Revised Common Lectionary (Semicontinuous)
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
15 ನನ್ನ ಒಡೆಯನೂ ದೇವರೂ ಇಸ್ರೇಲಿನ ಪರಿಶುದ್ಧನೂ ಹೇಳುವುದೇನೆಂದರೆ, “ನೀವು ನನ್ನ ಕಡೆಗೆ ತಿರುಗಿಕೊಳ್ಳುವುದಾದರೆ ನೀವು ರಕ್ಷಿಸಲ್ಪಡುವಿರಿ. ನೀವು ತಾಳ್ಮೆಯಿಂದ ನನ್ನ ಮೇಲೆ ಭರವಸೆಯಿಟ್ಟರೆ, ನೀವು ಬಲವನ್ನು ಹೊಂದುವಿರಿ.”
ಆದರೆ ಹಾಗೆ ಮಾಡಲು ನಿಮಗೆ ಇಷ್ಟವಿಲ್ಲ. 16 ನೀವು, “ನಮಗೆ ಸಹಾಯ ಬೇಡ. ಓಡಿಹೋಗಲು ಕುದುರೆಗಳು ಬೇಕು” ಎಂದು ಹೇಳುವಿರಿ. ಅದು ಸರಿಯಾದ ಮಾತು. ನೀವು ಕುದುರೆಗಳ ಮೂಲಕವೇ ಓಡುವಿರಿ. ಆದರೆ ಶತ್ರುಗಳು ನಿಮ್ಮನ್ನು ಹಿಂದಟ್ಟುವರು. ಅವರು ನಿಮ್ಮ ಕುದುರೆಗಳಿಗಿಂತ ವೇಗಶಾಲಿಗಳಾಗಿದ್ದಾರೆ. 17 ಶತ್ರುವಿನಲ್ಲಿ ಒಬ್ಬನು ಬೆದರಿಸಿದರೆ ನಿಮ್ಮಲ್ಲಿರುವ ಸಾವಿರ ಮಂದಿ ಓಡುವರು. ಐದು ಮಂದಿ ವೈರಿಗಳು ಬೆದರಿಕೆ ಹಾಕಿದರೆ ನೀವೆಲ್ಲರೂ ಅವರ ಮುಂದಿನಿಂದ ಓಡಿಹೋಗುವಿರಿ. ಕೊನೆಗೆ ನಿಮ್ಮ ಸೈನ್ಯದಲ್ಲಿ ಉಳಿಯುವ ವಸ್ತು ಯಾವದೆಂದರೆ ಬೆಟ್ಟದ ಮೇಲೆ ನೆಟ್ಟಿರುವ ನಿಮ್ಮ ಧ್ವಜಸ್ತಂಭವೊಂದೇ.
ದೇವರು ತನ್ನ ಜನರಿಗೆ ಸಹಾಯ ಮಾಡುವನು
18 ಯೆಹೋವನು ನಿಮಗೆ ಕರುಣೆ ತೋರಿಸಲು ಇಷ್ಟಪಡುತ್ತಾನೆ. ಆತನು ನಿಮ್ಮನ್ನು ಎದುರು ನೋಡುತ್ತಿದ್ದಾನೆ. ಆತನು ಎದ್ದು ನಿಮ್ಮನ್ನು ಸಂತೈಸಲು ಬಯಸುತ್ತಾನೆ. ದೇವರಾದ ಯೆಹೋವನು ನ್ಯಾಯವಂತನಾಗಿದ್ದಾನೆ. ಆತನ ಸಹಾಯವನ್ನು ನಿರೀಕ್ಷಿಸುವವರೆಲ್ಲರೂ ಆಶೀರ್ವದಿಸಲ್ಪಡುವರು.
4 ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. 2 ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. 3 ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ:
“ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು
ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)
ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. 4 ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.”(B) 5 ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ”(C) ವೆಂದೂ ಹೇಳಿದ್ದಾನೆ.
6 ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. 7 ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು:
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(D)
8 ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. 9 ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 10 ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. 11 ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ.
12 ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ. 13 ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ.
Kannada Holy Bible: Easy-to-Read Version. All rights reserved. © 1997 Bible League International