Revised Common Lectionary (Semicontinuous)
118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
ಆತನು ಒಳ್ಳೆಯವನು.
ಆತನ ಪ್ರೀತಿಯು ಶಾಶ್ವತವಾದದ್ದು!
2 ಇಸ್ರೇಲರೇ,
“ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.
25 “ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನಮ್ಮನ್ನು ರಕ್ಷಿಸಿದ್ದಾನೆ.
26 ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!”
“ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
27 ಯೆಹೋವನೇ ದೇವರು.
ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು.
ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.
28 ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು.
ನಾನು ನಿನ್ನನ್ನು ಘನಪಡಿಸುವೆನು!
29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು.
ಆತನ ಪ್ರೀತಿಯು ಶಾಶ್ವತವಾದದ್ದು.
ದೇವರ ವಾಗ್ದಾನ
33 ಎರಡನೇ ಬಾರಿ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಯೆರೆಮೀಯನು ಇನ್ನೂ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. 2 “ಯೆಹೋವನು ಭೂಮಿಯನ್ನು ಸೃಷ್ಟಿಸಿದನು. ಆತನೇ ಅದನ್ನು ಸುರಕ್ಷಿತವಾಗಿಡುವನು. ಯೆಹೋವನು ಹೀಗೆನ್ನುತ್ತಾನೆ: 3 ‘ಯೆಹೂದವೇ, ನನಗೆ ಪ್ರಾರ್ಥಿಸು. ಆಗ ನಾನು ನಿನಗೆ ಉತ್ತರಿಸುವೆನು. ನಾನು ನಿನಗೆ ಬಹು ಮುಖ್ಯವಾದ ರಹಸ್ಯಗಳನ್ನು ತಿಳಿಸುತ್ತೇನೆ. ಈ ಸಂಗತಿಗಳನ್ನು ನೀನು ಹಿಂದೆಂದೂ ಕೇಳಲಿಲ್ಲ. 4 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಜೆರುಸಲೇಮಿನಲ್ಲಿನ ಮನೆಗಳ ಬಗ್ಗೆಯೂ ಮತ್ತು ಯೆಹೂದದ ರಾಜರ ಅರಮನೆಗಳ ಬಗ್ಗೆಯೂ ಯೆಹೋವನು ಹೀಗೆ ಹೇಳುತ್ತಾನೆ. ವೈರಿಗಳು ಆ ಮನೆಗಳನ್ನು ಕೆಡವಿಬಿಡುತ್ತಾರೆ. ವೈರಿಗಳು ನಗರದ ಕೋಟೆಗೋಡೆಗಳ ತುದಿಯವರೆಗೂ ಇಳಿಜಾರಾದ ಗೋಡೆಗಳನ್ನು ಕಟ್ಟುತ್ತಾರೆ. ವೈರಿಗಳು ಖಡ್ಗ ಹಿಡಿದು ಈ ನಗರದ ಜನರೊಂದಿಗೆ ಕಾದಾಡುವರು.
5 “‘ಜೆರುಸಲೇಮಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ನಾನು ಅವರ ಮೇಲೆ ಕೋಪಗೊಂಡಿದ್ದೇನೆ; ಅವರಿಗೆ ವಿರುದ್ಧವಾಗಿದ್ದೇನೆ. ನಾನು ಅಲ್ಲಿ ಬಹಳ ಜನರನ್ನು ಕೊಂದುಹಾಕುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡಲು ಬರುವುದು. ಜೆರುಸಲೇಮಿನ ಮನೆಗಳಲ್ಲಿ ಅನೇಕಾನೇಕ ಮೃತದೇಹಗಳು ಕಣ್ಣಿಗೆ ಬೀಳುವವು.
6 “‘ಅನಂತರ ನಾನು ಆ ನಗರದ ಜನರನ್ನು ಕ್ಷಮಿಸುವೆನು. ಆ ಜನರು ಶಾಂತಿಯನ್ನೂ ಸುರಕ್ಷಣೆಯನ್ನೂ ಪಡೆಯುವಂತೆ ಮಾಡುವೆನು. 7 ಯೆಹೂದ ಮತ್ತು ಇಸ್ರೇಲುಗಳಿಗೆ ಮತ್ತೊಮ್ಮೆ ಒಳ್ಳೆಯದಾಗುವಂತೆ ಮಾಡುವೆನು. ಅವರನ್ನು ನಾನು ಮೊದಲಿನಂತೆ ಶಕ್ತಿಶಾಲಿಗಳನ್ನಾಗಿ ಮಾಡುವೆನು. 8 ಅವರು ನನ್ನ ವಿರುದ್ಧ ಪಾಪಗಳನ್ನು ಮಾಡಿದರೂ ಅವರ ಪಾಪಗಳನ್ನು ತೊಳೆದುಬಿಡುವೆನು. ಅವರು ನನ್ನ ವಿರುದ್ಧ ಕಾದಾಡಿದರೂ ಅವರನ್ನು ಕ್ಷಮಿಸುವೆನು. 9 ಆಗ ಜೆರುಸಲೇಮ್ ಒಂದು ಅದ್ಭುತವಾದ ಸ್ಥಳವಾಗುವುದು; ಜನರು ಸಂತೋಷದಿಂದಿರುವರು. ಅಲ್ಲಿ ನಡೆದ ಒಳ್ಳೆಯ ಸಂಗತಿಗಳ ಬಗ್ಗೆ ಕೇಳಿದಾಗ ಬೇರೆ ಜನಾಂಗಗಳ ಜನರು ಅದನ್ನು ಹೊಗಳುವರು; ವಿಸ್ಮಯಪಡುವರು. ನಾನು ಜೆರುಸಲೇಮಿಗೆ ಮಾಡುತ್ತಿರುವ ಒಳಿತಿನ ವಿಷಯವು ಅವರ ಕಿವಿಗೆ ಬೀಳುವುದು.’
ದೇವರ ಇಷ್ಟಕ್ಕನುಸಾರವಾದ ಜನರಾಗಿರಿ
12 ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13 ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.
14 ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ. 15 ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ. 16 ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.
17 ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ. 18 ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.
Kannada Holy Bible: Easy-to-Read Version. All rights reserved. © 1997 Bible League International