ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
    ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
    ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International