Revised Common Lectionary (Semicontinuous)
9 ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
ನಿನ್ನ ಮಾತುಗಳನ್ನು ಮರೆಯುವುದಿಲ್ಲ.
ಯೆಹೋವನೇ ದೇವರು
44 “ಯಾಕೋಬೇ, ನೀನೇ ನನ್ನ ಸೇವಕ. ನನ್ನ ಮಾತುಗಳನ್ನು ಕೇಳು. ಇಸ್ರೇಲೇ, ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ. ನಾನು ಹೇಳುವುದನ್ನು ಕೇಳು. 2 ಯೆಹೋವನಾದ ನಾನೇ ನಿನ್ನನ್ನು ನಿರ್ಮಿಸಿದಾತನು. ನೀನು ತಾಯಿಯ ಗರ್ಭದಲ್ಲಿರುವಾಗಲೇ ನಾನು ನಿನಗೆ ಸಹಾಯ ಮಾಡಿದೆನು. ಯಾಕೋಬೇ, ನನ್ನ ಸೇವಕನೇ, ಹೆದರದಿರು. ಯೆಶುರೂನೇ (ಇಸ್ರೇಲೇ), ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ.
3 “ಬಾಯಾರಿದ ಜನರಿ ಗೆ ನಾನು ನೀರು ಹೊಯ್ಯುವೆನು. ಬಂಜ ರು ಭೂಮಿಯಲ್ಲಿ ನಾನು ಹೊಳೆ ಹರಿಯುವಂತೆ ಮಾಡುವೆನು. ನಿನ್ನ ಸಂತಾನದ ಮೇಲೆ ನಾನು ನನ್ನ ಆತ್ಮವನ್ನು ಸುರಿಸುವೆನು; ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು ಸುರಿಸುವೆನು. ಅದು ಹರಿಯುವ ಬುಗ್ಗೆಯ ನೀರಿನಂತಿರುವುದು. 4 ಅವರು ಈ ಲೋಕದ ಜನರೊಂದಿಗೆ ಬೆಳೆಯುವರು. ಅವರು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದಂತಿರುವರು.
5 “ಒಬ್ಬನು: ‘ನಾನು ಯೆಹೋವನಿಗೆ ಸೇರಿದವನು’ ಎಂದು ಹೇಳುತ್ತಾನೆ. ಇನ್ನೊಬ್ಬನು ಯಾಕೋಬನ ಹೆಸರನ್ನು ಬಳಸುವನು. ಮತ್ತೊಬ್ಬನು, ‘ನಾನು ಯೆಹೋವನವನು’ ಎಂದು ಸಹಿ ಹಾಕುವನು. ಮತ್ತೊಬ್ಬನು, ನಾನು ‘ಇಸ್ರೇಲನು’ ಎಂಬ ಹೆಸರನ್ನು ಬಳಸಿಕೊಳ್ಳುವನು.”
6 ಯೆಹೋವನು ಇಸ್ರೇಲರ ಅರಸನಾಗಿದ್ದಾನೆ. ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ರಕ್ಷಿಸುತ್ತಾನೆ. ಆತನು ಹೇಳುವುದೇನೆಂದರೆ: “ನಾನೊಬ್ಬನೇ ದೇವರು. ನನ್ನ ಹೊರತು ಬೇರೆ ದೇವರುಗಳಿಲ್ಲ. ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. 7 ನನ್ನಂತಹ ಬೇರೆ ದೇವರುಗಳಿಲ್ಲ. ಬೇರೆ ದೇವರುಗಳು ಇದ್ದರೆ ಅವು ಈಗ ಮಾತನಾಡಲಿ. ಆ ದೇವರುಗಳು ಬಂದು ತಾವು ನನ್ನಂತಿರುವುದಾಗಿ ರುಜುವಾತು ಮಾಡಲಿ. ಎಂದೆಂದಿಗೂ ಇರುವ ಈ ಜನರನ್ನು ನಾನು ಸೃಷ್ಟಿಸಿದಂದಿನಿಂದ ಏನಾಯಿತೆಂಬುದನ್ನು ನನಗೆ ತಿಳಿಸಬೇಕು. ಆ ದೇವರು ಮುಂದೆ ಸಂಭವಿಸಲಿಕ್ಕಿರುವ ವಿಷಯಗಳನ್ನು ತಿಳಿಸಬೇಕು.
8 “ನೀವು ಭಯಪಡಬೇಡಿ, ಚಿಂತಿಸಬೇಡಿ. ನಾನು ಭವಿಷ್ಯದ ಸಂಭವಗಳನ್ನು ಯಾವಾಗಲೂ ನಿಮಗೆ ತಿಳಿಸುತ್ತಾ ಬಂದಿದ್ದೇನೆ. ನೀವೇ ನನ್ನ ಸಾಕ್ಷಿಗಳು. ನನ್ನ ಹೊರತು ಬೇರೆ ದೇವರುಗಳಿಲ್ಲ. ನನ್ನ ಹೊರತು ಬೇರೆ ಯಾವ ‘ಬಂಡೆ’ಯೂ ಇಲ್ಲ. ನಾನೊಬ್ಬನೇ!”
ಪೇತ್ರನ ಪ್ರಸಂಗ
14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. 15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ! 16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:
17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’(A)
22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ. 23 ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು. 24 ಯೇಸು ಮರಣವೇದನೆಯನ್ನು ಅನುಭವಿಸಿದನು. ಆದರೆ ದೇವರು ಆತನನ್ನು ಬಿಡಿಸಿದನು. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಮರಣವು ಯೇಸುವನ್ನು ಹಿಡಿದುಕೊಳ್ಳಲಾಗಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International