Revised Common Lectionary (Semicontinuous)
ರಚನೆಗಾರರು: ಕೋರಹೀಯರು.
84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
2 ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
3 ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
4 ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
5 ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
6 ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
7 ಜನರು ದೇವರನ್ನು ಸಂದರ್ಶಿಸಲು
ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.
8 ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು
6 ಇಸ್ರೇಲಿನ ಜನರು ಈಜಿಪ್ಟನ್ನು ಬಿಟ್ಟ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ ರಾಜನಾದ ಸೊಲೊಮೋನನು ಇಸ್ರೇಲನ್ನು ಆಳಲಾರಂಭಿಸಿದ ನಾಲ್ಕನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣವು ಆರಂಭಗೊಂಡಿತು. ಅದು ವರ್ಷದ ಎರಡನೆಯ ತಿಂಗಳಾದ ಜೀವ್ (ವೈಶಾಖ) ತಿಂಗಳಲ್ಲಿ ಆರಂಭಗೊಂಡಿತು. 2 ದೇವಾಲಯವು ತೊಂಭತ್ತು ಅಡ್ಡಿ ಉದ್ದ, ಮೂವತ್ತು ಅಡಿ ಅಗಲ ಮತ್ತು ನಲವತ್ತೈದು ಅಡಿ ಎತ್ತರವಾಗಿತ್ತು. 3 ದೇವಾಲಯದ ಮುಂದಿನ ಮಂಟಪವು ಮೂವತ್ತು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲವಾಗಿತ್ತು. ಮುಂದಿನ ಮಂಟಪವು ದೇವಾಲಯದ ಮುಖ್ಯಸ್ಥಳದುದ್ದಕ್ಕೂ ವ್ಯಾಪಿಸಿತ್ತು. ಮಂಟಪದ ಉದ್ದವು ದೇವಾಲಯದ ಅಗಲಕ್ಕೆ ಸಮನಾಗಿತ್ತು. 4 ದೇವಾಲಯದಲ್ಲಿ ಕಿರಿದಾದ ಕಿಟಿಕಿಗಳಿದ್ದವು. ಈ ಕಿಟಕಿಗಳು ಹೊರಗಡೆಯಲ್ಲಿ ಕಿರಿದಾಗಿಯೂ ಮತ್ತು ಒಳಗಡೆ ದೊಡ್ಡದಾಗಿಯೂ ಇದ್ದವು.
21 ಸೊಲೊಮೋನನು ಶುದ್ಧ ಚಿನ್ನದ ತಗಡನ್ನು ಈ ಕೊಠಡಿಗೆ ಹೊದಿಸಿದನು. ಈ ಕೊಠಡಿಯ ಮುಂದೆ ಧೂಪವೇದಿಕೆಯನ್ನು ಅವನು ನಿರ್ಮಿಸಿದನು. ಅವನು ಆ ವೇದಿಕೆಗೆ ಚಿನ್ನದ ಹೊದಿಕೆಯನ್ನೂ ಅದರ ಸುತ್ತಲೂ ಚಿನ್ನದ ಸರಪಣಿಗಳನ್ನೂ ಜೋಡಿಸಿದನು. ಆ ಕೊಠಡಿಯಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳಿದ್ದವು. ಆ ಪ್ರತಿಮೆಗಳಿಗೆ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. 22 ದೇವಾಲಯಕ್ಕೆಲ್ಲ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. ಅಲ್ಲದೆ, ಮಹಾ ಪವಿತ್ರಸ್ಥಳದ ಮುಂದಿನ ಯಜ್ಞವೇದಿಕೆಗೂ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.
10 ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. 11 ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು. 12 ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು. 13 ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು. 14 ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು. 15 ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.
16 ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ. 17 ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.
18 ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು. 19 ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. 20 “ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ”(B) ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 21 ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ. 22 ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ. 23 ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International