Revised Common Lectionary (Semicontinuous)
ರಚನೆಗಾರರು: ಕೋರಹೀಯರು.
84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
2 ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
3 ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
4 ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
5 ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
6 ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
7 ಜನರು ದೇವರನ್ನು ಸಂದರ್ಶಿಸಲು
ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.
8 ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!
ದಾರ್ಯಾವೆಷನ ಆಜ್ಞೆ
6 ತನಗಿಂತ ಮೊದಲು ರಾಜರಾಗಿದ್ದವರ ವೃತ್ತಾಂತ ಪುಸ್ತಕಗಳನ್ನು ತರಿಸಿ ದಾರ್ಯಾವೆಷನು ಶೋಧಿಸಿದನು. ಈ ಪುಸ್ತಕಗಳು ರಾಜ ಖಜಾನೆಯಲ್ಲಿ ಇಡಲ್ಪಟ್ಟಿದ್ದವು. 2 ಮೇದ್ಯ ಪ್ರಾಂತ್ಯದ ಎಕ್‌ಬಟಾನ ಎಂಬ ಕೋಟೆಯೊಳಗೆ ಒಂದು ಸುರುಳಿಯು ದೊರಕಿತು. ಆ ಸುರುಳಿಯಲ್ಲಿ ಈ ರೀತಿಯಾಗಿ ಬರೆದಿತ್ತು:
ಸರಕಾರದ ಆಜ್ಞೆ: 3 ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಜೆರುಸಲೇಮಿನಲ್ಲಿರುವ ದೇವಾಲಯದ ವಿಷಯವಾಗಿ ಸೈರಸ್ ರಾಜನು ಹೊರಡಿಸಿದ ರಾಜಾಜ್ಞೆ:
ದೇವಾಲಯವು ಮತ್ತೆ ಕಟ್ಟಲ್ಪಡಲಿ. ಅದು ಹೋಮಯಜ್ಞಾದಿಗಳನ್ನು ಸಮರ್ಪಿಸುವ ಸ್ಥಳವಾಗಲಿ. ದೇವಾಲಯದ ಅಸ್ತಿವಾರವು ಬಲವಾಗಿರಬೇಕು. ಅದರ ಎತ್ತರ ತೊಂಭತ್ತು ಅಡಿ ಇರಬೇಕು. ಅದರ ಅಗಲ ತೊಂಭತ್ತು ಅಡಿ ಇರಬೇಕು. 4 ಅದರ ಗೋಡೆಯಲ್ಲಿ ಮೂರುಸಾಲು ದೊಡ್ಡ ಗಾತ್ರದ ಕಲ್ಲುಗಳಿರಬೇಕು; ಒಂದು ಸಾಲಿನಲ್ಲಿ ಮರದ ತೊಲೆಗಳಿರಬೇಕು. ದೇವಾಲಯ ಕಟ್ಟಲು ತಗಲುವ ಖರ್ಚುವೆಚ್ಚವೆಲ್ಲವನ್ನು ರಾಜನ ಖಜಾನೆಯಿಂದ ಕೊಡಬೇಕು. 5 ಬೆಳ್ಳಿಬಂಗಾರಗಳ ವಸ್ತುಗಳೆಲ್ಲವನ್ನು ಜೆರುಸಲೇಮಿನ ದೇವಾಲಯದಿಂದ ನೆಬೂಕದ್ನೆಚ್ಚರನು ಸೂರೆಮಾಡಿ ಬಾಬಿಲೋನಿಗೆ ತಂದದ್ದನ್ನು ದೇವಾಲಯದಲ್ಲಿ ಇಡಬೇಕು.
6 ಹೀಗಿರುವದರಿಂದ, ದಾರ್ಯಾವೇಷನಾದ ನಾನು,
ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಕ್ಕೆ ರಾಜ್ಯಪಾಲನಾಗಿರುವ ತತ್ತೆನೈ ಎಂಬ ನಿನಗೂ ಶೆತರ್ಬೋಜೆನೈ ಮತ್ತು ಆ ಪ್ರಾಂತ್ಯದ ಎಲ್ಲಾ ಅಧಿಕಾರಿಗಳಿಗೂ ಆಜ್ಞೆ ಕೊಡುವದೇನೆಂದರೆ, ಜೆರುಸಲೇಮಿನಿಂದ ನೀವು ದೂರವಾಗಿರಿ. 7 ಕೆಲಸ ಮಾಡುವವರನ್ನು ತೊಂದರೆಪಡಿಸಬೇಡಿ. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಯೆಹೂದ್ಯರ ದೇಶಾಧಿಪತಿ ಮತ್ತು ಯೆಹೂದ್ಯ ನಾಯಕರು ಅದನ್ನು ಮತ್ತೆ ಕಟ್ಟಲಿ. ಹಿಂದಿನ ದೇವಾಲಯವಿದ್ದಲ್ಲಿಯೇ ಹೊಸದನ್ನು ಕಟ್ಟಲಿ.
8 ಈಗ ನಾನು ನಿಮಗೆ ಕೊಡುವ ಆಜ್ಞೆ ಏನೆಂದರೆ, ದೇವಾಲಯ ಕಟ್ಟುವ ಯೆಹೂದ್ಯ ನಾಯಕರಿಗೆ ನೀವು ಸಂಪೂರ್ಣ ಖರ್ಚನ್ನು ಸರಕಾರದ ಖಜಾನೆಯಿಂದ ಕೊಡಬೇಕು. ಇದಕ್ಕೆ ಬೇಕಾದ ಹಣವನ್ನು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ಜನರಿಂದ ತೆರಿಗೆವಸೂಲಿ ಮಾಡಿದ ಹಣದಿಂದ ಕೊಡಬೇಕು. ಈ ಕೆಲಸವನ್ನು ನೀವು ಬೇಗನೆ ಮಾಡಬೇಕು. ದೇವಾಲಯದ ಕೆಲಸ ನಿಂತುಹೋಗಬಾರದು. 9 ಆ ಜನರಿಗೆ ಏನು ಅವಶ್ಯಕತೆಯಿದೆಯೋ ಅದನ್ನು ಪೂರೈಸಬೇಕು. ಅವರಿಗೆ ಎಳೆಹೋರಿಗಳು, ಟಗರುಗಳು, ಗಂಡುಕುರಿಗಳು ಪರಲೋಕದ ದೇವರಿಗೆ ಯಜ್ಞವನ್ನರ್ಪಿಸಲು ಬೇಕಾಗಿದ್ದರೆ ಅವುಗಳನ್ನು ಕೊಡಿರಿ. ಜೆರುಸಲೇಮಿನ ಯಾಜಕರು ಗೋಧಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಬೇಕು ಎಂದು ಹೇಳಿದರೆ ಅದನ್ನು ಪ್ರತಿದಿನ ತಪ್ಪದೆ ಒದಗಿಸಿರಿ. 10 ಅವುಗಳನ್ನು ಜೆರುಸಲೇಮಿನ ಯಾಜಕರಿಗೆ ಕೊಡಿರಿ. ಅವುಗಳನ್ನು ಯಜ್ಞವಾಗಿ ಸಮರ್ಪಿಸಿದಾಗ ಪರಲೋಕದ ದೇವರು ಅದನ್ನು ಮೆಚ್ಚುವನು. ಯಾಜಕರು ನನಗಾಗಿಯೂ ನನ್ನ ಮಕ್ಕಳಿಗಾಗಿಯು ಪ್ರಾರ್ಥಿಸಲಿ.
11 ಮಾತ್ರವಲ್ಲದೆ, ನನ್ನ ಆಜ್ಞೆ ಏನೆಂದರೆ: ಯಾವನಾದರೂ ನನ್ನ ಆಜ್ಞೆಯನ್ನು ಬದಲಾಯಿಸಿದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ಎಳೆದು ಅದನ್ನು ಶೂಲವನ್ನಾಗಿ ಮಾಡಿ, ಅವನನ್ನು ಅದಕ್ಕೆ ನೇತು ಹಾಕಬೇಕು; ಅವನ ಮನೆಯನ್ನು ಕೆಡವಿ ಅದನ್ನು ಮಣ್ಣುದಿಬ್ಬವನ್ನಾಗಿ ಮಾಡಬೇಕು.
12 ಜೆರುಸಲೇಮಿನಲ್ಲಿ ದೇವರು ತನ್ನ ಹೆಸರನ್ನು ಸ್ಥಾಪಿಸಿರುತ್ತಾನೆ. ಆದ್ದರಿಂದ ಯಾವ ಅರಸನಾಗಲಿ ಅಧಿಕಾರಿಯಾಗಲಿ ಈ ಆಜ್ಞೆಗೆ ವಿರುದ್ಧವಾಗಿ ನಡೆದರೆ ದೇವರೇ ಅವನನ್ನು ಸೋಲಿಸುವನು; ಯಾರಾದರೂ ಆ ದೇವಾಲಯವನ್ನು ಕೆಡವಲು ಪ್ರಯತ್ನಿಸಿದರೆ ಅಂಥವರನ್ನು ದೇವರೇ ನಾಶಮಾಡುವನು.
ಇದನ್ನು ದಾರ್ಯಾವೆಷನೆಂಬ ನಾನೇ ಆಜ್ಞಾಪಿಸಿರುತ್ತೇನೆ. ಈ ಆಜ್ಞೆಯನ್ನು ಬೇಗನೆ ಮತ್ತು ಸಂಪೂರ್ಣವಾಗಿ ನೆರವೇರಿಸಬೇಕು.
ದೇವಾಲಯ ಸಂಪೂರ್ಣವಾದದ್ದು ಮತ್ತು ಅದರ ಪ್ರತಿಷ್ಠೆ
13 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾದ ತತ್ತೆನೈ, ಶೆತರ್ಬೋಜೆನೈ ಮತ್ತು ಅವರ ಸಂಗಡವಿರುವ ಜನರು ರಾಜನಾದ ದಾರ್ಯಾವೆಷನ ಆಜ್ಞೆಗೆ ಅತ್ಯಂತ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ವಿಧೇಯರಾದರು. 14 ಹೀಗೆ ಯೆಹೂದ್ಯರ ಹಿರಿಯರು ದೇವಾಲಯದ ಕಟ್ಟಡ ಕೆಲಸವನ್ನು ಮುಂದುವರಿಸಿದರು. ಪ್ರವಾದಿಯಾದ ಹಗ್ಗೈನಂತೆ ಮತ್ತು ಇದ್ದೋವಿನ ಮಗನಾದ ಜೆಕರೀಯನಂತೆ ಅವರನ್ನು ಪ್ರೋತ್ಸಾಹಿಸುತ್ತಾ ಇದ್ದರು. ಆದ್ದರಿಂದ ಅವರು ಯಶಸ್ವಿಯಾದರು. ದೇವಾಲಯದ ಕೆಲಸ ಮುಗಿಯಿತು. ಇಸ್ರೇಲಿನ ದೇವರ ಆಜ್ಞೆಗೆ ವಿಧೇಯರಾಗಿಯೂ, ಸೈರಸ್, ದಾರ್ಯಾವೆಷ ಮತ್ತು ಅರ್ತಷಸ್ತ ಎಂಬ ಪರ್ಶಿಯ ಅರಸರ ಆಜ್ಞೆಗೆ ವಿಧೇಯರಾಗಿಯೂ ಕಟ್ಟಡದ ಕೆಲಸವನ್ನು ಸಂಪೂರ್ಣ ಮಾಡಿದರು. 15 ಆದಾರ್ ತಿಂಗಳಿನ ಮೂರನೆಯ ದಿನದಲ್ಲಿ ಅಂದರೆ ರಾಜ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದಲ್ಲಿ ದೇವಾಲಯವು ಸಂಪೂರ್ಣವಾಯಿತು.
16 ಅನಂತರ ಇಸ್ರೇಲರೆಲ್ಲರೂ ಸೇರಿ ದೇವಾಲಯವನ್ನು ಅತ್ಯಂತ ಹರ್ಷದಿಂದ ಪ್ರತಿಷ್ಠೆ ಮಾಡಿದರು. ಸೆರೆವಾಸದಿಂದ ಹಿಂತಿರುಗಿ ಬಂದಿದ್ದ ಯಾಜಕರು, ಲೇವಿಯರು ಮತ್ತು ಎಲ್ಲಾ ಜನರು ಈ ಆಚರಣೆಯಲ್ಲಿ ಭಾಗವಹಿಸಿದರು.
ದೇವಾಲಯವೇ ಪ್ರಾರ್ಥನಾಲಯ
(ಮತ್ತಾಯ 21:12-17; ಲೂಕ 19:45-48; ಯೋಹಾನ 2:13-22)
15 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮನ್ನು ಪ್ರವೇಶಿಸಿದರು. ಅವರು ದೇವಾಲಯದೊಳಗೆ ಬಂದಾಗ ಅಲ್ಲಿ ವಸ್ತುಗಳನ್ನು ಮಾರುತ್ತಿದ್ದ ಮತ್ತು ಕೊಳ್ಳುತ್ತಿದ್ದ ಜನರನ್ನು ಆತನು ಅಲ್ಲಿಂದ ಹೊರಡಿಸತೊಡಗಿದನು; ಹಣ ವಿನಿಮಯಮಾಡಿಕೊಳ್ಳುತ್ತಿದ್ದ ವ್ಯಾಪಾರಿಗಳ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 16 ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುತ್ತಿದ್ದವರನ್ನು ಆತನು ತಡೆದನು. 17 ನಂತರ ಯೇಸು ಜನರಿಗೆ ಉಪದೇಶಿಸಿ, “‘ನನ್ನ ಆಲಯವು ಎಲ್ಲಾ ಜನರಿಗೂ ಪ್ರಾರ್ಥನೆಯ ಆಲಯವೆನಿಸಿಕೊಳ್ಳುವುದು’(A) ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರು ಅಡಗಿಕೊಳ್ಳುವ ಸ್ಥಳವನ್ನಾಗಿ ಮಾಡಿದ್ದೀರಿ’”(B) ಎಂದು ಹೇಳಿದನು.
18 ಮಹಾಯಾಜಕರು ಹಾಗೂ ಧರ್ಮೋಪದೇಶಕರು ಈ ಸಂಗತಿಗಳನ್ನು ಕೇಳಿ ಯೇಸುವನ್ನು ಕೊಲ್ಲಿಸಲು ತಕ್ಕ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸತೊಡಗಿದರು. ಜನರೆಲ್ಲರೂ ಯೇಸುವಿನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಯೇಸುವಿಗೆ ಭಯಪಟ್ಟರು. 19 ಆ ರಾತ್ರಿ ಯೇಸು ಮತ್ತು ಆತನ ಶಿಷ್ಯರು ಪಟ್ಟಣವನ್ನು ಬಿಟ್ಟುಹೋದರು.
Kannada Holy Bible: Easy-to-Read Version. All rights reserved. © 1997 Bible League International