Revised Common Lectionary (Semicontinuous)
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
4 ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
5 ಅವರು ಹಸಿವೆಯಿಂದಲೂ
ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
6 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
7 ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
8 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
9 ಆತನು ಬಾಯರಿದವರನ್ನು ನೀರಿನಿಂದಲೂ
ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.
10 ದೇವಜನರಲ್ಲಿ ಕೆಲವರು ಸೆರೆಯಾಳುಗಳಾಗಿದ್ದರು;
ಕಾರ್ಗತ್ತಲೆಯ ಸೆರೆಮನೆಗಳಲ್ಲಿ ಬಂಧಿತರಾಗಿದ್ದರು.
11 ಯಾಕೆಂದರೆ ಅವರು ಯೆಹೋವನ ಆಜ್ಞೆಗಳಿಗೆ ವಿರೋಧವಾಗಿ ದಂಗೆ ಎದ್ದರು.
ಮಹೋನ್ನತನಾದ ದೇವರ ಉಪದೇಶವನ್ನು ತಿರಸ್ಕರಿಸಿದರು.
12 ಅವರ ಕಾರ್ಯಗಳ ನಿಮಿತ್ತವೇ
ದೇವರು ಅವರ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿದನು.
ಅವರು ಎಡವಿಬಿದ್ದರು,
ಅವರಿಗೆ ಸಹಾಯಮಾಡಲು ಯಾರೂ ಇರಲಲ್ಲ.
13 ಅವರು ಆಪತ್ತಿನಲ್ಲಿದ್ದಾಗ ಯೆಹೋವನಿಗೆ ಮೊರೆಯಿಟ್ಟರು.
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
14 ಆತನು ಅವರನ್ನು ಕಾರ್ಗತ್ತಲೆಯ ಸೆರೆಮನೆಗಳಿಂದ ಹೊರತಂದನು;
ಕಟ್ಟಿದ ಹಗ್ಗಗಳನ್ನು ಕಿತ್ತುಹಾಕಿದನು.
15 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
16 ನಮ್ಮ ಶತ್ರುಗಳನ್ನು ಸೋಲಿಸಲು ದೇವರು ನಮಗೆ ಸಹಾಯಮಾಡುವನು.
ಅವರ ತಾಮ್ರದ ಬಾಗಿಲುಗಳನ್ನು ಆತನು ಮುರಿದುಹಾಕಬಲ್ಲನು.
ಅವರ ಬಾಗಿಲುಗಳ ಮೇಲಿರುವ ಕಬ್ಬಿಣದ ಸರಳುಗಳನ್ನು ಆತನು ನುಚ್ಚುನೂರು ಮಾಡಬಲ್ಲನು.
ಅರಣ್ಯದಲ್ಲಿ ಕಹಿನೀರು ಸಿಹಿಯಾದದ್ದು
22 ಮೋಶೆಯು ಇಸ್ರೇಲರನ್ನು ಕೆಂಪುಸಮುದ್ರದಿಂದ ಮುನ್ನಡೆಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ. 23 ಆ ಬಳಿಕ ಅವರು ಮಾರಾ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕೆಂದರೆ ಅದು ಬಹು ಕಹಿಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ “ಮಾರಾ” ಎಂಬುದಾಗಿ ಹೆಸರು ಕೊಡಲ್ಪಟ್ಟಿತ್ತು.)
24 ಅವರು ಮೋಶೆಗೆ ದೂರು ಹೇಳತೊಡಗಿದರು. “ಈಗ, ನಾವೇನು ಕುಡಿಯೋಣ?” ಎಂದು ಅವರು ಕೇಳಿದರು.
25 ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು.
ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು. 26 ಆತನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಯೋಗ್ಯವಾದವುಗಳನ್ನು ಮಾಡಬೇಕು; ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಬೇಕು. ಆಗ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ಕಾಯಿಲೆಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನಾಗಿದ್ದೇನೆ” ಎಂದು ಹೇಳಿದನು.
27 ಬಳಿಕ ಜನರು ಏಲೀಮಿಗೆ ಪ್ರಯಾಣ ಮಾಡಿದರು. ಏಲೀಮಿನಲ್ಲಿ ನೀರಿನ ಹನ್ನೆರಡು ಬುಗ್ಗೆಗಳಿದ್ದವು; ಅಲ್ಲಿ ಎಪ್ಪತ್ತು ಖರ್ಜೂರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಳೆಯ ಹಾಕಿದರು.
ಯೇಸು ಮೋಶೆಗಿಂತ ಶ್ರೇಷ್ಠನು
3 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. 2 ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು. 3 ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ. 4 ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು. 5 ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು. 6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International